Fact Check: ಸಾಧು ಬೆಂಕಿಯಲ್ಲಿ ಮಲಗಿರುವ ಈ ವೀಡಿಯೊ ಮಹಾಕುಂಭದಲ್ಲ, ಇಲ್ಲಿದೆ ನಿಜಾಂಶ

ಕುಂಭಕ್ಕೆ ಬಂದಿದ್ದಾರೆ ಎನ್ನಲಾದ ಸಾಧುವಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಉರಿಯುತ್ತಿರುವ ಚಿತೆಯ ಮೇಲೆ ಮಲಗಿರುವುದನ್ನು ಕಾಣಬಹುದು.

By Vinay Bhat  Published on  16 Jan 2025 12:56 PM IST
Fact Check: ಸಾಧು ಬೆಂಕಿಯಲ್ಲಿ ಮಲಗಿರುವ ಈ ವೀಡಿಯೊ ಮಹಾಕುಂಭದಲ್ಲ, ಇಲ್ಲಿದೆ ನಿಜಾಂಶ
Claim: ಮಾಹಾಕುಂಭದಲ್ಲಿ ಜಲ ಸ್ನಾನದ ಮೊದಲು ಸಾಧು ಸಂತರು ಅಗ್ನಿ ಸ್ನಾನ ಮಾಡಿದ್ದಾರೆ.
Fact: ಈ ವೀಡಿಯೊಕ್ಕೂ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ. ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಸಾಧು ಒಬ್ಬರ ಸಾಕ್ಷ್ಯಚಿತ್ರದ ವೀಡಿಯೊ ಆಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಿಂದ ಮಹಾ ಕುಂಭಮೇಳ ಪ್ರಾರಂಭವಾಗಿದ್ದು, ಇದಕ್ಕಾಗಿ ದೇಶದ ಮೂಲೆ ಮೂಲೆಯಿಂದ ಋಷಿಮುನಿಗಳು ಮತ್ತು ಸಂತರು ಪ್ರಯಾಗರಾಜ್‌ಗೆ ಆಗಮಿಸುತ್ತಿದ್ದಾರೆ. ಏತನ್ಮಧ್ಯೆ, ಕುಂಭಕ್ಕೆ ಬಂದಿದ್ದಾರೆ ಎನ್ನಲಾದ ಸಾಧುವಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಉರಿಯುತ್ತಿರುವ ಚಿತೆಯ ಮೇಲೆ ಮಲಗಿರುವುದನ್ನು ಕಾಣಬಹುದು. ಈ ವೀಡಿಯೊದಲ್ಲಿ ಸಾಧುವಿನ ಬಟ್ಟೆ ಅಥವಾ ಕೂದಲಿಗೆ ಬೆಂಕಿ ತಹುಲುವುದಿಲ್ಲ ಅಥವಾ ಅವರ ದೇಹದ ಯಾವುದೇ ಭಾಗ ಸುಡುವುದಿಲ್ಲ. ಕೆಲ ಬಳಕೆದಾರರು ಈ ವೀಡಿಯೊವನ್ನು ಮಹಾಕುಂಭದಿಂದ ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚುಕೊಂಡು, ‘‘ಹರಿದ್ವಾರದ ಮಾಹಾಕುಂಭ ದಲ್ಲಿ ತ್ರಿವೇಣಿ ಸಂಗಮದಲ್ಲಿ ಜಲ ಸ್ನಾನ ದ ಮೊದಲು ಭಾರತದ ಸಾಧು ಸಂತರು ಅಗ್ನಿ ಸ್ನಾನ ಮಾಡಿದ್ದನ್ನು ಪ್ರತ್ಯಕ್ಷ ಕಂಡ ಬಿ.ಬಿ.ಸಿ.ಚಾನೆಲ್ ವರದಿಗಾರ ಬಹಳ ಚಕಿತನಾಗಿ ಹೋದ. ಸದಾ ಹಿಂದು ಸನಾತನ ಧಮ೯ವನ್ನು ತಮ್ಮ ಚಾನೆಲ್ ನ ಕಾಯ೯ಕ್ರಮಗಳಲ್ಲಿ ಹೀನಾಯವಾಗಿ ತೋರಿಸುವ ಬಿ.ಬಿ.ಸಿ. ಚಾನೆಲ್ ಇಂದು ತಮ್ಮ ಚಾನೆಲ್ ನಲ್ಲಿ ಭಾರತೀಯ ಸಂತರ ಬಗ್ಗೆ ಗೌರವ ಪೂರ್ವಕವಾಗಿ ಜಗತ್ತಿನ ಜನರಿಗೆ ತೋರಿಸುವುದು ಅನಿವಾರ್ಯ ವಾಯಿತು’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಕ್ಕೂ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ ಅಥವಾ ಇದನ್ನು ಬಿಬಿಸಿ ಮಾಡಿಲ್ಲ. ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಸಾಧು ಒಬ್ಬರ ಸಾಕ್ಷ್ಯಚಿತ್ರದ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೆಲ ಕೀ-ಫ್ರೇಮ್​ಗಳನ್ನು ತೆಗೆದು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಈ ವೀಡಿಯೊವನ್ನು ಹಲವು ಯೂಟ್ಯೂಬ್ ಚಾನಲ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. 2009ರ ನವೆಂಬರ್ 18 ರಂದು ಆಜ್ ತಕ್‌ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಾಧುವಿಗೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಂಡಿದೆ. ಆಜ್ ತಕ್ ಈ ವೀಡಿಯೊವನ್ನು ನಾಲ್ಕು ಭಾಗಗಳಲ್ಲಿ ಹಂಚಿಕೊಂಡಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ತಂಜಾವೂರಿನ ಶ್ರೀ ರಾಮಭಾವು ಸ್ವಾಮಿ ಕೇಸರಿ ವಸ್ತ್ರಗಳನ್ನು ಧರಿಸಿ ಬೆಂಕಿಯಲ್ಲಿ ಗಂಟೆಗಟ್ಟಲೆ ಧ್ಯಾನ ಮಾಡಿದನಾದರೂ ಅವರಿಗೆ ಯಾವುದೇ ಸುಟ್ಟಗಾಯ ಆಗಲಿಲ್ಲ. ಅವರ ಭಕ್ತರು ಇದನ್ನು ಪವಾಡವೆಂದು ಪರಿಗಣಿಸುತ್ತಾರೆ’’ ಎಂದು ವರದಿಯಾಗಿದೆ. ವೈರಲ್ ವೀಡಿಯೊದಲ್ಲಿರುವ ತುಣುಕನ್ನು ಆಜ್ ತಕ್ ಅಪ್ಲೋಡ್ ಮಾಡಿರುವ ವೀಡಿಯೊದಲ್ಲಿ 2 ನಿಮಿಷ 52 ಸೆಕೆಂಡ್​ನಿಂದ ಕಾಣಬಹುದು.

