Fact Check: ಹಸುವಿನ ಬಾಲ ಕತ್ತರಿಸಿದ ಮುಸ್ಲಿಂ ಯುವಕರಿಗೆ ಪೊಲೀಸರು ಥಳಿಸುತ್ತಿದ್ದಾರೆಂಬ ವೈರಲ್ ವೀಡಿಯೊ ಫೇಕ್

ಖಾಕಿ ಸಮವಸ್ತ್ರವನ್ನು ಧರಿಸಿದ್ದ ಇಬ್ಬರು ಪೊಲೀಸರು ಕೆಲವು ಯುವಕರನ್ನು ಅಮಾನುಷವಾಗಿ ಥಳಿಸುತ್ತಿದ್ದಾರೆ. ಈ ಮುಸ್ಲಿಂ ಯುವಕರು ಹಸುವಿನ ಬಾಲ ಕತ್ತರಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಅನೇಕರು ಹಂಚಿಕೊಂಡಿದ್ದಾರೆ.

By Vinay Bhat  Published on  1 Sep 2024 8:49 AM GMT
Fact Check: ಹಸುವಿನ ಬಾಲ ಕತ್ತರಿಸಿದ ಮುಸ್ಲಿಂ ಯುವಕರಿಗೆ ಪೊಲೀಸರು ಥಳಿಸುತ್ತಿದ್ದಾರೆಂಬ ವೈರಲ್ ವೀಡಿಯೊ ಫೇಕ್
Claim: ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಯುವಕರಿಗೆ ಪೊಲೀಸರು ಥಳಿಸಿದ್ದಾರೆ.
Fact: 2022ರಲ್ಲಿ ಉತ್ತರ ಪ್ರದೇಶದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನಕಾರರನ್ನು ಬಂಧಿಸಿದಾಗ ನಡೆದ ಘಟನೆ ಇದಾಗಿದೆ.

ಒಂದು ಕೊಠಡಿಯೊಳಗೆ ಪೊಲೀಸರು ಕೆಲ ಮಂದಿಗೆ ಲಾಠಿಯಲ್ಲಿ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 32 ಸೆಕಂಡ್​ಗಳ ಈ ವೀಡಿಯೊದಲ್ಲಿ, ಖಾಕಿ ಸಮವಸ್ತ್ರವನ್ನು ಧರಿಸಿದ್ದ ಇಬ್ಬರು ಪೊಲೀಸರು ಕೆಲವು ಯುವಕರನ್ನು ಅಮಾನುಷವಾಗಿ ಥಳಿಸುತ್ತಿದ್ದಾರೆ. ಈ ಮುಸ್ಲಿಂ ಯುವಕರು ಹಸುವಿನ ಬಾಲ ಕತ್ತರಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಅನೇಕರು ಹಂಚಿಕೊಂಡಿದ್ದಾರೆ.

ಮಲ್ಲಿಕಾರ್ಜುನ ಎಂಬ ಎಕ್ಸ್ ಬಳಕೆದಾರರು ಆಗಸ್ಟ್ 31, 2024 ರಂದು ಈ ವೀಡಿಯೊವನ್ನು ಅಪ್ಲೋಡ್ ಮಾಡಿದ್ದು, ಇದಕ್ಕೆ "ರಾಜಸ್ಥಾನದ ಭಿಲ್ವಾರಾದಲ್ಲಿ 25 ಆಗಸ್ಟ್ 24 ರಂದು ಹಸುವಿನ ಬಾಲವನ್ನು ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಸಮುದಾಯದ 8 ದಾರಿತಪ್ಪಿದ ಯುವಕರಿಗೆ ರಾಜಸ್ಥಾನ ಪೊಲೀಸರು ಆತಿಥ್ಯವನ್ನು ನೀಡಿದರು." ಎಂಬ ಕ್ಯಾಪ್ಷನ್ ನೀಡಿದ್ದಾರೆ.

