ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ಕ್ರೂರ ಅತ್ಯಾಚಾರ ಮತ್ತು ಹತ್ಯೆಯು ರಾಷ್ಟ್ರದಾದ್ಯಂತ ವ್ಯಾಪಕ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಈ ಹೀನಕೃತ್ಯದ ವಿರುದ್ಧ ನ್ಯಾಯಕ್ಕಾಗಿ ಅತ್ಯಾಚಾರದಲ್ಲಿ ಭಾಗಿಯಾದವರನ್ನು ಕಠಿಣ ಶಿಕ್ಷೆಗೆ ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದಾರೆ. ಇದರ ನಡುವೆ ಈ ಘಟನೆಗೆ ಸಂಬಂಧಿಸಿದಂತೆ ಅನೇಕ ವೀಡಿಯೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಇದೀಗ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿರುವ ವೀಡಿಯೊ ವೈರಲ್ ಆಗುತ್ತಿದೆ. ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈ ವೀಡಿಯೊ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ವೀಡಿಯೊದಲ್ಲಿ ಕೊಹ್ಲಿ ಹೇಳಿರುವುದೇನು?:
’’ಈ ಘಟನೆ ಬಹಳ ನೋವಿನ ವಿಚಾರ. ಈ ಸುದ್ದಿ ಕೇಳಿ ನನಗೆ ಆಘಾತ ಆಗಿದೆ. ಈ ರೀತಿಯ ಕೆಟ್ಟ ಸಮಾಜದ ಭಾಗವಾಗಿದ್ದಕ್ಕೆ ನನಗೆ ನಾಚಿಕೆ ಆಗುತ್ತಿದೆ. ನಾವು ನಮ್ಮ ಆಲೋಚನೆ ಬದಲಾಯಿಸಬೇಕಿದೆ. ಪುರುಷರು ಮತ್ತು ಮಹಿಳೆಯರನ್ನು ಒಂದೇ ರೀತಿಯಲ್ಲಿ ಕಾಣಬೇಕು. ಗೌರವಯುತವಾಗಿರಿ ಮತ್ತು ಮಹಿಳೆಯರನ್ನು ಸಹಾನುಭೂತಿಯಿಂದ ನೋಡಿಕೊಳ್ಳಿ. ಇಲ್ಲಿ ಯಾರು ಮೇಲು ಕೀಳು ಇಲ್ಲ. ಕೃತ್ಯವನ್ನು ತಡೆಯದೆ ನೋಡುತ್ತಾ ನಿಂತಿದ್ದವರು ಹೇಡಿಗಳು ಎಂದು ಭಾವಿಸುತ್ತೇನೆ. ಇಂಥದ್ದೇ ಘಟನೆ ನಿಮ್ಮ ಮನೆ ಹೆಣ್ಣುಮಕ್ಕಳಿಗೆ ನಡೆದಾಗ ನೋಡುತ್ತಾ ಸುಮ್ಮನೇ ಇರ್ತೀರಾ?’’ ಎಂದು ಕೊಹ್ಲಿ ಈ ವೀಡಿಯೊದಲ್ಲಿ ಹೇಳಿದ್ದಾರೆ.
ಮೂಡಲ ಮನೆ ಎಂಬ ಫೇಸ್ಬುಕ್ ಖಾತೆಯಲ್ಲಿ ಆಗಸ್ಟ್ 18, 2024 ರಂದು ವಿರಾಟ್ ಕೊಹ್ಲಿ ಅವರ ಈ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ಇದಕ್ಕೆ ‘ಕೊಲ್ಕತ್ತಾ ವೈದ್ಯ ಕೇಸ್ ನನಗೆ ನಾಚಿಕೆ ಆಗುತ್ತಿದೆ ವಿರಾಟ್ ಕೊಹ್ಲಿ ಭಾವನಾತ್ಮಕ ಪೋಸ್ಟ್. ಆಕ್ರೋಶದ ವಿಡಿಯೋ ವೈರಲ್’ ಎಂಬ ಶೀರ್ಷಿಕೆ ನೀಡಲಾಗಿದೆ.
