ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ವಿರೋಧಿ ಹೋರಾಟಗಳು ಮತ್ತಷ್ಟು ಹಿಂಸಾರೂಪ ಪಡೆದಿದ್ದು ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು ಸುಮಾರು 150ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ಮುರ್ಷಿದಾಬಾದ್‌ನ ಮುಸ್ಲಿಮ್ ಪ್ರಾಬಲ್ಯದ ಪ್ರದೇಶಗಳಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು ಲೂಟಿಗಳು ಕೂಡ ಶುರುವಾಗಿವೆ ಎಂದು ವರದಿ ಆಗಿವೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವೀಡಿಯೊಲ್ಲಿ ಒಂದು ಮನೆಯ ಮುಂದೆ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಮೇಲೆ ಒಂದು ಗುಂಪು ಕಲ್ಲು ತೂರಾಟ ನಡೆಸುತ್ತಿರುವುದನ್ನು ಕಾಣಬಹುದು. ಫೇಸ್ಬುಕ್ಬಳಕೆದಾರರೊಬ್ಬರು ಏಪ್ರಿಲ್ 13, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮಾಲ್ಡಾ, ದಕ್ಷಿಣ ಪರಗಣ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯ ಬಿಲ್ ವಿರುದ್ಧ ಬೆಂಕಿ ಹಚ್ಚುವ ಪ್ರತಿಭಟನೆ. ಮುರ್ಷಿದಾಬಾದ್‌ನಲ್ಲಿ ಒಂದೇ ಕುಟುಂಬದ 3 ಹಿಂದೂಗಳನ್ನು ಥಳಿಸಿ ಕೊಲ್ಲಲಾಯಿತು. ಬಾಂಗ್ಲಾದೇಶದಂತಹ ಪರಿಸ್ಥಿತಿ ಬಂಗಾಳದಲ್ಲಿಯೂ ಸಂಭವಿಸಿದೆ. ಜಿಹಾದಿಗಳು ಬಡವರ ಮನೆಗಳಿಗೆ ನುಗ್ಗುತ್ತಿದ್ದಾರೆ. ಬಂಗಾಳವನ್ನು ಉಳಿಸಬೇಕಾದರೆ, ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಇತ್ತೀಚಿನದಲ್ಲ, ಇದು 2024 ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘಟನೆಯಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೆಲವು ಪ್ರಮುಖ ಚೌಕಟ್ಟುಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಆಗ ಈ ಘಟನೆಯ ಕುರಿತು ಏಪ್ರಿಲ್ 2024 ರ ಹಲವಾರು ಸುದ್ದಿ ಲೇಖನಗಳನ್ನು ಕಂಡುಕೊಂಡಿದ್ದೇವೆ. ಏಪ್ರಿಲ್ 8, 2024 ರಂದು ಟಿವಿ9ಹಿಂದಿ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿದ್ದು, ಇದಕ್ಕೆ ‘‘50 ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬವನ್ನು ನಿರಾಶ್ರಿತರನ್ನಾಗಿ ಮಾಡಿ, ಇಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆದು ಓಡಿಸಲಾಯಿತು’’ ಎಂಬ ಶೀರ್ಷಿಕೆ ನೀಡಲಾಗಿದೆ.
ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಜೈಪುರದಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳಲು, ದುಷ್ಕರ್ಮಿಗಳು ವಾಹನಗಳಲ್ಲಿ ಬಂದು ಜನರನ್ನು ಥಳಿಸಿದ್ದಾರೆ. 50 ವರ್ಷಗಳಿಂದ ಆ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬದ ಮೇಲೆ 40-50 ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಭೂಮಿಯನ್ನು ವಶಪಡಿಸಿಕೊಳ್ಳಲು, ದುಷ್ಕರ್ಮಿಗಳು ಅಲ್ಲಿ ವಾಸಿಸುವ ಜನರನ್ನು ನಿಂದಿಸಿ, ನಂತರ ಅವರನ್ನು ಕೆಟ್ಟದಾಗಿ ಥಳಿಸಿದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ’’ ಎಂದು ಬರೆಯಲಾಗಿದೆ.
abplive ಕೂಡ ಏಪ್ರಿಲ್ 8, 2024 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿದ್ದು, ‘‘ಜೈಪುರದ ಮಾಲ್ಪುರ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗನೇರ್ ಎಂಬ ಪ್ರದೇಶದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ 50-60 ಜನರ ಗುಂಪೊಂದು ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದೆ. ದೊಣ್ಣೆ ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದುಕೊಂಡು ದುಷ್ಕರ್ಮಿಗಳು ಬಂದಿದ್ದರು’’ ಎಂದು ವರದಿಯಲ್ಲಿದೆ.
NDTV ರಾಜಸ್ಥಾನ ಪ್ರಕಟಿಸಿರುವ ಲೇಖನದ ಪ್ರಕಾರ, ಆ ಗುಂಪು ಮೊದಲು ಶಂಕರ್ ಸುಯಿವಾಲ್ ಎಂಬವರ ಮನೆಯಲ್ಲಿದ್ದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ನಂತರ ಕಲ್ಲು ತೂರಾಟ ನಡೆಸಿತು. ಬಯಾನಾ ಮತ್ತು ಭರತ್‌ಪುರದ ನಿವಾಸಿಗಳಾದ ಸುಭಾಷ್ ಚಂದ್ ಮತ್ತು ನಂದ ಕಿಶೋರ್ ಎಂಬ ಜನರು ತಮ್ಮ ಪೂರ್ವಜರ ಆಸ್ತಿಯನ್ನು ಅತಿಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶಂಕರ್ ಹೇಳಿರುವುದಾಗಿ ಎನ್‌ಡಿಟಿವಿ ಉಲ್ಲೇಖಿಸಿದೆ. ಆ ಸಮಯದಲ್ಲಿ ಪೊಲೀಸರು ಇದು ಹಳೆಯ ವಿವಾದ ಎಂದು ಮಾಧ್ಯಮಗಳಿಗೆ ತಿಳಿಸಿದರು ಮತ್ತು ಎಸಿಪಿ ವಿನೋದ್ ಶರ್ಮಾ ಅವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು ಎಂದು ಎನ್ಡಿಟಿ ಬರೆದುಕೊಂಡಿದೆ.
ಇದು ರಾಜಸ್ಥಾನದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಈ ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಏಪ್ರಿಲ್ 2024 ರಲ್ಲಿ ರಾಜಸ್ಥಾನದ ಜೈಪುರದಲ್ಲಿ ನಡೆದ ದಾಳಿಯ ವೀಡಿಯೊವನ್ನು ಸದ್ಯ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾತ್ಮಕ ಗಲಭೆಗಳಿಗೆ ಸಂಬಂಧಿಸಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರದ ಹತ್ಯೆಗೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.