ಇಬ್ಬರು ಮಕ್ಕಳ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಮಕ್ಕಳು ವರದಿಗಾರನ ಬಳಿ ಭಾರತದ ವಿರುದ್ಧ ಮಾತನಾಡುತ್ತಿರುವುದನ್ನು ಕಾಣಬಹುದು. ವೀಡಿಯೋದಲ್ಲಿ ಮುಸ್ಲಿಂ ಹುಡುಗನೊಬ್ಬ ವರದಿಗಾರನ ಜೊತೆ ಮಾತನಾಡುವಾಗ "ಭಾರತೀಯರು ಒಂದು ಕಾಲದಲ್ಲಿ ಇದ್ದರು ಎಂದು ಜಗತ್ತಿನಲ್ಲಿ ಯಾವುದೇ ಹೆಸರಿಲ್ಲ. ದೇವರು ಬಯಸಿದರೆ ಆರು ತಿಂಗಳೊಳಗೆ ಅವರು ನಿರ್ಮೂಲನೆ ಮಾಡುತ್ತಾರೆ. ಅವರು ನಮಗೆ ಏನನ್ನೂ ಕೆಟ್ಟದನ್ನು ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾನೆ.
ಎಕ್ಸ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮುಲ್ಲಾ ಅವರಿಂದ ತರಬೇತಿ ಪಡೆದ ಭಾರತೀಯ ಮದ್ರಾಸಾ ವಿದ್ಯಾರ್ಥಿಗಳು. ಇಸ್ಲಾಂ ಮುಸ್ಲಿಂ ಇದರ ಕರಾಳ ಸತ್ಯ. ಇಡೀ ಪ್ರಪಂಚದಲ್ಲಿ ಇವರು ನೆಮ್ಮದಿಯಿಂದ ಇರೋದಿಲ್ಲ. ನೆಮ್ಮದಿಯಾಗಿ ಇರುವವರನ್ನು ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ. ಇಸ್ಲಾಮಿನ ಮುಸ್ಲಿಮರ ಕರಾಳ ಸತ್ಯ ಇದೆ’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಫೇಸ್ಬುಕ್ ಬಳಕೆದಾರ ಕೂಡ ಇದೇ ವೀಡಿಯೊ ಹಂಚಿಕೊಂಡು, ‘‘ಈಗ ಅರ್ಥವಾಯಿತ ಮದ್ರಸಾಗಳಲ್ಲಿ ನೀಡುತ್ತಿರುವ ಶಿಕ್ಷಣದ ಮಹತ್ವ ಏನಂತ...!..ಇನ್ನೂ ಮಕ್ಕಳವು..’’ ಎಂದು ಬರೆದಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಮ್ಮ ತನಿಖೆಯಲ್ಲಿ ವೈರಲ್ ಆಗಿರುವ ವೀಡಿಯೊ ಭಾರತದಿಂದಲ್ಲ, ಪಾಕಿಸ್ತಾನದಿಂದ ಬಂದಿದೆ ಎಂಬುದು ಕಂಡುಹಿಡಿದಿದೆ.
ನಿಜಾಂಶವನ್ನು ತಿಳಿಯಲು ನಾವು ಈ ವೈರಲ್ ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಆಗ ವ್ಯಕ್ತಿಯ ಕೈಯಲ್ಲಿರುವ ಮೈಕ್ ಮೇಲೆ D7 NEWS ಎಂದು ಬರೆಯಲಾಗಿದೆ. ಈ ಆಧಾರದ ಮೇಲೆ, ನಾವು ನಮ್ಮ ತನಿಖೆಯನ್ನು ಮುಂದುವರಿಸಿದ್ದೇವೆ. ಗೂಗಲ್ನಲ್ಲಿ D7 NEWS ಸರ್ಚ್ ಮಾಡಿದ್ದೇವೆ. ಆಗ ನಮಗೆ
D7 NEWS PAKISTAN OFFICIAL ಹೆಸರಿನ ಯೂಟ್ಯೂಬ್ ಚಾನೆಲ್ ಸಿಕ್ಕಿತು. ವೈರಲ್ ವೀಡಿಯೊದಲ್ಲಿ ಮೈಕ್ ಹಿಡಿದುಕೊಂಡಿರುವ ವ್ಯಕ್ತಿಯೇ ಈ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವೀಡಿಯೊದಲ್ಲಿ ಕಾಣಬಹುದು.
ಈ ಚಾನೆಲ್‌ನಲ್ಲಿ ಹುಡುಕಾಟ ನಡೆಸಿದಾಗ ಸದ್ಯ ವೈರಲ್ ಆಗುತ್ತಿರುವ ವೀಡಿಯೊ ಕೂಡ ನಮಗೆ ಸಿಕ್ಕಿದೆ. ಆಗಸ್ಟ್ 31, 2024 ರಂದು ಅಪ್‌ಲೋಡ್ ಮಾಡಲಾದ ಈ ವೀಡಿಯೊದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ವರದಿಗಾರ ಜನರೊಂದಿಗೆ ಮಾತನಾಡುತ್ತಿರುವುದನ್ನು ಇಲ್ಲಿ ಕಾಣಬಹುದು. ಈ ವೀಡಿಯೊದ 11ನೇ ನಿಮಿಷದಲ್ಲಿ ವೈರಲ್ ವೀಡಿಯೊದಲ್ಲಿರುವ ಕ್ಲಿಪ್ ಇದೆ.
ವರದಿಗಾರ ಜನರ ಬಳಿ, “ಐದು ವರ್ಷಗಳಲ್ಲಿ ನಾವು ಭಾರತದ ಎಲ್ಲಾ ಮುಸ್ಲಿಮರನ್ನು ನಾಶಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಅವರು ಮುಸ್ಲಿಮರನ್ನು ನಿರ್ನಾಮ ಮಾಡಲು ಸಾಧ್ಯವೇ?’’ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿರುವುದು ಈ ವೀಡಿಯೊದಲ್ಲಿದೆ. ಈ ಯೂಟ್ಯೂಬ್ ಚಾನೆಲ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಇದನ್ನು ಪಾಕಿಸ್ತಾನದಿಂದ ಬಂದಿದೆ.
ಹಾಗೆಯೆ ನಾವು ನಾವು ಯೋಗಿ ಆದಿತ್ಯನಾಥ್ ಈ ರೀತಿಯ ಹೇಳಿಕೆ ನೀಡಿದ್ದಾರೆಯೆ ಎಂಬುದನ್ನು ಅಂತರ್ಜಾಲದಲ್ಲಿ ಹುಡುಕಿದೆವು, ಆದರೆ ಅವರು ಮುಸ್ಲಿಂ ಸಮುದಾಯವನ್ನು ತೊಡೆದುಹಾಕುವ ಬಗೆಗಿನ ವರದಿಗಳು ಎಲ್ಲೂ ನಮಗೆ ಕಂಡುಬಂದಿಲ್ಲ. ಹೀಗಾಗಿ ನ್ಯೂಸ್ ಮೀಟಿರ್ ತನ್ನ ತನಿಖೆಯಲ್ಲಿ ವೈರಲ್ ಆಗಿರುವ ವೀಡಿಯೊ ಭಾರತದದ್ದಲ್ಲ ಪಾಕಿಸ್ತಾನದ್ದು ಎಂಬುದು ಸಾಬೀತಾಗಿದೆ.