ಹಾಗೆಯೆ ಈ ವೀಡಿಯೊವನ್ನು 28 ಸೆಪ್ಟೆಂಬರ್ 2012 ರಂದು ದೇವಬುದ್ಧಮ್ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ‘ಅಗ್ನಿ ಯೋಗಿ- ಭಕ್ತಿಯ ಆಧ್ಯಾತ್ಮಿಕ ವಿಜ್ಞಾನ’ ಎಂದು ಶೀರ್ಷಿಕೆ ನೀಡಲಾಗಿದೆ. ವೈರಲ್ ವೀಡಿಯೊವನ್ನು ಹೋಲುವ ದೃಶ್ಯಗಳನ್ನು 17:30 ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ ತೋರಿಸಲಾಗಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಶ್ರೀ ರಾಮಭಾವು ಸ್ವಾಮಿಗಳು ಅಗ್ನಿಯೊಂದಿಗೆ ತನ್ನನ್ನು ತಾನು ಸಂಯೋಜಿಸಿಕೊಳ್ಳುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಸಾಕ್ಷ್ಯಚಿತ್ರವು ಅವರ ಕಥೆಯನ್ನು ಹೇಳುತ್ತದೆ ಮತ್ತು ವೈಜ್ಞಾನಿಕ ನಿರೀಕ್ಷೆಗಳನ್ನು ಮೀರಿಸಿದೆ. ಶ್ರೀ ಗುರು ರಾಮಬಾವು ಸ್ವಾಮಿಗಳು ಕಳೆದ 45 ವರ್ಷಗಳಿಂದ ವಿಶ್ವ ಶಾಂತಿ ಮತ್ತು ಎಲ್ಲಾ ವ್ಯಕ್ತಿಗಳ ಜ್ಞಾನೋದಯಕ್ಕೆ ಸಹಾಯ ಮಾಡಲು ಈ ಅಪರೂಪದ ಮತ್ತು ವಿಶಿಷ್ಟವಾದ 14 ಗಂಟೆಗಳ ಅಗ್ನಿಹೋತ್ರವನ್ನು ಪ್ರತಿನಿತ್ಯ ನಡೆಸುತ್ತಿದ್ದಾರೆ. ಕಷ್ಟಪಟ್ಟು ತಿನ್ನುವ ಅಥವಾ ಕುಡಿಯುವ ಶ್ರೀ ಗುರುಗಳು ದಿನಕ್ಕೆ 3 ಗಂಟೆಗಳ ಕಾಲ ನಿದ್ರಿಸುತ್ತಾರೆ’’ ಎಂದು ಹೇಳಲಾಗಿದೆ.

