Fact Check: ಪಶ್ಚಿಮ ಬಂಗಾಳದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಎಂದು ಮಧ್ಯ ಪ್ರದೇಶದ ವೀಡಿಯೊ ವೈರಲ್
ಈ ವೀಡಿಯೊ ಪಶ್ಚಿಮ ಬಂಗಾಳದ್ದು ಎಂದು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಹಿಂದೂಗಳ ಮನೆಗಳು- ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ ಮತ್ತು ಹಿಂದೂಗಳು ಪ್ರತಿಭಟಿಸಿದರೆ ಅವರನ್ನು ಕೊಲ್ಲಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
By Vinay Bhat
Claim:ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳು, ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ ಮತ್ತು ಹಿಂದೂಗಳು ಪ್ರತಿಭಟಿಸಿದರೆ ಅವರನ್ನು ಕೊಲ್ಲಲಾಗುತ್ತಿದೆ.
Fact:ಹಕ್ಕು ಸುಳ್ಳು, ಇದು ಮಧ್ಯಪ್ರದೇಶದ ಸೆಹೋರ್‌ನಲ್ಲಿ ದಲಿತ ಸಮುದಾಯದ ಮೇಲೆ ನಡೆದ ದಾಳಿಯ ವೀಡಿಯೊ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಗುಂಪೊಂದು ಮನೆಯ ಮೇಲೆ ದಾಳಿ ಮಾಡುತ್ತಿರುವುದನ್ನು ಕಾಣಬಹುದು. ಈ ಮನೆಯ ಗೋಡೆಗಳ ಮೇಲೆ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಫೋಟೋವನ್ನು ನೇತುಹಾಕಲಾಗಿದೆ. ಈ ವೀಡಿಯೊ ಪಶ್ಚಿಮ ಬಂಗಾಳದ್ದು ಎಂದು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಹಿಂದೂಗಳ ಮನೆಗಳು- ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ ಮತ್ತು ಹಿಂದೂಗಳು ಪ್ರತಿಭಟಿಸಿದರೆ ಅವರನ್ನು ಕೊಲ್ಲಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಏಪ್ರಿಲ್ 16, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ಪಾಕಿಸ್ತಾನ ಬಂಗ್ಲಾದೇಶ ವಲ್ಲ. ನಮ್ಮ ದೇಶಾನೇ ಪಚ್ಚಿಮ ಬಂಗಾಳ. ಪಾಕಿಸ್ತಾನ ಹಾಗೆ ಬಾಂಗ್ಲಾದೇಶದಂತೆಯೇ, ಪಶ್ಚಿಮ ಬಂಗಾಳದಲ್ಲಿಯೂ ಸಹ, ಹಿಂದೂಗಳ ಮನೆಗಳು ಮತ್ತು ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ ಮತ್ತು ಹಿಂದೂಗಳು ಪ್ರತಿಭಟಿಸಿದರೆ ಅವರನ್ನು ಕೊಲ್ಲಲಾಗುತ್ತಿದೆ. ಏಕೆಂದರೆ ಗಲಭೆಕೋರರಿಗೆ ತಿಳಿದಿದೆ, ನಾವು ಏನೇ ಮಾಡಿದರೂ ಮಮತಾ ಬ್ಯಾನರ್ಜಿ ಅವರ ಸರ್ಕಾರ ನಮ್ಮೊಂದಿಗೆ ಇದೆ ಯಾರಿಗೂ ಶಿಕ್ಷೆಯಾಗಲು ಬಿಡುವುದಿಲ್ಲ ಎಂದು. ಹಾಗೆ ವಿಡಿಯೋ ಪೂರ್ತಿ ನೋಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಕಾಣುತ್ತೆ. ಈ ವಿಡಿಯೋ ನೋಡಿ ನಿಮಗೆ ಏನ್ ಅರ್ಥ ಅಯ್ತು ಅಂತ ಕಾಮೆಂಟ್ ಮಾಡಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊವನ್ನು ಮಾರ್ಚ್ ತಿಂಗಳಲ್ಲಿ ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು, ಇದು ಮಧ್ಯಪ್ರದೇಶದ ಸೆಹೋರ್‌ನಲ್ಲಿ ದಲಿತ ಸಮುದಾಯದ ಮೇಲೆ ನಡೆದ ದಾಳಿಯ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ಸಂದರ್ಭ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕ ಮತ್ತು ರಾಜ್ಯಸಭಾ ಸಂಸದ ರಾಮ್‌ಜಿ ಗೌತಮ್ ಅವರು ಮಾರ್ಚ್ 7, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, "ಮಧ್ಯಪ್ರದೇಶದಲ್ಲಿ ಜಂಗಲ್ ರಾಜ್ ಜಾರಿಯಲ್ಲಿದೆ. ಬಿಜೆಪಿ ಸರ್ಕಾರ ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸೆಹೋರ್‌ನ ಬಕ್ತರಾ ಗ್ರಾಮದಲ್ಲಿ, 500 ಗೂಂಡಾಗಳು ದಲಿತ ವಸಾಹತು ಪ್ರದೇಶದಲ್ಲಿ ಗಲಾಟೆ ಮಾಡಿ, ಅನೇಕ ಜನರನ್ನು ಹೊಡೆದು ಕೊಂದು, ಮನೆಯ ಬಾಗಿಲುಗಳನ್ನು ಮುರಿದು, ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದರು. ಪೊಲೀಸ್ ಪಡೆ ಮೂಕ ಪ್ರೇಕ್ಷಕರಾಗಿದೆ" ಎಂದು ಬರೆದಿದ್ದಾರೆ.
