Fact Check: ಬಾಂಗ್ಲಾದಲ್ಲಿ ಇಸ್ಕಾನ್ ಗೋ ಶಾಲೆಗೆ ನುಗ್ಗಿ ಯಾವುದೇ ದಾಳಿ ನಡೆದಿಲ್ಲ: ಸತ್ಯಾಂಶ ಇಲ್ಲಿದೆ
ಕೆಲ ಯುವಕರು ದೊಣ್ಣೆಯಿಂದ ಹಸುಗಳಿಗೆ ಹೊಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ. ಬಾಂಗ್ಲಾದೇಶದ ಇಸ್ಕಾನ್ ಗೋಶಾಲಾದಲ್ಲಿ ಜಿಹಾದಿಗಳು ದನಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
By Vinay Bhat Published on 8 Dec 2024 9:50 PM ISTClaim: ಬಾಂಗ್ಲಾದೇಶ ಇಸ್ಕಾನ್ ದೇವಸ್ಥಾನದ ಗೋ ಶಾಲೆಗೆ ನುಗ್ಗಿ ಗೋವುಗಳ ಮೇಲೆ ದಾಳಿ ಮಾಡಿದ ವೀಡಿಯೊ ಇದು.
Fact: ಈ ಹಕ್ಕು ಸುಳ್ಳಾಗಿದೆ. ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಘಟನೆ ಇದಾಗಿದೆ.
ಇಸ್ಕಾನ್ ಪ್ರತಿನಿಧಿ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಾಂಗ್ಲಾದೇಶದಲ್ಲಿ ನವೆಂಬರ್ 25 ರಂದು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ನಡೆದ ರ್ಯಾಲಿಯಲ್ಲಿ ದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕಾಗಿ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ಹೇಳಿಕೊಂಡಿವೆ.
ಈ ಹಿನ್ನಲೆಯಲ್ಲಿ ಕೆಲ ಯುವಕರು ದೊಣ್ಣೆಯಿಂದ ಹಸುಗಳಿಗೆ ಹೊಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ. ಬಾಂಗ್ಲಾದೇಶದ ಇಸ್ಕಾನ್ ಗೋಶಾಲಾದಲ್ಲಿ ಜಿಹಾದಿಗಳು ದನಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೋವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶ ಇಸ್ಕಾನ್ ದೇವಸ್ಥಾನದ ಗೋ ಶಾಲೆಗೆ ನುಗ್ಗಿ ಗೋವು ಗಳ ಮೇಲೆ ದಾಳಿ ಮಾಡಿದ ವಿಡಿಯೋ ಇದು’’ ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ಮತ್ತೋರ್ವ ಬಳಕೆದಾರ ‘‘ಈ ವಿಡಿಯೋ ಇದೀಗ ಬಾಂಗ್ಲಾದೇಶದಲ್ಲಿರುವ ಜಿಹಾದಿ ಗ್ಯಾಂಗ್‌ಗಳದ್ದು. ಜಿಹಾದಿ ಗ್ಯಾಂಗ್ ಇಸ್ಕಾನ್ ಗೋಶಾಲೆಗೆ ನುಗ್ಗಿ ಗೋವುಗಳ ಮೇಲೆ ದಾಳಿ ಮಾಡುವ ವಿಡಿಯೋ’’ ಎಂದಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಈ ಹೇಳಿಕೆಗಳು ಸುಳ್ಳೆಂದು ಕಂಡುಬಂದಿದೆ. ಈ ಘಟನೆಯು ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿದೆ.
ವೀಡಿಯೊ ಕೀ ಫ್ರೇಮ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ನವೆಂಬರ್ 19 ರಂದು ಜರ್ನಲಿಸ್ಟ್ ಫೈಸಲ್ ಎಂಬ ಎಕ್ಸ್ ಬಳಕೆದಾರ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇದಕ್ಕೆ "ಧ್ವನಿಯಿಲ್ಲದವರನ್ನು ನಿರ್ದಯವಾಗಿ ಹೊಡೆಯಲಾಗುತ್ತದೆ... ಕ್ರೂರ ಮುಖಗಳನ್ನು ಗುರುತಿಸಿ ಮತ್ತು ಶಿಕ್ಷಿಸಿ..." ಎಂದು ಬರೆದಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪೇಟಾ ಇಂಡಿಯಾ, ‘‘ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 325 ರ ಅಡಿಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (ಪಿಸಿಎ) ಸೆಕ್ಷನ್ 11 ರ ಅಡಿಯಲ್ಲಿ ಸದರ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಗೋಹತ್ಯೆ ತಡೆ ಕಾಯ್ದೆಯ (1955) ನಿಬಂಧನೆಗಳನ್ನು ಸೇರಿಸಲು ಪೊಲೀಸರು (ಡಿಸಿಪಿ) ರೊಂದಿಗೆ ಮಾತನಾಡುತ್ತಿದ್ದೇವೆ’’ ಎಂದು ಹೇಳಿದ್ದಾರೆ.
