ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಜನನಿಬಿಡ ರಸ್ತೆಯಲ್ಲಿ ವೃದ್ದ ವ್ಯಕ್ತಿಯೊಬ್ಬನ ಬೆನ್ನಿನ ಮೇಲೆ ದೈತ್ಯ ಆನೆಯೊಂದು ಕುಳಿತಿರುವುದು ಕಾಣಬಹುದು, ಆ ವ್ಯಕ್ತಿ ನೋವಿನಿಂದ ಸಹಾಯಕ್ಕಾಗಿ ಅಂಗಲಾಚುವುದು ಕಂಡುಬರುತ್ತದೆ. ಸುತ್ತಮುತ್ತಲಿನ ಜನರು ಸಹಾಯ ಮಾಡುವ ಬದಲು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಆನೆ ಶಕ್ತಿಗೆ ಮುದುಕು ಪುಡಿ-ಪುಡಿ ಕಡೆವರೆಗೂ ನೋಡಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನೈಜ್ಯವಾಗಿ ನಡೆದ ಘಟನೆ ಅಲ್ಲ, ಬದಲಾಗಿ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.
ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ನೈಜ್ಯತೆಗೆ ದೂರವಾದ ಅನೇಕ ಅಂಶಗಳು ಕಂಡುಬಂದವು. ಉದಾಹರಣೆಗೆ, ವೀಡಿಯೊದ ಬ್ಯಾಕ್ಗ್ರೌಂಡ್ನಲ್ಲಿ ಅನೇಕ ಜನರು ವಿಚಿತ್ರವಾಗಿ ನಡೆದುಕೊಂಡು ಹೋಗುತ್ತಾರೆ. ವಾಹನಗಳ ನಂಬರ್ ಪ್ಲೇಟ್ ಕೂಡ ವಿರೂಪಗೊಂಡಿದೆ. ಮೊಬೈಲ್ನಲ್ಲಿ ವೀಡಿಯೊ ರೆಕಾರ್ಡ್ ಮಾಡುವಾಗ ಡಿಸ್ಪ್ಲೇಯಲ್ಲಿ ಬೇರೆಯದೆ ವೀಡಿಯೊ ಕಾಣಿಸುತ್ತದೆ. ಆನೆಯ ಅಡಿಯಲ್ಲಿರುವ ವೃದ್ದಿನ ಹಾವ-ಭಾವ ಕೂಡ ವಿಚಿತ್ರವಾಗಿ ಕಾಣಿಸುತ್ತದೆ.
ಈ ಅಂಶವನ್ನೆಲ್ಲ ಗಮನಿಸಿದಾಗ ಈ ವೀಡಿಯೊ ನಿಜವಲ್ಲ, ಬದಲಾಗಿ AI-ರಚಿಸಿದ್ದು ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಹೆಚ್ಚಿನ ದೃಢೀಕರಣಕ್ಕಾಗಿ, ನಾವು ಅದನ್ನು AI ಪತ್ತೆ ಪರಿಕರಗಳೊಂದಿಗೆ ಪರೀಕ್ಷಿಸಿದ್ದೇವೆ. Hive Moderation ನಲ್ಲಿ ಪರೀಕ್ಷಿಸಿದಾಗ ಇದನ್ನು ಶೇ. 99.9 ರಷ್ಟು ಎಐಯಿಂದ ಸೃಷ್ಟಿಸಲಾಗಿದೆ ಎಂದು ಹೇಳಿದೆ. Sightengine ನಲ್ಲಿ ಪರೀಕ್ಷಿಸಿದಾಗ ಇದು ಶೇ. 99 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ.
ವೈರಲ್ ವೀಡಿಯೊದ ಮೂಲ ತಿಳಿಯಲು ನಾವು ಇದರ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ @remixmaster.s2k ಎಂಬ ಇನ್ಸ್ಟಾಗ್ರಾಮ್ ಖಾತೆಯು ಈ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿದೆ. ಇವರು ಡಿಜಿಟಲ್ ಸೃಷ್ಟಿಕರ್ತರಾಗಿದ್ದು, ಈ ಖಾತೆಯಲ್ಲಿ ಎಐಯಿಂದ ರಚಿಸಿದ ಅನೇಕ ವೀಡಿಯೊಗಳಿವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ವೀಕ್ಷಿಸಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಆನೆಯೊಂದು ವೃದ್ಧ ವ್ಯಕ್ತಿಯ ಬೆನ್ನಿನ ಮೇಲೆ ಕುಳಿತಿರುವ ವೈರಲ್ ವೀಡಿಯೊ ಸುಳ್ಳು, ಇದನ್ನು ಎಐಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.