मध्य प्रदेश में जंगल राज कायम है बीजेपी सरकार दलितों पिछड़ों और आदिवासियों की सुरक्षा करने में पूरी तरह विफल ।सीहोर के बकतरा गांव में 500 दबंगों ने दलित बस्ती में तांडव मचाया कई लोगों को अधमरा किया घर के दरवाजे तोड़कर औरतों और बच्चों पर जान लेवा हमला भी किया।पुलिस फोर्स मूकदर्शक। pic.twitter.com/8P4otgItJM
— Er.Ramji Gautam MP Rajya Sabha (@ramjigautambsp) March 7, 2025
ಈ ಮಾಹಿತಿಯ ಆಧಾರದ ಮೇಲೆ ಕೀವರ್ಡ್ ಸರ್ಚ್ ನಡೆಸಿದಾಗ, ಝೀ ನ್ಯೂಸ್‌ನ ಯೂಟ್ಯೂಬ್ಚಾನೆಲ್‌ನಲ್ಲಿ ಮಾರ್ಚ್ 7, 2025 ರಂದು ಅಪ್‌ಲೋಡ್ ಮಾಡಲಾದ ವೀಡಿಯೊ ವರದಿ ಸಿಕ್ಕಿತು. ಇದರಲ್ಲಿ ವೈರಲ್ ವೀಡಿಯೊವನ್ನು ಸಹ ಕಾಣಬಹುದು. ಈ ವರದಿಯ ವಿವರಣೆಯಲ್ಲಿ, "ಸೆಹೋರ್‌ನ ಬಕ್ತರಾ ಗ್ರಾಮದಲ್ಲಿ ದಲಿತ ಮತ್ತು ಕಿರಾರ್ ಸಮುದಾಯದ ನಡುವೆ ಗಲಾಟೆ ನಡೆದಿದೆ. ಬಬಲೇಶ್ ಚೌಹಾಣ್ ಹತ್ಯೆಯ ನಂತರ ವಿವಾದ ಉಲ್ಬಣಗೊಂಡಿತು. ಅನಿಯಂತ್ರಿತ ಜನಸಮೂಹವು ಅನೇಕ ಸ್ಥಳಗಳಲ್ಲಿ ಬೆಂಕಿ ಹಚ್ಚಿತು. ವಾಸ್ತವವಾಗಿ, ಕಿರಾರ್ ಸಮುದಾಯದ ಜನರು ಅಂಗಡಿಗಳಿಂದ ದಲಿತ ಸಮುದಾಯದ ಜನರಿಗೆ ಸರಕುಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದರು. ಕಿರಾರ್ ಸಮುದಾಯದ ಬಹಿಷ್ಕಾರದ ನಂತರ ಉದ್ವಿಗ್ನತೆ ಉಂಟಾಗಿದೆ. ಅದರ ನಂತರ ಈ ಗಲಭೆ ನಡೆದಿದೆ. ಗಲಭೆಯ ಸಮಯದಲ್ಲಿ, ವೀಡಿಯೊ ಮಾಡಿದವರ ಮೊಬೈಲ್ ಫೋನ್‌ಗಳನ್ನು ಕಿತ್ತು ಸುಟ್ಟುಹಾಕಲಾಯಿತು" ಎಂಬ ಮಾಹಿತಿ ಇದರಲ್ಲಿದೆ.
ದೈನಿಕ್ ಭಾಸ್ಕರ್ ಕೂಡ ಮಾರ್ಚ್ 7, 2025 ರಂದು ಈ ಘಟನೆ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಕೊಲೆ ಆರೋಪಿ ಸಂಜಯ್ ಅಹಿರ್ವಾರ್ ಮತ್ತು ಬಬಲೇಶ್ ಚೌಹಾಣ್ ಒಟ್ಟಿಗೆ ಮದ್ಯಪಾನ ಮಾಡುತ್ತಿದ್ದರು. ಈ ಸಮಯದಲ್ಲಿ ಅವರ ನಡುವೆ ಜಗಳ ನಡೆದಿದೆ. ಅದೇ ರಾತ್ರಿ ಸಂಜಯ್ ಬಬಲೇಶ್ ವಿರುದ್ಧ ದೌರ್ಜನ್ಯ ಕಾಯ್ದೆಯಡಿಯಲ್ಲಿ ಹಲ್ಲೆಯ ಜೊತೆಗೆ ಪ್ರಕರಣ ದಾಖಲಿಸಿದರು. ಆದರೆ ಇದಾದ ನಂತರ, ಬಬಲೇಶ್ ಚೌಹಾಣ್ ಅವರ ಶವವನ್ನು ಬೆಳಿಗ್ಗೆ ಹೊರತೆಗೆಯಲಾಯಿತು. ಇದಾದ ನಂತರ, ಅವರ ಕುಟುಂಬ ಮತ್ತು ಸಮುದಾಯದ ಸದಸ್ಯರು ಮೃತ ದೇಹವನ್ನು ಇಟ್ಟುಕೊಂಡು ಪ್ರತಿಭಟಿಸಿದರು. ಈ ಸಮಯದಲ್ಲಿ, ಕೋಪಗೊಂಡ ಜನರು ಅಂಗಡಿಗೆ ಬೆಂಕಿ ಹಚ್ಚಿದರು ಮತ್ತು ಕೆಲವು ಮನೆಗಳಿಗೆ ನುಗ್ಗಿ ಜನರನ್ನು ಥಳಿಸಿದರು’’ ಎಂದು ಬರೆಯಲಾಗಿದೆ.
ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊ ಪಶ್ಚಿಮ ಬಂಗಾಳದ್ದಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.