ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ನುಗ್ಗಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಅನೇಕ ಫೇಸ್ಬುಕ್, ಎಕ್ಸ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ಹಿಂದೂ ಸಮುದಾಯದ ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಯೋಜನೆಯ ಭಾಗವಾಗಿ ಕೊಲ್ಲಲಾಗಿದೆ ಎಂದು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ನವೆಂಬರ್ 1, 2024 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದೆಲ್ಲ ಈ ಜಿಹಾದಿಗಳ ಪ್ಲಾನ್. ಹಿಂದೂಗಳು ಮತ್ತು ಹಿಂದೂಗಳ ಸಹೋದರಿಯರು ಮತ್ತು ಹಿಂದೂಗಳ ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ, ಇದು ಅಪಘಾತ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಈ ವೀಡಿಯೋ ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ, ಆದರೆ ಹೆಣ್ಣಿನ ಮೇಲೆ ವಾಹನಗಳನ್ನು ಓಡಿಸುವ ಉದ್ದೇಶವೂ ಅದೇ, ಈ ಮುಸ್ಲಿಂ ಯುವಕರು ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದಾರೆ. ಹಿಂದೂಗಳು ಶಾಂತಿಯುತವಾಗಿ ಮೇಣದ ಬತ್ತಿಗಳನ್ನು ಬೆಳಗಿಸುವುದು ಬಿಟ್ಟು ಬೇರೇನೂ ಮಾಡಲ್ಲ ಅಂತ ಅವರಿಗೂ ಗೊತ್ತು’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಎಕ್ಸ್ ಬಳಕೆದಾರರೊಬ್ಬರು, ‘‘ಜಿಹಾದಿಗಳ ಪಿತೂರಿ ಅರಿಯದೆ ನಾವು ಮೋಸ ಹೋಗುತ್ತಿದ್ದೇವೆ. ಹಿಂದೂ ಹೆಣ್ಣುಮಕ್ಕಳನ್ನು ಆ್ಯಕ್ಸಿಡೆಂಟ್ ಮೂಲಕ ಕೊಲ್ಲಲಾಗುತ್ತಿದೆ, ಇದು ಅಪಘಾತ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಎಚ್ಚೆತ್ತು ಕೊಳ್ಳಿ ಹಿಂದೂ ಬಾಂಧವರೆ’’ ಎಂದು ಬರೆದು ಇದೇ ವೀಡಿಯೊ ಅಪ್ಲೋಡ್ ಮಾಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ. ಇಬ್ಬರು ಹುಡುಗಿಯರ ಮೇಲೆ ಕಾರು ಹತ್ತಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆತ ಹಿಂದೂ ಆಗಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ್ದೇವೆ. ಈ ಸಂದರ್ಭ ಈ ಘಟನೆಯ ಬಗ್ಗೆ ಎಬಿಪಿ ನ್ಯೂಸ್, ಎನ್‌ಬಿಟಿ ಮತ್ತು ಟಿವಿ-9 ಭಾರತವರ್ಷ ಅಕ್ಟೋಬರ್ 29, 2024 ರಂದು ಸುದ್ದಿ ಪ್ರಕಟಿಸಿರುವುದು ನಮಗೆ ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಈ ಘಟನೆಯಲ್ಲಿ ಆರೋಪಿ ಕಾರು ಚಾಲಕನ ಹೆಸರನ್ನು ತುಷಾರ್ ಅಗರ್ವಾಲ್ ಎಂದು ಉಲ್ಲೇಖಿಸಲಾಗಿದೆ.
‘‘ಇಂದೋರ್‌ನ ಜೈಭವಾನಿ ನಗರದಲ್ಲಿ ಇಬ್ಬರು ಹುಡುಗಿಯರು ನವ್ಯಾ ಪ್ರಜಾಪತ್ ಮತ್ತು ಪ್ರಿಯಾಂಶು ತಮ್ಮ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದರು. ಅಷ್ಟರಲ್ಲಿ ಕಾರು ಚಾಲಕನೊಬ್ಬ ಅತಿವೇಗದಲ್ಲಿ ಬಂದು ಬಾಲಕಿಯರ ಮೇಲೆ ಕಾರು ಚಲಾಯಿಸಿದ್ದಾನೆ. ಕಾರಿನ ಸಂಖ್ಯೆ MP 09 ZW 7287 ಆಗಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರು ಮಾಲೀಕನ ಹೆಸರು ತುಷಾರ್ ಅಗರ್ವಾಲ್, ಅವರು ಹುಕುಮಚಂದ್ ಕಾಲೋನಿ ನಿವಾಸಿ. ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದರೂ ನಂತರ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ’’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ANI ಸುದ್ದಿ ಮಾಧ್ಯಮ ತನ್ನ ಎಕ್ಸ್ ಖಾತೆಯಲ್ಲಿ ಈ ಘಟನೆಯ ಕುರಿತು ಇಂದೋರ್ ವಲಯ-1 ಡಿಸಿಪಿ ವಿನೋದ್ ಕುಮಾರ್ ಮೀನಾ ಅವರ ಹೇಳಿಕೆಯನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಆರೋಪಿಯನ್ನು ತುಷಾರ್ ಅಗರ್ವಾಲ್ ಎಂದು ಬಣ್ಣಿಸಿದ್ದಾರೆ.
ಹೀಗಾಗಿ ಇಂದೋರ್ ಕಾರು ಅಪಘಾತದಲ್ಲಿ ಯಾವುದೇ ಕೋಮು ಕೋನವಿಲ್ಲ ಎಂದು ನ್ಯೂಸ್ ಮೀಟರ್ ತನಿಖೆಯಿಂದ ಕಂಡುಬಂದಿದೆ. ಘಟನೆ ಸಂಬಂಧ ಕಾರು ಚಾಲಕ ತುಷಾರ್ ಅಗರ್‌ವಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.