Fact Check: ಇದು ಮಾಲ್ಡಾದಲ್ಲಿ ಹಿಂದೂಗಳ ಮೇಲೆ ದಾಳಿಯ ವೀಡಿಯೊ ಅಲ್ಲ, ನಿಜಾಂಶ ಇಲ್ಲಿದೆ
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧ ಕಲ್ಪಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕೆಲವರು ವಾಹನಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚುವುದನ್ನು ಕಾಣಬಹುದು.
By Vinay Bhat
Claim:ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಹಿಂದೂಗಳ ಮೇಲೆ ದಾಳಿ.
Fact:ಹಕ್ಕು ಸುಳ್ಳು. ಈ ವೀಡಿಯೊ ಪಶ್ಚಿಮ ಬಂಗಾಳದ್ದೂ ಅಲ್ಲ ಅಥವಾ ಭಾರತದದ್ದೂ ಅಲ್ಲ, ಇದು ಬಾಂಗ್ಲಾದೇಶದ ಸಿಲ್ಹೆಟ್ ನಗರದಿಂದ ಬಂದಿದೆ.
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧ ಕಲ್ಪಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕೆಲವರು ವಾಹನಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಹಿಂದೂಗಳ ಮೇಲಿನ ದಾಳಿ ಎಂದು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಮಾರ್ಚ್ 28, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಭಾರತ ತುಂಬಾ ಈ ರೀತಿ ಆದಮೇಲೆ ಪ್ರಧಾನಿ ಮೋದಿ ಅಮಿತ್ ಷಾ ಕ್ರಮ ತೆಗೆದು ಕೊಳ್ಳುತಾರೆ ಅಲ್ಲಿಯವರಿಗೆ ಹಿಂದೂಗಳು ಕಾಯಬೇಕು’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಪಶ್ಚಿಮ ಬಂಗಾಳದ್ದೂ ಅಲ್ಲ ಅಥವಾ ಭಾರತದದ್ದೂ ಅಲ್ಲ, ಇದು ಬಾಂಗ್ಲಾದೇಶದ ಸಿಲ್ಹೆಟ್ ನಗರದಿಂದ ಬಂದಿದೆ.
ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ನವೆಂಬರ್ 27, 2023 ರಂದು ಬಾಂಗ್ಲಾದೇಶ ಮೂಲದ ಮಾಧ್ಯಮ ಸಂಸ್ಥೆ ಪ್ರೋಥೋಮ್ ಅಲೋ ಪ್ರಕಟಿಸಿದ ವಿಸ್ತೃತ ಆವೃತ್ತಿ ನಮಗೆ ಕಂಡುಬಂತು. ಬಂಗಾಳಿ ಶೀರ್ಷಿಕೆಯು ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ದಿಗ್ಬಂಧನವನ್ನು ಬೆಂಬಲಿಸಿ ಟಾರ್ಚ್ ರ್ಯಾಲಿ ಮತ್ತು ವಾಹನ ಧ್ವಂಸವನ್ನು ಚಿತ್ರಿಸುತ್ತದೆ ಎಂದು ಸೂಚಿಸುತ್ತದೆ.
ಈ ಮಾಹಿತಿಯ ಆಧಾರದ ಮೇಲೆ, ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ನವೆಂಬರ್ 27, 2023 ರ ಡೈಲಿ ಸಿಲ್ಹೆಟ್ ಮಿರರ್ ವರದಿಯನ್ನು ಕಂಡುಕೊಂಡೆವು, ಅದು ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿದೆ.
