Fact Check: ಟೋಲ್ ಕಾರ್ಮಿಕರ ಮೇಲೆ ಮುಸ್ಲಿಮರು ಹಲ್ಲೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿರುವ ವೀಡಿಯೊ ಭಾರತದ್ದಲ್ಲ

ಈ ವೀಡಿಯೊಕ್ಕು ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಇದು ಬಾಂಗ್ಲಾದೇಶದ ಢಾಕಾದ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಕುರಿಲ್ ಟೋಲ್ ಪ್ಲಾಜಾದಲ್ಲಿ ನಡೆದ ಘಟನೆಯ ವೀಡಿಯೊ ಆಗಿದೆ.

By Vinay Bhat  Published on  22 Sept 2024 9:57 AM IST
Fact Check: ಟೋಲ್ ಕಾರ್ಮಿಕರ ಮೇಲೆ ಮುಸ್ಲಿಮರು ಹಲ್ಲೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿರುವ ವೀಡಿಯೊ ಭಾರತದ್ದಲ್ಲ
Claim: ಚಂಡಿಗಢ್ ಟೋಲ್ ಪ್ಲಾಜಾದಲ್ಲಿ ಮುಸ್ಲಿಮರು ಗೇಟ್ ಮುರಿದು ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ್ದಾರೆ.
Fact: ಅನುಮತಿ ಇಲ್ಲದಿದ್ದರೂ ಟೆಂಪೋ ಒಂದು ನಿಯಮ ಮೀರಿ ಬಂದಿದ್ದಕ್ಕೆ ಢಾಕಾದ ಎಲಿವೇಟೆಡ್ ರಸ್ತೆಯಲ್ಲಿ ಗಲಾಟೆ ನಡೆದಿದೆ.

ಟೋಲ್ ಪ್ಲಾಜಾದಲ್ಲಿ ಗಲಾಟೆ ನಡೆಯುತ್ತಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಟೋಲ್ ಸಂಗ್ರಹದ ಗೇಟ್​ನ ಎದುರು ನಿಂತಿರುವ ಟೆಂಪೋದಲ್ಲಿ ಅನೇಕರು ಜನರನ್ನು ಕಾಣಬಹುದು. ಇದರಲ್ಲಿ ಒಬ್ಬರು ಟೋಲ್ ಕಾರ್ಮಿಕರ ಬಳಿ ಬಂದು ಜಗಳ ಮಾಡುತ್ತಿದ್ದಾರೆ. ನಂತರ ಟೋಲ್ ಗೇಟ್ ಮುರಿಯುವಂತೆ ಬದಿಗೆ ಸರಿಸಿ ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾರೆ.

ಚಂಡೀಗಡದಲ್ಲಿ ಈ ಘಟನೆ ನಡೆದಿದೆ ಎಂದು ಸಾಮಾಜಿಕ ತಾಣಗಳಲ್ಲಿ ವೀಡಿಯೊ ಹರಿದಾಡುತ್ತಿದೆ. ಜೊತೆಗೆ ಬಳಕೆದಾರರು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿ ಇವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ನಾಗರಾಜ್ ಕೋಡಿ ಎಂಬವರು ಸೆಪ್ಟೆಂಬರ್ 20, 2024 ರಂದು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘‘ಇಂದು ಚಂಡಿಗಢ್ ಟೋಲ್ ಪ್ಲಾಜಾದಲ್ಲಿ ಇವರು ಇವರ ಪೌರುಷ ತೋರಿಸಿದರು...’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಗಣೇಶ್ ಎಮ್ ಎಂಬವರು ಎಕ್ಸ್​ನಲ್ಲಿ ಇದೇ ವೀಡಿಯೊ ಹಂಚಿಕೊಂಡಿದ್ದು, ‘‘ಭಾರತ ಈಗ ಹೆಚ್ಚು ಜಿಹಾದಿಗಳು ಕೇಂದ್ರಿತವಾಗುತ್ತಿದೆ. ಕಳಪೆ ಕಾನೂನು ಜಾರಿ ಇದಕ್ಕೆ ಮುಖ್ಯ ಕಾರಣ’’ ಎಂದು ಬರೆದು ಪ್ರಧಾನಿ ಮೋದಿ, ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಕ್ಕು ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಇದು ಬಾಂಗ್ಲಾದೇಶದ ಢಾಕಾದ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಕುರಿಲ್ ಟೋಲ್ ಪ್ಲಾಜಾದಲ್ಲಿ ನಡೆದ ಘಟನೆಯ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್​ನಲ್ಲಿ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಆಗ ಈ ವೀಡಿಯೊವನ್ನು ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ ಜಮುನಾಟಿವಿ ಸೆಪ್ಟೆಂಬರ್ 18, 2024 ರಂದು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ‘ಢಾಕಾದ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಕುರಿಲ್ ಟೋಲ್ ಪ್ಲಾಜಾದಲ್ಲಿ ವಿಧ್ವಂಸಕ ಘಟನೆ’ ಎಂದು ವೀಡಿಯೊದಲ್ಲಿ ಹೇಳಲಾಗಿದೆ.

