(ಈ ಸತ್ಯ ಪರಿಶೀಲನೆಯು ಹಿಂಸಾಚಾರದ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಕೃತ್ಯದ ಫೋಟೋ ಅಥವಾ ವಿಡಿಯೋವನ್ನು ಇಲ್ಲಿ ಸೇರಿಸಿಲ್ಲ. ಇದು ಓದುಗರ ವಿವೇಚನೆಗೆ ಬಿಡಲಾಗಿದೆ.)
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಓರ್ವ ಪೊಲೀಸ್ ಅಧಿಕಾರಿ ಬೆಲ್ಟ್ನಲ್ಲಿ ವ್ಯಕ್ತಿಯೋರ್ವನಿಗೆ ಮನಬಂದಂತೆ ಹೊಡೆಯುತ್ತಿರುವುದು ಕಾಣಬಹುದು. ಪೊಲೀಸ್ ಅಧಿಕಾರಿ ಹೊಡೆಯುವಾಗ ಇನ್ನಿಬ್ಬರು ಆ ವ್ಯಕ್ತಿಯನ್ನು ಹಿಡಿದುಕೊಂಡಿದ್ದಾರೆ. ಇದು ಉತ್ತರ ಕರ್ನಾಟದಲ್ಲಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ಅನೇಕರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ರಾಜ್ಯ ಸರ್ಕಾರದ ಆದೇಶವೇ? ರಾಜ್ಯದ ಗೃಹ ಸಚಿವರು ತಾವೇ ಉತ್ತರಿಸಬೇಕು. ರಾಜ್ಯದ ಜನತೆ ತಿಳಿಯಬೇಕು ಇದಕ್ಕೆಲ್ಲ ಅವಕಾಶ ಇದೆಯಾ ನಮ್ಮ ಪೊಲೀಸ್ ಠಾಣೆಗಳಲ್ಲಿ ಅನ್ನುವುದು. ಉತ್ತರ ಕನ್ನಡ ಜಿಲ್ಲಾ ಪೊಲೀಸ್’’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ನಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಟ್ಯಾಗ್ ಮಾಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆ ನಡೆದಿರುವುದು ಉತ್ತರ ಕನ್ನಡದಲ್ಲಲ್ಲ, ಬದಲಾಗಿ ಉತ್ತರ ಪ್ರದೇಶದಲ್ಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೆಲವು ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ನವ್ಭಾರತ್ಟೈಮ್ಸ್ ಏಪ್ರಿಲ್ 25 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಉತ್ತರ ಪ್ರದೇಶದ ಜೌನ್‌ಪುರದ ಮುಂಗಾರಬಾದ್‌ಶಾಪುರ ಪೊಲೀಸ್ ಠಾಣೆಯಲ್ಲಿ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೊವೊಂದು ಬೆಳಕಿಗೆ ಬಂದಿದೆ. ಆ ಪ್ರದೇಶದ ಯುವಕನೊಬ್ಬ ಕೆಲಸಕ್ಕಾಗಿ ಪೊಲೀಸ್ ಠಾಣೆಗೆ ಹೋಗಿದ್ದ. ಅಲ್ಲಿ, ಅವನು ಇನ್ಸ್‌ಪೆಕ್ಟರ್ ವಿನೋದ್ ಮಿಶ್ರಾ ಅವರೊಂದಿಗೆ ಕಾನೂನಿನ ಬಗ್ಗೆ ಮಾತನಾಡಿದನೆಂದು ಆರೋಪಿಸಲಾಗಿದೆ.’’
‘‘ಯುವಕನ ಮಾತಿನಿಂದ ಕೋಪಗೊಂಡ ಇನ್ಸ್‌ಪೆಕ್ಟರ್ ಯುವಕನನ್ನು ಬೆಲ್ಟ್‌ನಿಂದ ಹೊಡೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಇಬ್ಬರು ಪೊಲೀಸರು ಯುವಕನನ್ನು ಕಂಬಕ್ಕೆ ಬಿಗಿಯಾಗಿ ಹಿಡಿದುಕೊಂಡರು. ಯುವಕ ನೋವಿನಿಂದ ನರಳುತ್ತಿದ್ದಾಗಲೂ, ಅವನು ಅವನನ್ನು ಹೊಡೆಯುತ್ತಲೇ ಇದ್ದರು. ವಿನೋದ್ ಮಿಶ್ರಾ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ’’ ಎಂಬ ಮಾಹಿತಿ ಇದರಲ್ಲಿದೆ.
ಏಪ್ರಿಲ್ 24 ರಂದು ಈಟಿವಿ ಭಾರತ್ ಪ್ರಕಟಿಸಿದ ವರದಿಯಲ್ಲಿ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಇದೆ. ಇದರಲ್ಲಿ ಕೂಡ ಈ ಘಟನೆ ಉತ್ತರ ಪ್ರದೇಶದ ಜೌನ್‌ಪುರದ ಮುಂಗಾರಬಾದ್‌ಶಾಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎಂದು ಬರೆಯಲಾಗಿದೆ. ಅಲ್ಲದೆ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿನೋದ್ ಮಿಶ್ರಾ ಸೇರಿದಂತೆ 6 ಪೊಲೀಸರನ್ನು ಎಸ್‌ಪಿ ಅಮಾನತುಗೊಳಿಸಿದ್ದಾರೆ. ದಿಲೀಪ್ ಕುಮಾರ್ ಸಿಂಗ್ ಅವರನ್ನು ಹೊಸ ಪೊಲೀಸ್ ಠಾಣೆಯ ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂಬ ಮಾಹಿತಿ ಇದರಲ್ಲಿದೆ.
ಏಪ್ರಿಲ್ 24, 2025ರ ಅಮರ್ ಉಜಾಲಾ ವರದಿಯಲ್ಲಿ, ‘‘ಜೌನ್‌ಪುರ ಜಿಲ್ಲೆಯ ಮುಂಗಾರಾಬಾದ್‌ಶಹಪುರ ಪೊಲೀಸ್ ಠಾಣೆಯ ಉಸ್ತುವಾರಿ ಯುವಕನೊಬ್ಬನನ್ನು ಕ್ರೂರವಾಗಿ ಥಳಿಸಿದ ಆರೋಪ ಕೇಳಿಬಂದಿದೆ. ಯುವಕನನ್ನು ಕ್ರೂರವಾಗಿ ಥಳಿಸುತ್ತಿರುವ ವೀಡಿಯೋ ಕೂಡ ವೈರಲ್ ಆಗಿದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ವರಿಷ್ಠಾಧಿಕಾರಿ ಡಾ. ಕೌಸ್ತುಭ್ ಅವರು ಪೊಲೀಸ್ ಠಾಣೆಯ ಉಸ್ತುವಾರಿ ವಿನೋದ್ ಕುಮಾರ್ ಮಿಶ್ರಾ ಅವರನ್ನು ಅಮಾನತುಗೊಳಿಸಿದ್ದಾರೆ’’ ಎಂದಿದೆ. ಈ ವರದಿಯಲ್ಲಿ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಕಾಣಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬನಿಗೆ ಬೆಲ್ಟ್ ನಿಂದ ಕ್ರೂರವಾಗಿ ಥಳಿಸಿದ ಘಟನೆ ಉತ್ತರ ಕರ್ನಾಟಕ ಪೊಲೀಸ್ ಠಾಣೆಯಲ್ಲಿ ನಡೆದಿಲ್ಲ. ಇದು ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಮುಂಗಾರಾಬಾದ್‌ಶಹಪುರ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಆಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.