Fact Check: ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆ ಹಾಗೂ ಪ್ರೊಮೋ ಎಂದು ಹಿಂದಿ ಬಿಗ್ ಬಾಸ್ ಮನೆಯ ವೀಡಿಯೊ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಬಿಗ್ ಬಾಸ್ ಶೋನ ಮನೆಯನ್ನು ಕಾಣಬಹುದು. ಇದನ್ನು ಕೆಲ ಬಳಕೆದಾರರು, ಇದು ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆ ಎಂದರೆ ಇನ್ನೂ ಕೆಲವರು ಇದು ಬಿಬಿಕೆ 12ರ ಪ್ರೊಮೋ ಎಂದು ಹಂಚಿಕೊಳ್ಳುತ್ತಿದ್ದಾರೆ.
By Vinay Bhat
Claim:ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರೊಮೋವನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಬಿಗ್ ಬಾಸ್ ಹಿಂದಿ ಸೀಸನ್ 18ರ ಮನೆಯ ವೀಡಿಯೊ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಮುಂದಿನ ತಿಂಗಳು ಸೆಪ್ಟೆಂಬರ್ ಕೊನೆಯಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡ ವಾಹನಿ ಬಿಬಿಕೆ 12 ನ ಹೊಸ ಲೋಗೋ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಬಿಗ್ ಬಾಸ್ ಶೋನ ಮನೆಯನ್ನು ಕಾಣಬಹುದು. ಇದನ್ನು ಕೆಲ ಬಳಕೆದಾರರು, ಇದು ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆ ಎಂದರೆ ಇನ್ನೂ ಕೆಲವರು ಇದು ಬಿಬಿಕೆ 12ರ ಪ್ರೊಮೋ ಎಂದು ಹಂಚಿಕೊಳ್ಳುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಿಗ್ ಬಾಸ್ ಸೀಸನ್ 12ರ ಮೂರನೇ ಪ್ರೊಮೋ ಬಂದಿದೆ. ಕಲರ್ಸ್ ಕನ್ನಡ ಚಾನೆಲ್ನಲ್ಲಿ ಇವತ್ತು ಬಿಡುಗಡೆ ಆಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರೊಮೋ ಅಲ್ಲ, ಬದಲಾಗಿ ಇದು ಬಿಗ್ ಬಾಸ್ ಹಿಂದಿ ಸೀಸನ್ 18ರ ಮನೆಯ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ನಲ್ಲಿ ಕೀವರ್ಡ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಪ್ರೊಮೋ ಬಿಡುಗಡೆ ಬಗ್ಗೆ ಯಾವುದೇ ಸುದ್ದಿ ಸಂಸ್ಥೆ ವರದಿ ಮಾಡಿರುವುದು ನಮಗೆ ಕಂಡುಬಂದಿಲ್ಲ. ಬದಲಾಗಿ ಆಗಸ್ಟ್ 15 ರಂದು ವಿಜಯ ಕರ್ನಾಟಕ ಪ್ರಕಟಿಸಿರುವ ವರದಿಯಲ್ಲಿ ‘‘ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮದ ಲೋಗೋ ಅನಾವರಣಗೊಂಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಲೋಗೋ ಲಾಂಚ್ ಮಾಡಲಾಗಿದೆ.’’ ಎಂಬ ಮಾಹಿತಿ ಸಿಕ್ಕಿತು. ಲೋಗೋದಲ್ಲಿ ಕಣ್ಣಿನ ಚಿತ್ರದ ಜೊತೆಗೆ 12 ಎಂದು ಬರೆದಿರುವುದು ಇದೆ.
ಬಳಿಕ ನಾವು ಈ ಬಾರಿ ಬಿಗ್ ಬಾಸ್ ಪ್ರಸಾರವಾಗುವ ಕಲರ್ಸ್ ಕನ್ನಡದ ಸಾಮಾಜಿಕಮಾಧ್ಯಮ ಖಾತೆಯನ್ನು ಪರಿಶೀಲಿಸಿದ್ದೇವೆ. ಇದರಲ್ಲಿ ಎಲ್ಲೂ ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರೊಮೋ ಬಿಡುಗಡೆ ಆದ ಬಗ್ಗೆ ಮಾಹಿತಿ ಇಲ್ಲ.