ಈ ಸಾಕ್ಷ್ಯಚಿತ್ರವನ್ನು 2 ನವೆಂಬರ್ 2011 ರಂದು ಕೂಡ ಮತ್ತೊಂದು ಯೂಟ್ಯೂಬ್ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹಾಗೆಯೆ ಈ 47 ನಿಮಿಷಗಳ ಸಾಕ್ಷ್ಯಚಿತ್ರದ DVD ಆವೃತ್ತಿಯು ಅಮೆಜಾನ್‌ನಲ್ಲಿ The Fire Yogi- A Story of an Extraordinary Journey ಎಂಬ ಹೆಸರಿನಲ್ಲಿ ಲಭ್ಯವಿದೆ. ಇದನ್ನು ಮೈಕ್ ವಾಸನ್ 2007 ರಲ್ಲಿ ರಚಿಸಿದರು.

ಇನ್ನು ಕುಂಭಮೇಳ 2025 ರ ಸಮಯದಲ್ಲಿ ಸಾಧು ಅವರು ಬೆಂಕಿಯ ಮೇಲೆ ಮಲಗಿರುವ ಬಗ್ಗೆ BBC ವರದಿ ಮಾಡಿದೆಯೆ ಎಂಬ ಬಗ್ಗೆ ಹುಡುಕಿದ್ದೇವೆ. ಆದರೆ ಅಂತಹ ಯಾವುದೇ ವರದಿ ನಮಗೆ ಕಂಡುಬಂದಿಲ್ಲ.

ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಹರಿದ್ವಾರ ಕುಂಭಮೇಳಕ್ಕೆ ಬಂದಿದ್ದ ಸಾಧುವು ಬೆಂಕಿಯ ಮೇಲೆ ಮಲಗಿದ್ದಾರೆ ಎಂದು ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಸುಳ್ಳು ಹೇಳಿಕೆ ನೀಡಿದ್ದಾರೆ. ಈ ವೀಡಿಯೋ ಕುಂಭಮೇಳದದ್ದಲ್ಲ ಬದಲಿಗೆ ಇದು ಕೆಲವು ವರ್ಷಗಳಷ್ಟು ಹಳೆಯದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಮಾಹಾಕುಂಭದಲ್ಲಿ ಜಲ ಸ್ನಾನದ ಮೊದಲು ಸಾಧು ಸಂತರು ಅಗ್ನಿ ಸ್ನಾನ ಮಾಡಿದ್ದಾರೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಈ ವೀಡಿಯೊಕ್ಕೂ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ. ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಸಾಧು ಒಬ್ಬರ ಸಾಕ್ಷ್ಯಚಿತ್ರದ ವೀಡಿಯೊ ಆಗಿದೆ.
Next Story