ಹಾಗೆಯೆ सत्ता की पटरी ಎಂಬ ಎಕ್ಸ್ ಖಾತೆಯಲ್ಲಿ ಇದೇ ವೀಡಿಯೊ ಹಂಚಿಕೊಳ್ಳಲಾಗಿದ್ದು, "ರಾಜಸ್ಥಾನದ ಭಿಲ್ವಾರಾದಲ್ಲಿ, ಆಗಸ್ಟ್ 25, 2024 ರಂದು, ರಾಜಸ್ಥಾನ ಪೊಲೀಸರು ಹಸುವಿನ ಬಾಲವನ್ನು ಕತ್ತರಿಸಿ ದೇವಾಲಯದ ಬಾಗಿಲಿಗೆ ಎಸೆದ 'ಶಾಂತಿದತ್' ಸಮುದಾಯದ 8 ಜಿಹಾದಿ ಯುವಕರಿಗೆ ವಿಶೇಷ 'ಆತಿಥ್ಯ'ವನ್ನು ನೀಡಿದರು. ಈ ಚಿಕಿತ್ಸೆ ಸರಿಯಾಗಿತ್ತು ಅಲ್ಲವೇ?" ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಕ್ಯಾಪ್ಷನ್​ನೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಸದ್ಯ ವೈರಲ್ ಆಗುತ್ತಿರುವ ವೀಡಿಯೊ ಹಳೆಯದು ಮತ್ತು ಇದು ಉತ್ತರ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ.

ಈ ವೀಡಿಯೊದ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ನಾವು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡುವಾಗ, ಇದೇ ವೀಡಿಯೊ ಜುಲೈ 5, 2022 ರಂದು ಎನ್​ಡಿಟಿವಿಯಲ್ಲಿ ಅಪ್‌ಲೋಡ್ ಆಗಿರುವುದು ನಮಗೆ ಕಂಡುಬಂದಿದೆ.

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಎಂಟು ಮಂದಿಯನ್ನು ಕಸ್ಟಡಿಯಲ್ಲಿ ಪೊಲೀಸರು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಇವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.

ವೀಡಿಯೊಕ್ಕೆ ಸಂಬಂಧಿಸಿದ ಶೀರ್ಷಿಕೆ ಹೀಗಿದೆ: “ಕಳೆದ ತಿಂಗಳು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ಪ್ರತಿಭಟನೆಯ ನಂತರ ವೈರಲ್ ವೀಡಿಯೊದಲ್ಲಿರುವ ಪೋಲಿಸರು ಕಸ್ಟಡಿಯಲ್ಲಿದ್ದ ಎಂಟು ಮಂದಿಯನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪೊಲೀಸರು ಹೇಳಿದ ನಂತರ ಮತ್ತು ಸ್ಥಳೀಯ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದ ನಂತರ, ಅವರು ನಿನ್ನೆ ಜೈಲಿನಿಂದ ಹೊರಬಂದಿದ್ದಾರೆ.’’ ಎಂದು ಬರೆಯಲಾಗಿದೆ.

ಹಾಗೆಯೆ ಇದೇ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ನಾವು ಜೂನ್ 21, 2022 ರಂದು ಇಂಡಿಯಾ ಟುಡೇ ಪ್ರಕಟಿಸಿರುವ ಸುದ್ದಿಯಲ್ಲೂ ಕಂಡಿದ್ದೇವೆ. ‘ಯುಪಿಯಲ್ಲಿ ನೂಪುರ್ ಶರ್ಮಾ ಅವರ ಪ್ರವಾದಿ ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ವಿರುದ್ಧ ಪೊಲೀಸ್ ದೌರ್ಜನ್ಯ ಮತ್ತು ಅಮಾನವೀಯ ವರ್ತನೆಯ ಆರೋಪಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಎಸ್‌ಎಸ್‌ಪಿ ಸಹರಾನ್‌ಪುರದಿಂದ ಪ್ರತಿಕ್ರಿಯೆ ಕೇಳಿದೆ’ ಎಂದು ವರದಿಯಲ್ಲಿದೆ.