ಇನ್ನಷ್ಟು ಖಚಿತ ಮಾಹಿತಿಗಾಗಿ ನ್ಯೂಸ್ ಮೀಟರ್ ಕಲರ್ಸ್ ಕನ್ನಡ ವಾಹಿನಿಯನ್ನು ಸಂಪರ್ಕಿಸಿದೆ. ಅವರು ನೀಡಿರುವ ಮಾಹಿತಿಯ ಪ್ರಕಾರ, ‘‘ಬಿಗ್ ಬಾಸ್ ಕನ್ನಡ 12ರ ಪ್ರೊಮೋ ಇನ್ನೂ ಬಿಡುಗಡೆ ಆಗಿಲ್ಲ. ಸದ್ಯಕ್ಕೆ ಲೋಗೋ ಅಷ್ಟೇ ಲಾಂಚ್ ಮಾಡಿದ್ದೇವೆ.. ಕೆಲ ವಾರಗಳಲ್ಲಿ ಪ್ರೊಮೋ ಬಿಡುಗಡೆ ಆಗಲಿದೆ’’ ಎಂದು ನ್ಯೂಸ್ ಮೀಟರ್ಗೆ ಹೇಳಿದ್ದಾರೆ.
ಹೀಗಾಗಿ ಇದು ಬಿಗ್ ಬಾಸ್ ಕನ್ನಡ 12ರ ಪ್ರೊಮೋ ಅಲ್ಲ ಎಂಬುದು ಖಚಿತವಾಯಿತು. ಬಳಿಕ ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ Indian reality shows official ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಕ್ಟೋಬರ್ 5, 2024 ರಂದು ವೈರಲ್ ವೀಡಿಯೊದಲ್ಲಿರುವ ಫೋಟೋವನ್ನು ಹಂಚಿಕೊಂಡಿರುವುದು ಸಿಕ್ಕಿತು. ಬಿಗ್ ಬಾಸ್ 18 ಹಿಂದಿ ಮನೆ ಎಂಬ ಮಾಹಿತಿ ಇದರಲ್ಲಿದೆ.
ಈ ಮಾಹಿತಿಯ ಆಧಾರದ ಮೇಲೆ ಗೂಗಲ್ನಲ್ಲಿ ಹುಡುಕಿದಾಗ ವೈರಲ್ ವೀಡಿಯೊದಲ್ಲಿರುವ ಕ್ಲಿಪ್ನೊಂದಿಗೆ ಟಿವಿ9 ಹಿಂದಿ ಅಕ್ಟೋಬರ್ 5, 2024 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ‘‘ಬಿಗ್ ಬಾಸ್ 18 ಪ್ರಾರಂಭವಾಗುವ ಮೊದಲು, ಟಿವಿ9 ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಸಿಕ್ಕಿತು ಮತ್ತು ಅಲ್ಲಿ ನಾವು ಪ್ರತಿ ವರ್ಷ ದೇಶದ ಅತಿದೊಡ್ಡ ರಿಯಾಲಿಟಿ ಶೋಗಾಗಿ ಸೆಟ್ ನಿರ್ಮಿಸುವ ಸೆಟ್ ಡಿಸೈನರ್ ಓಮಂಗ್ ಕುಮಾರ್ ಅವರೊಂದಿಗೆ ಮಾತನಾಡಿದ್ದೇವೆ. ಸಾಮಾನ್ಯವಾಗಿ ಬಿಗ್ ಬಾಸ್‌ನಲ್ಲಿ ಆಫ್ರಿಕಾದ ಕಾಡುಗಳು ಮತ್ತು ಯುರೋಪಿನ ನೋಟವನ್ನು ತೋರಿಸುವ ಓಮಂಗ್ ಕುಮಾರ್, ಈ ವರ್ಷ ಸಲ್ಮಾನ್ ಖಾನ್ ಅವರ ಕಾರ್ಯಕ್ರಮದ ಸೆಟ್ ಅನ್ನು ಸಂಪೂರ್ಣವಾಗಿ ದೇಸಿ ಶೈಲಿಯಲ್ಲಿ ನಿರ್ಮಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
ಇಂಡಿಯನ್ ಎಕ್ಸ್ಪ್ರೆಸ್ ಆಕ್ಟೋಬರ್ 5, 2024 ರಂದು ವೈರಲ್ ವೀಡಿಯೊಕ್ಕೆ ಹೋಲಿಕೆ ಆಗುವ ಅದೇ ವೀಡಿಯೊವನ್ನು ಬೇರೆ ಆ್ಯಂಗಲ್ನಿಂದ ಚಿತ್ರಕರಣ ನಡೆಸಿದ್ದು, ಇದರಲ್ಲಿ ಕೂಡ ಇದು ಬಿಗ್ ಬಾಸ್ ಹಿಂದಿ 18ರ ಮನೆ ಎಂಬ ಮಾಹಿತಿ ಇದೆ.