ಹಾಗೆಯೆ ಕನ್ನಡದ ಡಿಜಿಟಲ್ ಮಾಧ್ಯಮ ನವಸಮಾಜ.ಕಾಂ ಕೂಡ ಈ ಬಗ್ಗೆ ಸುದ್ದಿ ಪ್ರಕಟಿಸಿದ್ದು, ‘ಕೋಲ್ಕತಾ ಹತ್ಯೆ ಪ್ರಕರಣ – ಆಕ್ರೋಶ ಹೊರಹಾಕಿದ ಕಿಂಗ್ ಕೊಹ್ಲಿ..!’ ಎಂದು ಹೆಡ್ಲೈನ್ ನೀಡಲಾಗಿದೆ. ಇತ್ತೀಚೆಗೆ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ ಎಂದು ವರದಿಯಲ್ಲಿದೆ.
Fact Check:
ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಇತ್ತೀಚಿನ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಘಟನೆಯನ್ನು ಉದ್ದೇಶಿಸಿ ಕೊಹ್ಲಿ ಯಾವುದೇ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಬದಲಾಗಿ ಈ ವೈರಲ್ ವೀಡಿಯೊ 2017 ರದ್ದಾಗಿದೆ.
ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ವಿರಾಟ್ ಕೊಹ್ಲಿ ಅವರ ಎಕ್ಸ್ ಹ್ಯಾಂಡಲ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜನವರಿ 6, 2017 ರಂದು ಪೋಸ್ಟ್ ಮಾಡಲ್ಪಟ್ಟಿದೆ ಎಂದು ತಿಳಿದುಬಂದಿದೆ. ವೀಡಿಯೊದಲ್ಲಿ ಕೊಹ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.
ಇದರ ಮಾಹಿತಿಯನ್ನು ತೆಗೆದುಕೊಂಡು, ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ಮಾಡಿದ್ದೇವೆ. ಆಗ ಜನವರಿ 6, 2017 ರಂದು ಎನ್ಡಿಟಿವಿ, ಹಿಂದೂಸ್ತಾನ್ ಟೈಮ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾದ ವರದಿಗಳು ಕಂಡುಬಂದಿವೆ. ಈ ವರದಿಗಳು ಬೆಂಗಳೂರಿನಲ್ಲಿ ಡಿಸೆಂಬರ್ 31, 2016ರ ಹೊಸ ವರ್ಷದ ಹಿಂದಿನ ದಿನ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಕಿರುಕುಳ ಘಟನೆಯ ಬಗ್ಗೆ ಮಾತನಾಡಿರುವುದು ಎಂದು ಸೂಚಿಸುತ್ತದೆ. 2017 ರ ಇಂಡಿಯಾಟುಡೇ ವರದಿಯ ಪ್ರಕಾರ, ಸಂಭ್ರಮಾಚರಣೆಯ ಸಮಯದಲ್ಲಿ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಕೆಲ ಪುಂಡರು ಮಹಿಳೆಯರನ್ನು ಕಾಲೆಳೆದರು, ತಬ್ಬಿಕೊಳ್ಳುತ್ತಾರೆ ಮತ್ತು ನಿಂದಿಸಿದ್ದಾರೆ ಎಂದು ಬರೆಯಲಾಗಿದೆ.
ಇನ್ನು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಯಾವುದಾದರು ಹೇಳಿಕೆ ನೀಡಿದ್ದಾರೆಯೇ ಎಂದು ನಾವು ಪರಿಶೀಲಿಸಿದ್ದೇವೆ. ಆದಾಗ್ಯೂ, ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಯಾವುದೇ ಪೋಸ್ಟ್‌ಗಳು ಅಥವಾ ಘಟನೆಯನ್ನು ಉದ್ದೇಶಿಸಿ ಯಾವುದೇ ಮಾಧ್ಯಮ ವರದಿಗಳು ನಮಗೆ ಕಂಡುಬಂದಿಲ್ಲ.
ಹೀಗಾಗಿ, ವೈರಲ್ ವೀಡಿಯೊ ಹಳೆಯದು ಮತ್ತು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.