ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಳೆದ ಕೆಲವು ವಾರಗಳಿಂದ ಕಬ್ಬು ಬೆಳಗಾರರ ಪ್ರತಿಭಟನೆ ತೀವ್ರವಾಗಿದೆ. ಪ್ರತಿಟನ್ ಕಬ್ಬಿಗೆ ಮೂರುವರೆ ಸಾವಿರ ರೂ. ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವುದನ್ನು ಕಾಣಬಹುದು. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಕಬ್ಬು ಬೆಳೆಗಾರರ ಪ್ರತಿಭಟನೆ; ಹತ್ತರಗಿಯಲ್ಲಿ ಪೊಲೀಸರ ಲಾಠಿಚಾರ್ಜ್‌ಗೆ ಪ್ರತಿಯಾಗಿ ಕಲ್ಲು ತೂರಾಟ. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿ ಕ್ವಿಂಟಾಲ್‌ಗೆ 3500 ರೂ. ದರ ನಿಗದಿ ಮಾಡಲು ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಿದರು. ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ರೊಚ್ಚಿಗೆದ್ದ ರೈತರು ಕಲ್ಲು ತೂರಾಟ ಮಾಡಿದರು. ಹುಕ್ಕೇರಿ ಹಾಗೂ ಮೂಡಲಗಿ ಪ್ರದೇಶಗಳಲ್ಲಿ ಸಂಘಟಿತ ರೈತರ ಸಮಾವೇಶ ನಡೆಯುತ್ತಿದೆ. ಗೃಹ ಸಚಿವ ಪರಮೇಶ್ವರ್ ಸಮ್ಯಮದಿಂದ ವರ್ತಿಸಲು ಸೂಚನೆ ನೀಡಿದ್ದಾರೆ. ಸ್ಥಳದಲ್ಲಿ ಉದ್ದಿಗ್ನ ಪರಿಸ್ಥಿತಿ ಮುಂದುವರೆಯುತ್ತಿದ್ದು, ರೈತ-ಪೊಲೀಸ್ ನಡುವಿನ ಸಂಘರ್ಷದ ದೃಶ್ಯಗಳು ಗಮನಸೆಳೆದಿವೆ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2021 ರಲ್ಲಿ ಹರಿಯಾಣದ ಕರ್ನಾಲ್‌ನಲ್ಲಿ ಹೊಸ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಇದೇ ವೈರಲ್ ಫೋಟೋದೊಂದಿಗೆ ಆಗಸ್ಟ್ 30, 2021 ರಂದು ಹಿಂದೂಸ್ಥಾನ್ ಟೈಮ್ಸ್ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ‘‘ಶನಿವಾರ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಾಜ್ಯ ಬಿಜೆಪಿ ಮುಖ್ಯಸ್ಥ ಓಂ ಪ್ರಕಾಶ್ ಧಂಕರ್ ಮತ್ತು ಇತರ ನಾಯಕರು ಭಾಗವಹಿಸಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಭೆಯನ್ನು ವಿರೋಧಿಸಿ ಕರ್ನಾಲ್ ಕಡೆಗೆ ಹೋಗುತ್ತಿದ್ದ ರೈತರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಪೊಲೀಸ್ ಕ್ರಮದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ. ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಕಲ್ಲು ಹೃದಯದವರಾಗಿದೆ ಎಂದು ಶಿವಸೇನೆ ಟೀಕಿಸಿದೆ’’ ಎಂಬ ಮಾಹಿತಿ ಇದರಲ್ಲಿದೆ.
ಆಗಸ್ಟ್ 29 ರಂದು, 2021 ರಂದು ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿದ ವರದಿಯಲ್ಲೂ ಅದೇ ವೈರಲ್ ಫೋಟೋ ಇದ್ದು, ‘‘ಕಳೆದ ವರ್ಷ ಜಾರಿಗೆ ತಂದ ಕೃಷಿ ಕಾನೂನುಗಳ ವಿರುದ್ಧದ ಆಂದೋಲನವು ಶನಿವಾರ ಕರ್ನಾಲ್‌ನಲ್ಲಿ ಹರಿಯಾಣ ಪೊಲೀಸರು ರೈತರ ಮೇಲೆ ಹಲ್ಲೆ ನಡೆಸಿದಾಗ ಮತ್ತೆ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಸ್ತಾರಾ ಟೋಲ್ ಪ್ಲಾಜಾದಲ್ಲಿ ನಡೆದ ಲಾಠಿಚಾರ್ಜ್‌ನಲ್ಲಿ ಹಲವರು ಗಾಯಗೊಂಡರು. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಯ ಕುರಿತು ಬಿಜೆಪಿ ಸಭೆಯನ್ನು ರೈತರು ವಿರೋಧಿಸುತ್ತಿದ್ದರು. ಕರ್ನಾಲ್‌ನಲ್ಲಿ ಹೆದ್ದಾರಿಯನ್ನು ತಡೆದಿದ್ದ ಗುಂಪನ್ನು ಚದುರಿಸಲು ಮಧ್ಯಾಹ್ನ ಬಲಪ್ರಯೋಗ ಮಾಡಿ ಪೊಲೀಸರು ಹಲವಾರು ಜನರನ್ನು ಬಂಧಿಸಿದರು’’ ಎಂದು ಬರೆಯಲಾಗಿದೆ.
ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಲ್‌ನಲ್ಲಿ ರೈತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ನಡೆಸಲಾಗಿದೆ ಎಂಬ ಕುರಿತು ಇದೇ ವೈರಲ್ ಫೋಟೋದೊಂದಿಗೆ 2021 ರಲ್ಲಿ ಹಲವಾರು ಮಾಧ್ಯಮ ವರದಿ ಪ್ರಕಟಿಸಿರುವುದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಓದಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ವೈರಲ್ ಆಗುತ್ತಿರುವ ಫೋಟೋ ಹಳೇಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.