ಟೈಮ್ಸ್ ನೌ ನ್ಯೂಸ್ ಕೂಡ ಜೂನ್ 17, 2022 ರಂದು ಈ ಘಟನೆಯ ಬಗ್ಗೆ ವರದಿ ಮಾಡಿದೆ. "ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್‌ ಶರ್ಮಾ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಹಿಂಸಾಚಾರ ಭುಗಿಲೆದ್ದ ನಂತರ ಜೂನ್ 10 ರಂದು ಸಹರಾನ್‌ಪುರದ ಪೊಲೀಸರು ಲಾಕಪ್‌ನಲ್ಲಿ ಪ್ರತಿಭಟನಾಕಾರರನ್ನು ಥಳಿಸಿದ ವೈರಲ್ ವೀಡಿಯೊದ ಕುರಿತು ತನಿಖೆಗೆ ಆದೇಶಿಸಲಾಗಿದೆ" ಎಂದು ವರದಿ ಹೇಳಿದೆ.

ಹಸುವಿನ ಬಾಲ ಕತ್ತರಿಸಿದ ಆರೋಪಿ ಅರೆಸ್ಟ್:

ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಘಟನೆ ಆಗಸ್ಟ್ 25, 2024 ರಂದು ಭಿಲ್ವಾರದಲ್ಲಿ ನಡೆದಿರುವುದು ನಿಜ. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊಕ್ಕೆ ಮತ್ತು ಶೀರ್ಷಿಕೆಗು ಯಾವುದೇ ಸಂಬಂಧವಿಲ್ಲ. ‘ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರ ಹನುಮಾನ್ ದೇಗುಲ ಸಂಕೀರ್ಣದಲ್ಲಿ ಹಸುವಿನ ಬಾಲವನ್ನು ಕತ್ತರಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಹುಸೇನ್ ಕಾಲೋನಿ ಶಾಸ್ತ್ರಿ ನಗರದ ನಿವಾಸಿ ನಿಸಾರ್ ಮೊಹಮ್ಮದ್ ಅವರ ಮಗ ಬಬ್ಲು ಶಾ(40 ವರ್ಷ) ಅವರನ್ನು ಬಂಧಿಸಿದ್ದಾರೆ’ ಎಂದು ಎಬಿಪಿ ಲೈವ್ ಆಗಸ್ಟ್ 29, 2024 ರಂದು ವರದಿ ಮಾಡಿದೆ.

ಹೀಗಾಗಿ ಹಸುವಿನ ಬಾಲವನ್ನು ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಸಮುದಾಯದ 8 ಯುವಕರಿಗೆ ರಾಜಸ್ಥಾನ ಪೊಲೀಸರು ಥಳಿಸಿದ್ದಾರೆ ಎನ್ನಲಾಗುತ್ತಿರುವ ವೀಡಿಯೊ ಸುಳ್ಳಾಗಿದೆ. ಇದು 2022ರಲ್ಲಿ ಉತ್ತರ ಪ್ರದೇಶದಲ್ಲಿ ನಡದ ಘಟನೆಗೆ ಸಂಬಂಧಿಸಿದ್ದು ಎಂಬ ನಾವು ಖಚಿತವಾಗಿ ಹೇಳುತ್ತೇವೆ.

Claim Review:ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಯುವಕರಿಗೆ ಪೊಲೀಸರು ಥಳಿಸಿದ್ದಾರೆ.
Claimed By:X User
Claim Reviewed By:News Meter
Claim Source:Social Media
Claim Fact Check:False
Fact:2022ರಲ್ಲಿ ಉತ್ತರ ಪ್ರದೇಶದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನಕಾರರನ್ನು ಬಂಧಿಸಿದಾಗ ನಡೆದ ಘಟನೆ ಇದಾಗಿದೆ.
Next Story