ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಕೆಲವು ಜನರು ಬಹುಮಹಡಿಯ ಮನೆಯ ಮೇಲೆ ಹತ್ತಲು ಪ್ರಯತ್ನ ಮಾಡುತ್ತಿರುವುದು ಕಾಣಬಹುದು. ಹಾಗೆ ಇನ್ನೂ ಕೆಲ ಜನರು ಮನೆಯ ಬಾಗಿಲು ಒಡೆದು ಒಳ ಹೋಗಲು ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಮರು ಪಶ್ಚಿಮ ಬಂಗಾಳದ ಹಿಂದುಗಳ ಮನೆಗಳನ್ನ ಟಾರ್ಗೆಟ್ ಮಾಡಿ ದೋಚುತ್ತಿದ್ದಾರೆ ಎಂದು ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಫೆಬ್ರವರಿ 25, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಈ ದೃಶ್ಯ ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಅಲ್ಲ. ನೆರೆಯ ಪಶ್ಚಿಮ ಬಂಗಾಳ. ಹಿಂದುಗಳ ಮನೆಗಳನ್ನ ಟಾರ್ಗೆಟ್ ಮಾಡಿ ದೋಚುತಿರೋದು ಯಾವ ರಾಜ ಕಾರಣಿ ನೀನು ಬರೋಲ್ಲ ಯಾವ ಮೀಡಿಯಾ ಕೂಡ ಬರೋಲ್ಲ ನಿಮ್ಮ ರಕ್ಷಣೆ ಮಾಡೋಕೆ. ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿದೆ. ಹಿಂದುಗಳೇ ಎಚ್ಚರ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ಘಟನೆ ನಡೆದಿರುವುದು ಭಾರತದಲ್ಲೇ ಅಲ್ಲ. ಇದು ಆಗಸ್ಟ್ 21, 2022 ರಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಈ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ಗೆ ಹೊಂದಿಕೆಯಾಗುವ ಅನೇಕ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇದರಲ್ಲಿರುವ ಮಾಹಿತಿಯ ಪ್ರಕಾರ, ಆಗಸ್ಟ್ 21, 2022 ರಂದು, ‘‘ಪಾಕಿಸ್ತಾನದ ಹೈದರಾಬಾದ್‌ನಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಹಿಂದೂ ನೈರ್ಮಲ್ಯ ಕಾರ್ಮಿಕ ಅಶೋಕ್ ಕುಮಾರ್ ವಿರುದ್ಧ 295B ಅಡಿಯಲ್ಲಿ ಧರ್ಮನಿಂದೆಯ ಪ್ರಕರಣ ದಾಖಲಿಸಲಾಯಿತು. ಸ್ಥಳೀಯ ಅಂಗಡಿಯವನೊಂದಿಗೆ ನಡೆದ ಜಗಳದಲ್ಲಿ ಅಶೋಕ್ ಕುಮಾರ್ ವಿರುದ್ಧ ದೂರು ದಾಖಲಿಸಿದ ನಂತರ ಈ ಆರೋಪ ಹೊರಿಸಲಾಗಿದೆ. ಇದನ್ನು ತಿಳಿದ ಒಂದು ದೊಡ್ಡ ಗುಂಪು ಜಮಾಯಿಸಿ ಕುಮಾರ್ ಅವರನ್ನು ಹಿಡಿಯಲು ಪ್ರಯತ್ನಿಸಿತು. ನಂತರ, ಸಿಂಧ್ ಪೊಲೀಸರು ಗುಂಪನ್ನು ಚದುರಿಸಿದರು’’ ಎಂದು ವರದಿಯಲ್ಲಿದೆ.
Global Hook ಯೂಟ್ಯೂಬ್ ಚಾನೆಲ್ನಲ್ಲಿ ಕೂಡ ಇದೇ ವೈರಲ್ ವೀಡಿಯೊವನ್ನು ಆಗಸ್ಟ್ 23, 2022 ರಂದು ಅಪ್ಲೋಡ್ ಮಾಡಲಾಗಿದ್ದು, ‘‘ಧಾರ್ಮಿಕ ಪುಸ್ತಕದ ಪುಟಗಳನ್ನು ಸುಟ್ಟು ದೇವದೂಷಣೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಹಿಂದೂ ನೈರ್ಮಲ್ಯ ಕಾರ್ಮಿಕರೊಬ್ಬರನ್ನು ಬಂಧಿಸಲಾಗಿದೆ. ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ್ ಎಂಬ ಉಗ್ರಗಾಮಿ ಗುಂಪು ಭಾನುವಾರ ಹಿಂದೂ ಕುಟುಂಬಗಳು ವಾಸಿಸುವ ವಸತಿ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದ ನಂತರ ಅಶೋಕ್ ಕುಮಾರ್ ಅವರನ್ನು ಬಂಧಿಸಲಾಗಿದೆ’’ ಎಂದು ಮಾಹಿತಿ ನೀಡಿದೆ.
ಟೈಮ್ಸ್ ನೌ ಆಗಸ್ಟ್ 23, 2022 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ವರದಿ ಮಾಡಿದ್ದು, ಕುರಾನ್ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಪಾಕಿಸ್ತಾನದ ಹೈದರಾಬಾದ್‌ನಲ್ಲಿರುವ ಹಿಂದೂ ನೈರ್ಮಲ್ಯ ಕಾರ್ಮಿಕರೊಬ್ಬರ ವಿರುದ್ಧ ಧರ್ಮನಿಂದೆಯ ನಕಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅಶೋಕ್ ಕುಮಾರ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಕಸ ಗುಡಿಸುವ ಕೆಲಸಗಾರನಾಗಿದ್ದಾನೆ. ಉದ್ರಿಕ್ತ ಗುಂಪೊಂದು ಅಶೋಕ್ ಕುಮಾರ್ ಅವರನ್ನು ಹಿಡಿಯಲು ಅಪಾರ್ಟ್ಮೆಂಟ್ ಕಟ್ಟಡದ ಸುತ್ತಲೂ ಜಮಾಯಿಸಿತು. ಆದರೆ, ಹೈದರಾಬಾದ್ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿದರು’’ ಎಂದು ಬರೆದುಕೊಂಡಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಹಿಂದುಗಳ ಮನೆಗಳನ್ನ ಟಾರ್ಗೆಟ್ ಮಾಡಿ ದೋಚುತ್ತಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಪಾಕಿಸ್ತಾನದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯ ಮೇಲೆ ದಾಳಿ ಮಾಡಲು ಯತ್ನಿಸುತ್ತಿರುವ ವೀಡಿಯೊ ಆಗಿದೆ.