ಇಸ್ಲಾಮಿಕ್ ಕ್ಯಾಲೆಂಡರ್‌ನ ಅತ್ಯಂತ ಪವಿತ್ರ ಮಾಸ ರಂಜಾನ್ ಆರಂಭವಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಬೃಹತ್ ಸ್ಫೋಟದ ವೀಡಿಯೊ ಒಂದು ವೈರಲ್ ಆಗುತ್ತಿದೆ. ಪಾಕಿಸ್ತಾನದ ಕರಾಚಿಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಬೆಂಕಿಯ ಮೋಡವು ಮೇಲಕ್ಕೆ ಹರಡುತ್ತಿದ್ದಂತೆ ಜನರು ರಸ್ತೆಗಳಲ್ಲಿ ದಿಕ್ಕಾಪಾಲಾಗಿ ಓಡುತ್ತಿರುವುದನ್ನು ನೋಡಬಹುದು.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರಂಜಾನ್ ಮೊದಲ ದಿನದಂದು, ಪಾಕಿಸ್ತಾನದ ಕರಾಚಿಯಲ್ಲಿ ಸಂಭವಿಸಿದ ಬೃಹತ್ ಸ್ಫೋಟಗಳಲ್ಲಿ 16 ಧರ್ಮಗುರುಗಳು, 5 ಮೇಕೆಗಳು ಮತ್ತು 72 ಹೂರ್‌ಗಳು ಸಾವನ್ನಪ್ಪಿದವು.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2025 ರಲ್ಲಿ ಸಿರಿಯಾದ ಡಮಾಸ್ಕಸ್ ಬಳಿಯ ಡೌಮಾದಲ್ಲಿ ಸಂಭವಿಸಿದ ಇಂಧನ ಟ್ಯಾಂಕ್ ಸ್ಫೋಟವನ್ನು ತೋರಿಸುತ್ತದೆ.
ನಿಜಾಂಶ ತಿಳಿಯಲು ನಾವು ಮೊದಲಿಗೆ, ಪಾಕಿಸ್ತಾನದ ಕರಾಚಿಯಲ್ಲಿ ಸ್ಫೋಟ ಸಂಭವಿಸಿದೆಯೇ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಈ ಸಂದರ್ಭ, ‘‘ಪಾಕಿಸ್ತಾನದ ಕರಾಚಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಮಕ್ಕಳು ಸೇರಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಸತಿ ಕಟ್ಟಡವೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕೆಲ ಮಂದಿ ಗಾಯಗೊಂಡಿದ್ದಾರೆ’’ ಎಂದು ಅನೇಕ ವರದಿಗಳುಕಂಡುಬಂದವು. ಆದರೆ, ವೈರಲ್ ವೀಡಿಯೊಕ್ಕೆ ಹೋಲಿಕೆಯಾಗುವ ಯಾವುದೇ ವೀಡಿಯೊ ವರದಿ ಅಥವಾ ಸುದ್ದಿ ಕಂಡುಬಂದಿಲ್ಲ.
ಬಳಿಕ ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ವೈರಲ್ ವೀಡಿಯೊದೊಂದಿಗೆ ಹಲವಾರು ಸುದ್ದಿ ವರದಿಗಳು ಸಿಕ್ಕವು. ಈ ವರದಿಗಳ ಪ್ರಕಾರ, ಈ ವೀಡಿಯೊ ಸಿರಿಯಾದ ಡಮಾಸ್ಕಸ್ ಬಳಿಯ ಗ್ರಾಮಾಂತರದಲ್ಲಿರುವ ಡೌಮಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟವನ್ನು ತೋರಿಸುತ್ತದೆ. ಈ ವರದಿಗಳನ್ನು ಅಲ್ ಜಜೀರಾ-ಸಿರಿಯಾ, ಸ್ಕೈ ಅರೇಬಿಯಾ ಮತ್ತು ಸಿರಿಯಾ ಟಿವಿಯಂತಹ ಮಾಧ್ಯಮಗಳು ಪ್ರಕಟಿಸಿವೆ.
ಅಲ್ ಜಜೀರಾ-ಸಿರಿಯಾ ಈ ವೀಡಿಯೊವನ್ನು ಮಾರ್ಚ್ 18, 2025 ರಂದು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದೆ. 'ಡಮಾಸ್ಕಸ್ ಗ್ರಾಮಾಂತರದಲ್ಲಿರುವ #ಡೌಮಾ ನಗರದ ಮಿಸ್ರಾಬಾ ಸೇತುವೆಯ ಬಳಿ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ' ಎಂಬ ಕ್ಯಾಪ್ಶನ್ ನೀಡಲಾಗಿದೆ.
ಇನ್ನು ಕರಾಚಿಯಲ್ಲಿ ಸ್ಫೋಟ ಸಂಭವಿಸಿದೆಯೆ ಎಂದು ಹುಡುಕಿದಾಗ, ಫೆಬ್ರವರಿ 19 ರಂದು
ಟಿವಿ9 ಕನ್ನಡ ವರದಿ ಮಾಡಿರುವುದು ಸಿಕ್ಕಿತು. ''ಫೆಬ್ರವರಿ 19 ರಂದು ಪಾಕಿಸ್ತಾನದ ಕರಾಚಿಯಲ್ಲಿ ಭಾರಿ ಸ್ಫೋಟ ಸಂಭವಿಸಿ ಮಕ್ಕಳು ಸೇರಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಸತಿ ಕಟ್ಟಡವೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಓಲ್ಡ್ ಸೋಲ್ಜರ್ ಬಜಾರ್ ಪ್ರದೇಶದ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ, ಪಾಕಿಸ್ತಾನದಲ್ಲಿ ಇಂದು ರಂಜಾನ್ ಮೊದಲ ದಿನವನ್ನು ಆಚರಿಸಲಾಗುತ್ತಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ'' ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನದ ಕರಾಚಿಯಲ್ಲಿ ಭಾರಿ ಸ್ಫೋಟ ನಡೆದಿರುವುದು ನಿಜವಾದರೂ ಇದಕ್ಕೆ ಸಂಬಂಧಿಸಿದಂತೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಕಂಡುಕೊಂಡಿದ್ದೇವೆ.