ಈ ಮಾಹಿತಿ ಆಧಾರದ ಮೇರೆಗೆ ನಾವು ಗೂಗಲ್​ನಲ್ಲಿ ‘dhaka kuril toll plaza’ ಎಂದು ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಬಾಂಗ್ಲಾದೇಶದ ಅನೇಕ ಮಾಧ್ಯಮಗಳು ಈ ಘಟನೆಯ ಕುರಿತು ಸುದ್ದಿ ಮಾಡಿರುವುದು ನಮಗೆ ಸಿಕ್ಕಿದೆ. Dhaka Tribune ಸೆಪ್ಟೆಂಬರ್ 18, 2024 ರಂದು ಪ್ರಕಟಿಸಿದ ವರದಿಯಲ್ಲಿ ಹೀಗಿದೆ:

‘‘ಢಾಕಾ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿನ ಕುರಿಲ್ ಟೋಲ್ ಪ್ಲಾಜಾದ ಬ್ಯಾರಿಕೇಡ್ ಅನ್ನು ದುಷ್ಕರ್ಮಿಗಳು ಪಿಕಪ್ ವ್ಯಾನ್ ಹೋಗಲು ಧ್ವಂಸಗೊಳಿಸಿದ್ದಾರೆ. ಘಟನೆ ಬೆಳಗ್ಗೆ 9:48ಕ್ಕೆ ನಡೆದಿದೆ. ಪಿಕಪ್ ವ್ಯಾನ್‌ನಲ್ಲಿ ಸುಮಾರು 30-40 ಜನರು ಪ್ರಯಾಣಿಸುತ್ತಿದ್ದರು. ಅಪಘಾತದ ಮುನ್ನೆಚ್ಚರಿಕೆಗಾಗಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಪಿಕಪ್ ವ್ಯಾನ್‌ಗಳು, ಮೋಟಾರ್‌ಸೈಕಲ್‌ಗಳು, ಸಿಎನ್‌ಜಿಗಳು ಮತ್ತು ರಿಕ್ಷಾಗಳನ್ನು ಅನುಮತಿಸಲಾಗುವುದಿಲ್ಲ. ಆದಾಗ್ಯೂ, ಪಿಕಪ್ ವ್ಯಾನ್‌ನಲ್ಲಿರುವ ಜನರು ಈ ನಿಯಮವನ್ನು ಮೀರಿ ಬಂದಿದ್ದಾರೆ. ಪಿಕಪ್‌ನಲ್ಲಿ ಬಂದವರನ್ನು ಅಲ್ಲಿದ್ದ ಸಿಬ್ಬಂದಿ ತಡೆದಾಗ ವಾಗ್ವಾದ ನಡೆಯಿತು. ಈ ವೇಳೆ ಮಾರಾಮಾರಿ ನಡೆದಿದೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಲಾಗುತ್ತಿದೆ’’ ಎಂದು ವರದಿಯಲ್ಲಿದೆ.

ಹಾಗೆಯೆ News24 BD ಮತ್ತು Prothomalo ಕೂಡ ಈ ಘಟನೆ ಬಗ್ಗೆ ವರದಿ ಮಾಡಿದ್ದು, ‘ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಪ್ರಾಜೆಕ್ಟ್ ಡೈರೆಕ್ಟರ್ ಎಎಚ್‌ಎಂ ಅಖ್ತರ್ ಅವರು ಜನರನ್ನು ತುಂಬಿದ ಪಿಕಪ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಪಿಕಪ್‌ನಲ್ಲಿ ಬಂದವರನ್ನು ಅಲ್ಲಿದ್ದ ಸಿಬ್ಬಂದಿ ತಡೆದಾಗ ವಾಗ್ವಾದ ನಡೆಯಿತು. ಈ ವೇಳೆ ಮಾರಾಮಾರಿ ನಡೆದಿದೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.’ ಎಂದು ಬರೆಯಲಾಗಿದೆ.

ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್‌ನಿಂದ ಈ ವೀಡಿಯೊ ಭಾರತದದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಢಾಕಾದ ಎಲಿವೇಟೆಡ್ ರಸ್ತೆಯಲ್ಲಿ ನಡೆದ ಗಲಾಟೆಯ ವಿಡಿಯೋ ಇದಾಗಿದ್ದು, ಸದ್ಯ ಭಾರತದಲ್ಲಿ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ.

Claim Review:ಚಂಡಿಗಢ್ ಟೋಲ್ ಪ್ಲಾಜಾದಲ್ಲಿ ಮುಸ್ಲಿಮರು ಗೇಟ್ ಮುರಿದು ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ್ದಾರೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಅನುಮತಿ ಇಲ್ಲದಿದ್ದರೂ ಟೆಂಪೋ ಒಂದು ನಿಯಮ ಮೀರಿ ಬಂದಿದ್ದಕ್ಕೆ ಢಾಕಾದ ಎಲಿವೇಟೆಡ್ ರಸ್ತೆಯಲ್ಲಿ ಗಲಾಟೆ ನಡೆದಿದೆ.
Next Story