ವರದಿಯ ಪ್ರಕಾರ, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಮತ್ತು ಮಿತ್ರಪಕ್ಷಗಳು ಕರೆ ನೀಡಿದ್ದ 48 ಗಂಟೆಗಳ ದಿಗ್ಬಂಧನದ ಸಂದರ್ಭದಲ್ಲಿ ಸಿಲ್ಹೆಟ್‌ನ ಸುಬಿದ್‌ಬಜಾರ್ ಪ್ರದೇಶದಲ್ಲಿ ನಡೆದ ಪಂಜಿನ ರ್ಯಾಲಿ ಹಿಂಸಾತ್ಮಕವಾಗಿ ಮಾರ್ಪಟ್ಟಿತು. ಪ್ರತಿಭಟನಾಕಾರರು ವಾಹನಗಳನ್ನು ಧ್ವಂಸಗೊಳಿಸಿದರು ಮತ್ತು ರಿಕ್ಷಾಗಳು, ಆಂಬ್ಯುಲೆನ್ಸ್‌ಗೆ ಬೆಂಕಿ ಹಚ್ಚಿದರು, ಇದು ಸ್ಥಳೀಯರಲ್ಲಿ ಭೀತಿಯನ್ನು ಉಂಟುಮಾಡಿತು ಎಂಬ ಮಾಹಿತಿ ಇದೆ.
ಹಾಗೆಯೆ ನವೆಂಬರ್ 26, 2023 ರ ಢಾಕಾ ಟ್ರಿಬ್ಯೂನ್ ವರದಿಯ ಪ್ರಕಾರ, ವಿರೋಧ ಪಕ್ಷದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಮತ್ತು ಅದರ ಮಿತ್ರ ಗುಂಪುಗಳು ಆಡಳಿತಾರೂಢ ಅವಾಮಿ ಲೀಗ್ ಸರ್ಕಾರವನ್ನು ರಾಜೀನಾಮೆ ನೀಡುವಂತೆ ಮತ್ತು ಪಕ್ಷಾತೀತ ಆಡಳಿತದಡಿಯಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ನಡೆಸುವಂತೆ ಒತ್ತಡ ಹೇರಲು ಆರು ಹಂತಗಳಲ್ಲಿ ದಿಗ್ಬಂಧನಗಳನ್ನು ನಡೆಸಿದವು. ಬೀದಿ ಪ್ರತಿಭಟನೆಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಕಡಿಮೆ ಇದ್ದರೂ, ದಿಗ್ಬಂಧನವು ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದ ಘಟನೆಗಳಿಂದ ಗುರುತಿಸಲ್ಪಟ್ಟಿದೆ ಎಂದು ವರದಿಯು ಹೇಳುತ್ತದೆ.
ಮಾರ್ಚ್ 28, 2025 ರಂದು ಪಶ್ಚಿಮ ಬಂಗಾಳ ಪೊಲೀಸರ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ನಮಗೆ ಸ್ಪಷ್ಟೀಕರಣ ಸಿಕ್ಕಿದೆ. ವೈರಲ್ ವೀಡಿಯೊ ನವೆಂಬರ್ 2023 ರಲ್ಲಿ ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ನಡೆದ ಘಟನೆಗಳನ್ನು ತೋರಿಸುತ್ತದೆ ಮತ್ತು ಮಾಲ್ಡಾದಲ್ಲಿ ನಡೆದ ಘಟನೆಗೆ ಯಾವುದೇ ಸಂಬಂಧವಿಲ್ಲ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಮಾಲ್ಡಾದಲ್ಲಿ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬರೆಯಲಾಗಿದೆ.
The attached video of arson and vandalism is being circulated on social media from certain quarters as an incident of Malda district. This claim is completely FAKE. This video captures events of November, 2023 in Sylhet region of Bangladesh and has no connection whatsoever with… pic.twitter.com/5IlmqcFUWO
— West Bengal Police (@WBPolice) March 28, 2025
ಆದ್ದರಿಂದ, ಈ ವೀಡಿಯೊ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ಹಿಂಸಾಚಾರವನ್ನು ತೋರಿಸುವುದಿಲ್ಲ ಅಥವಾ ಹಿಂದೂಗಳ ಮೇಲೆ ದಾಳಿಗೆ ಸಂಬಂದಿಸಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ.