Fact Check: ವಿಮಾನದಲ್ಲಿ ನಮಾಜ್ ಮಾಡಿದ್ದಕ್ಕೆ ಮಹಿಳೆಯೊಬ್ಬಳು ಶಿವ ಸ್ತೋತ್ರ ಹಾಡುತ್ತಿದ್ದಾರೆ ಎಂದು ಸುಳ್ಳು ವೀಡಿಯೊ ವೈರಲ್

ವಿಮಾನದಲ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುವುದನ್ನು ನೋಡಿದ ಹಿಂದೂ ಮಹಿಳೆ ಪ್ರತಿಯಾಗಿ ಶಿವ ಸ್ತೋತ್ರ ಹಾಡಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ.

By Vinay Bhat  Published on  12 Sep 2024 5:28 AM GMT
Fact Check: ವಿಮಾನದಲ್ಲಿ ನಮಾಜ್ ಮಾಡಿದ್ದಕ್ಕೆ ಮಹಿಳೆಯೊಬ್ಬಳು ಶಿವ ಸ್ತೋತ್ರ ಹಾಡುತ್ತಿದ್ದಾರೆ ಎಂದು ಸುಳ್ಳು ವೀಡಿಯೊ ವೈರಲ್
Claim: ವಿಮಾನದಲ್ಲಿ ನಮಾಜ್ ಮಾಡುತ್ತಿರುವುದನ್ನು ನೋಡಿದ ಹಿಂದೂ ಮಹಿಳೆ ಶಿವ ಸ್ತೋತ್ರ ಹಾಡುತ್ತಿದ್ದಾರೆ.
Fact: 2024 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಮಾನದಲ್ಲಿ ಭಕ್ತಿಗೀತೆ ಹಾಡುವ ಮಹಿಳೆಯ ವೀಡಿಯೊ ಇದಾಗಿದೆ.
ವಿಮಾನದ ಒಳಗೆ ಬಿಳಿ ಕೋಟ್ ಮತ್ತು ಗುಲಾಬಿ ಕೋಟ್ ಧರಿಸಿದ ಮಹಿಳೆಯೊಬ್ಬರು ಭಕ್ತಿ ಗೀತೆ ಹಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಕೋಮು ಬಣ್ಣ ನೀಡಿ, ವಿಮಾನದಲ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುವುದನ್ನು ನೋಡಿದ ಹಿಂದೂ ಮಹಿಳೆ ಪ್ರತಿಯಾಗಿ ಶಿವ ಸ್ತೋತ್ರ ಹಾಡಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತಿದೆ. ವಿಮಾನದ ಕ್ಯಾಬಿನ್ ಸಿಬ್ಬಂದಿ ಈ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದು, ಬಾಲಿವುಡ್ನ ಕೇದಾರನಾಥ್ ಸಿನಿಮಾದ ನಮೋ ನಮೋ ಶಂಕರ್ ಹಾಡನ್ನು ಮಹಿಳೆ ಹಾಡುತ್ತಿದ್ದಾರೆ.
ನಾಗೇಶ್ ಪ್ರೀತಮ್ ಎಂಬ ಎಕ್ಸ್ ಬಳಕೆದಾರರು ಸೆಪ್ಟೆಂಬರ್ 9, 2024 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘ವಿಮಾನದಲ್ಲಿ ನಮಾಜ್ ಮಾಡಲು ಶುರು ಮಾಡಿದರು, ನಂತರ ಸನಾತನಿ ಮಹಿಳೆಯೊಬ್ಬಳು ಮಹಾದೇವನ ಸ್ತೋತ್ರ ಹಾಡಲು ಶುರು ಮಾಡಿದರು. ಇದು ಅದ್ಭುತವಾಗಿದೆ..! ಜೈ ಶ್ರೀ ರಾಮ್’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಫೇಸ್​ಬುಕ್​ನಲ್ಲಿ ದ್ರೋಣ ಎಂಬವರು ‘ವಿಮಾನದಲ್ಲಿ ನಮಾಜ್ ಮಾಡುತಿದ್ದದ್ದನ್ನ ನೋಡಿ ಶಿವನ ನಾಮ ಜಪಿಸಿದ ಹಿಂದೂ ಸಹೋದರಿ. ನಿನ್ನ ಧೈರ್ಯ ಮೆಚ್ಚುಲೇಬೇಕು ಹರ್ ಹರ್ ಮಹಾದೇವ’ ಎಂದು ಬರೆದು ಇದೇ ವೀಡಿಯೊ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಇದೇ ಹೇಳಿಕೆಯೊಂದಿಗೆ ವೈರಲ್ ಆಗಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ವೀಡಿಯೊದಲ್ಲಿ ಹಾಡುತ್ತಿರುವ ಮಹಿಳೆ ಕಲಾವಿದೆ ಮತ್ತು ಗಾಯಕಿ ನಿಶಾ ಶಿವದಾಸನಿ ಎಂದು ನಾವು ಕಂಡುಕೊಂಡಿದ್ದೇವೆ. ನಿಶಾ ಅವರು ಇದೇ ವೀಡಿಯೊವನ್ನು ಮತ್ತೊಂದು ಆ್ಯಂಗಲ್​ನಿಂದ ತಮ್ಮ ನಿಶಾ ಶಿವದಾಸನಿ ಯೂಟ್ಯೂಬ್ ಚಾನೆಲ್​ನಲ್ಲಿ ಮಾರ್ಚ್ 8, 2024 ರಂದು ಅಪ್‌ಲೋಡ್ ಮಾಡಿದ್ದಾರೆ. ಜೊತೆಗೆ "ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2024 ರ ಶುಭಾಶಯಗಳು | ನಿಶಾ ಶಿವದಾಸನಿ | ಇಂಡಿಗೋ ಏರ್‌ಲೈನ್ ಧನ್ಯವಾದಗಳು" ಎಂದು ಶೀರ್ಷಿಕೆ ನೀಡಿದ್ದಾರೆ.

