ಇರಾನ್-ಅಮೆರಿಕಾ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ ನಂತರ ಭಾರತದಾದ್ಯಂತ ಪ್ರತಿಭಟನೆಗಳು ಮತ್ತು ಶೋಕ ರ್ಯಾಲಿಗಳು ನಡೆಯುತ್ತಿವೆ. ಏತನ್ಮಧ್ಯೆ, ಉತ್ತರ ಪ್ರದೇಶದಲ್ಲಿ ಇರಾನ್ ಅನ್ನು ಬೆಂಬಲಿಸಿ ನಡೆದ ರ್ಯಾಲಿಯಲ್ಲಿ ಜನರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು ಮತ್ತು ಯುಪಿ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಪೊಲೀಸರು ಜನಸಮೂಹದ ಮೇಲೆ ಲಾಠಿ ಚಾರ್ಜ್ ಮಾಡುತ್ತಿರುವುದನ್ನು ತೋರಿಸಲಾಗಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ಯೋಗಿ ಬಾಬಾ ಅವರ ಉತ್ತರ ಪ್ರದೇಶ. ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸಿದರೆ ಅಥವಾ ರಸ್ತೆಗೆ ತಡೆ ಒಡ್ಡಿದರೆ, ಅದರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ. ಇರಾನ್ ಪರವಾಗಿ ನಡೆದ ಪ್ರತಿಭಟನೆಯು ರಸ್ತೆ ತಡೆ ನಡೆಸಿತು, ಆದರೆ ನಂತರ ಉತ್ತರ ಪ್ರದೇಶ ಪೊಲೀಸರು ಲಾಠಿ ಚಾರ್ಜ್ ಮಾಡಿ ರಸ್ತೆಯನ್ನು ತೆರವುಗೊಳಿಸಿದರು. ಯೋಗಿಜಿ ಮಾತ್ರ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸಬಲ್ಲರು.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಸೆಪ್ಟೆಂಬರ್ 26, 2025 ರಂದು ಉತ್ತರ ಪ್ರದೇಶದಲ್ಲಿ ನಡೆದ ಐ ಲವ್ ಮುಹಮ್ಮದ್ ರ್ಯಾಲಿಯ ವಿರುದ್ಧದ ಪೊಲೀಸ್ ಕ್ರಮದ ದೃಶ್ಯವಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇದು ನವೆಂಬರ್ 2025 ರಿಂದ ಪ್ರಸಾರವಾಗುತ್ತಿದೆ ಎಂಬುದು ತಿಳಿದುಬಂತು. ಅಮೆರಿಕ ಮತ್ತು ಇಸ್ರೇಲ್ ಫೆಬ್ರವರಿ 28, 2026 ರಂದು ಇರಾನ್ ಮೇಲೆ ದಾಳಿ ನಡೆಸಿದವು. ಅದೇ ದಿನ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಯಿತು. ಆದ್ದರಿಂದ, ವೈರಲ್ ವೀಡಿಯೊಗೂ ಅಯತೊಲ್ಲಾ ಅಲಿ ಖಮೇನಿಯವರ ಮರಣದ ನಂತರದ ಪ್ರತಿಭಟನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ನಂತರದ ತನಿಖೆಯಲ್ಲಿ ವೈರಲ್ ವೀಡಿಯೊದಲ್ಲಿ ಕಂಡುಬರುವ ಲಾಠಿಚಾರ್ಜ್‌ನ ಮತ್ತೊಂದು ದೃಶ್ಯವನ್ನು ನ್ಯೂಸ್ 9 ಲೈವ್ ಸೆಪ್ಟೆಂಬರ್ 26, 2025 ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರುವುದು ಸಿಕ್ಕಿತು. "ಉತ್ತರ ಪ್ರದೇಶದ ಬರೇಲಿಯಲ್ಲಿ 'ಐ ಲವ್ ಮುಹಮ್ಮದ್' ಪ್ರತಿಭಟನೆಯ ನಂತರ ಕಲ್ಲು ತೂರಾಟ ಮತ್ತು ಲಾಠಿಚಾರ್ಜ್" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಸೆಪ್ಟೆಂಬರ್ 26, 2025 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ಉತ್ತರ ಪ್ರದೇಶದ ಬರೇಲಿಯ ಇಸ್ಲಾಮಿಯಾ ಮೈದಾನದ ಬಳಿ ಪ್ರತಿಭಟನೆಗಳು ನಡೆದವು ಮತ್ತು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ನಂತರ ಪೊಲೀಸರು ಲಾಠಿ ಚಾರ್ಜ್ ಪ್ರಾರಂಭಿಸಿದರು ಎಂದು NDTV ವರದಿ ಮಾಡಿದೆ. 'ಐ ಲವ್ ಮುಹಮ್ಮದ್' ಎಂಬ ಪೋಸ್ಟರ್‌ನಿಂದಾಗಿ ಘರ್ಷಣೆ ಪ್ರಾರಂಭವಾಯಿತು ಎಂದು ವರದಿ ಹೇಳುತ್ತದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ 'ಐ ಲವ್ ಮುಹಮ್ಮದ್' ಅಭಿಯಾನವನ್ನು ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದಕ್ಕಾಗಿ ಸೆಪ್ಟೆಂಬರ್ 27 ರಂದು ಇತ್ತಿಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಜಾ ಅವರನ್ನು ಬಂಧಿಸಲಾಗಿದೆ ಎಂದು ಎನ್‌ಡಿಟಿವಿ ವೀಡಿಯೊ ವರದಿ ಹೇಳುತ್ತದೆ. ಈ ವೀಡಿಯೊ ವರದಿಯಲ್ಲಿ ವೈರಲ್ ವೀಡಿಯೊದ ಲಾಠಿಚಾರ್ಜ್‌ನ ದೃಶ್ಯಗಳು ಸಹ ಒಳಗೊಂಡಿದೆ.
ಖಮೇನಿಯವರ ಮರಣದ ನಂತರ ಉತ್ತರ ಪ್ರದೇಶದಲ್ಲಿ ನಡೆದ ರ್ಯಾಲಿಗಳಲ್ಲಿ ಯಾವುದೇ ಹಿಂಸಾಚಾರ ನಡೆದ ವರದಿಗಳು ಬಂದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದ ವರದಿಗಳಿವೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಇರಾನ್ ಪರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಉತ್ತರ ಪ್ರದೇಶ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೊ ವಾಸ್ತವವಾಗಿ ಸೆಪ್ಟೆಂಬರ್ 26, 2025 ರಂದು ಬರೇಲಿಯಲ್ಲಿ ನಡೆದ ಐ ಲವ್ ಮುಹಮ್ಮದ್ ರ್ಯಾಲಿಯ ವಿರುದ್ಧದ ಲಾಠಿಚಾರ್ಜ್ ಆಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.