ಪೇಟಾ ಇಂಡಿಯಾದ ಪ್ರತಿಕ್ರಿಯೆಯನ್ನು ಆಧರಿಸಿ, ಈ ಘಟನೆ ಭಾರತದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಕೀವರ್ಡ್ ಹುಡುಕಾಟದ ಮೂಲಕ, ಈ ಘಟನೆಯ ಬಗ್ಗೆ ಖಬ್ರಿಸ್ತಾನ್ ಪಂಜಾಬಿ ಬರೆದ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಈ ಲೇಖನದ ಪ್ರಕಾರ, ವೈರಲ್ ವೀಡಿಯೊದಲ್ಲಿ ಕಂಡುಬರುವ ಘಟನೆಯು ಪಂಜಾಬ್‌ನ ಜಲಂಧರ್‌ನಲ್ಲಿರುವ ಹಾಲಿನ ಸಂಕೀರ್ಣದಲ್ಲಿ ನಡೆದಿದೆ. ಈ ಲೇಖನದಲ್ಲಿ ವೈರಲ್ ವೀಡಿಯೊದಿಂದ ತೆಗೆದ ಸ್ಕ್ರೀನ್‌ಶಾಟ್ ಕೂಡ ಇದೆ.
ಘಟನೆಯ ಕುರಿತು ದಿ ಟ್ರಿಬ್ಯೂನ್ ನವೆಂಬರ್ 20 ರಂದು ಮಾಡಿರುವ ವರದಿಯ ಪ್ರಕಾರ, "ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊವನ್ನು ನೋಡಿದ ನಂತರ, ಶ್ರೀಸ್ಟ್ ಬಕ್ಷಿ ನೇತೃತ್ವದ ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್, ನಗರದ ನಿವಾಸಿಗಳು ಅಧಿಕಾರಿಗಳಿಂದ ಕ್ರಮಕ್ಕೆ ಒತ್ತಾಯಿಸಿದರು" ಎಂದು ಬರೆಯಲಾಗಿದೆ. ಅವರು ಪಿಪಿಆರ್ ಮಾಲ್‌ನ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ಜಮ್ಶಾರ್ ಪೊಲೀಸ್ ಠಾಣೆಗೆ ಹೋದರು. ಈ ಘಟನೆಗೆ ಕಾರಣರಾದವರು ಹಾಗೂ ಡೈರಿ ಫಾರ್ಮ್ ಮಾಲೀಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು ಟ್ರಿಬ್ಯೂನ್ ಬರೆದಿದೆ.
ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್‌ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾದ ಎಫ್‌ಐಆರ್‌ನ ಫೋಟೋಗಳನ್ನು ಸಹ ನೋಡಬಹುದು.
ಜಲಂಧರ್‌ನಲ್ಲಿರುವ ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್‌ನ ಯುವಿ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿದರು. "ಪಂಜಾಬ್‌ನ ಜಲಂಧರ್‌ನಲ್ಲಿರುವ ಜಮ್ಷರ್ ಡೈರಿ ಕಾಂಪ್ಲೆಕ್ಸ್‌ನಲ್ಲಿ ಈ ಘಟನೆ ನಡೆದಿದೆ. ಗೂಳಿಗಳನ್ನು ಹೊಡೆದವರು ಬೇರೆ ರಾಜ್ಯಗಳ ವಲಸಿಗರಾಗಿರಬಹುದು. ಇದರಲ್ಲಿ ಯಾವುದೇ ಧಾರ್ಮಿಕ ಆಯಾಮವಿಲ್ಲ. ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರವಷ್ಟೆ ಆರೋಪಿಗಳನ್ನು ಪತ್ತೆ ಮಾಡಲಾಗುವುದು,’’ ಎಂದರು.
ಈ ಮೂಲಕ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಘಟನೆ ವೈರಲ್ ವೀಡಿಯೊದಲ್ಲಿ ಕಂಡುಬರುವುದು ಖಚಿತವಾಗಿದೆ. ಘಟನೆಗೆ ಯಾವುದೇ ಧಾರ್ಮಿಕ ಆಯಾಮವಿಲ್ಲ ಮತ್ತು ಇದು ಬಾಂಗ್ಲಾದೇಶದಲ್ಲಿ ನಡೆದಿದೆ ಎಂಬ ಹೇಳಿಕೆ ಸುಳ್ಳು ಎಂಬುದು ನಮ್ಮ ತನಿಖೆಯಿಂದ ಕಂಡುಬಂದಿದೆ.