ಈ ವೀಡಿಯೊದಲ್ಲಿ ನಿಶಾ ಅವರು ವಿಮಾನದಲ್ಲಿರುವ ಎಲ್ಲರ ಸಮ್ಮುಖದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಈ ಹಾಡು ಹಾಡಿದ್ದಾರೆ. ಈ ಹಾಡಿಗೆ ವಿಮಾನದಲ್ಲಿ ಕುಳಿತಿರುವ ಇತರೆ ಪ್ರಯಾಣಿಕರು ಕೂಡ ಪ್ರೋತ್ಸಾಹ ನೀಡುತ್ತಿರುವುದು ವೀಡಿಯೊದಲ್ಲಿದೆ.

ಹಾಗೆಯೆ ಡ್ರಂಕ್ ಜರ್ನಲಿಸ್ಟ್‌ ಎಂಬ ಎಕ್ಸ್ ಖಾತೆಯಲ್ಲಿ ಇದೇ ವೈರಲ್ ವೀಡಿಯೊ ಮಾರ್ಚ್ 31, 2024 ರಂದು ಪೋಸ್ಟ್ ಮಾಡಿರುವುದು ನಮಗೆ ಸಿಕ್ಕಿದೆ.

ಇದೀಗ ಈ ವೀಡಿಯೊ ಸುಳ್ಳು ಮಾಹಿತಿಯೊಂದಿಗೆ ವೈರಲ್ ಆಗುತ್ತಿರುವುದನ್ನು ಗಮನಿಸಿದ ಅವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ‘ಈ ವೀಡಿಯೊಕ್ಕೂ ನಮಾಜ್​ಗೂ ಯಾವುದೇ ಸಂಬಂಧವಿಲ್ಲ. ಈ ಮಹಿಳೆ ಭಜನೆಯನ್ನು ಹಾಡಿರುವ ವೀಡಿಯೊ ಇದಾಗಿದೆ ಮತ್ತು ಇದಕ್ಕೂ ಮುಸ್ಲಿಮರಿಗೂ ನಮಾಜ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ.

ಹಾಗೆಯೆ ನಾವು ಇತ್ತೀಚಿಗೆ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ನಮಾಜ್ ಮಾಡಿದ ಬಗ್ಗೆ ಸುದ್ದಿ ಪ್ರಕಟವಾಗಿದೆಯೆ ಎಂಬ ಗೂಗಲ್ ಸರ್ಚ್ ಮಾಡಿದ್ದೇವೆ. ಈ ಕುರಿತು ನಮಗೆ ಯಾವುದೇ ಪುರಾವೆಗಳು ಅಥವಾ ವರದಿಗಳು ಕಂಡುಬಂದಿಲ್ಲ. ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಬೆಂಗಳೂರಿನ ಇಂಡಿಗೋ ಏರ್‌ಲೈನ್ಸ್ ಅನ್ನು ಸಂಪರ್ಕಿಸಿದೆವು. ಇತ್ತೀಚಿಗೆ ಫ್ಲೈಟ್​ನಲ್ಲಿ ನಮಾಜ್ ಮಾಡಿರುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ನ್ಯೂಸ್ ಮೀಟರ್ ನಿಶಾ ಶಿವದಾಸನಿ ಅವರನ್ನು ಕೂಡ ಸಂಪರ್ಕಿಸಿದೆ. ಅವರ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಈ ಸ್ಟೋರಿಯನ್ನು ನವೀಕರಿಸಲಾಗುತ್ತದೆ.

ಹೀಗಾಗಿ ಮುಸ್ಲಿಂ ವ್ಯಕ್ತಿಯೊಬ್ಬರು ವಿಮಾನದಲ್ಲಿ ನಮಾಜ್ ಮಾಡಿದ್ದಕ್ಕೆ ಪ್ರತಿಯಾಗಿ ಮಹಿಳೆಯೊಬ್ಬಳು ಶಿವ ಸ್ತೋತ್ರ ಹಾಡುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. 2024 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಭಕ್ತಿಗೀತೆ ಹಾಡುವ ಮಹಿಳೆಯ ವೀಡಿಯೊ ಇದಾಗಿದೆ.

Claim Review:ವಿಮಾನದಲ್ಲಿ ನಮಾಜ್ ಮಾಡುತ್ತಿರುವುದನ್ನು ನೋಡಿದ ಹಿಂದೂ ಮಹಿಳೆ ಶಿವ ಸ್ತೋತ್ರ ಹಾಡುತ್ತಿದ್ದಾರೆ.
Claimed By:X User
Claim Reviewed By:News Meter
Claim Source:Social Media
Claim Fact Check:False
Fact:2024 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಮಾನದಲ್ಲಿ ಭಕ್ತಿಗೀತೆ ಹಾಡುವ ಮಹಿಳೆಯ ವೀಡಿಯೊ ಇದಾಗಿದೆ.
Next Story