Fact Check: ಬಹಿರಂಗವಾಗಿ ನಮಾಜ್ ಮಾಡುತ್ತಿರುವ ಈ ವೀಡಿಯೊ ಮಹಾರಾಷ್ಟ್ರದ್ದಲ್ಲ, ಇದು ತೆಲಂಗಾಣದ್ದು

ಬಹಿರಂಗ ಸ್ಥಳದಲ್ಲಿ ನಮಾಜ್ ಮಾಡುತ್ತಿರುವ ಈ ವೀಡಿಯೊ ಮಹಾರಾಷ್ಟ್ರದ್ದಲ್ಲ, ಬದಲಾಗಿ ಇದು ತೆಲಂಗಾಣದ್ದು ಎಂದು ತಿಳಿದುಬಂದಿದೆ.

By Vinay Bhat  Published on  8 Jan 2025 11:46 AM IST
Fact Check: ಬಹಿರಂಗವಾಗಿ ನಮಾಜ್ ಮಾಡುತ್ತಿರುವ ಈ ವೀಡಿಯೊ ಮಹಾರಾಷ್ಟ್ರದ್ದಲ್ಲ, ಇದು ತೆಲಂಗಾಣದ್ದು
Claim: ಈ ದೃಶ್ಯ ಬಾಂಗ್ಲಾದೇಶದ್ದೋ ಅಥವಾ ಪಾಕಿಸ್ತಾನದ್ದೋ ಅಲ್ಲ. ಮಹಾರಾಷ್ಟ್ರದಲ್ಲಿ ಕಂಡುಬಂದ ದೃಶ್ಯ.
Fact: ಜನರು ಬಹಿರಂಗವಾಗಿ ನಮಾಜ್ ಮಾಡುತ್ತಿರುವ ವೈರಲ್ ವೀಡಿಯೊ ಮಹಾರಾಷ್ಟ್ರದಿಂದಲ್ಲ, ತೆಲಂಗಾಣದ ಶಂಕರಪಲ್ಲಿಯದ್ದು.

ತೆರೆದ ಮೈದಾನ ಒಂದರಲ್ಲಿ ಸಾವಿರಾರು ಜನರು ನಮಾಜ್ ಮಾಡುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 26 ಸೆಕೆಂಡ್​ಗಳ ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ಬಳಕೆದಾರರು ಇದು ಮಹಾರಾಷ್ಟ್ರದಿಂದ ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೆಸ್​ಬುಕ್ ಬಳಕೆದಾರರೊಬ್ಬರು ಜನವರಿ 5, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಈ ದೃಶ್ಯ ಬಾಂಗ್ಲಾದೇಶದ್ದೋ ಅಥವಾ ಪಾಕಿಸ್ತಾನದ್ದೋ ಅಲ್ಲ !!! ಮಹಾರಾಷ್ಟ್ರದಲ್ಲಿ ಕಂಡುಬಂದ ದೃಶ್ಯ. ಸಮಯ ಮೀರಿದ ಮೇಲೆ ನಾವು ಎಚ್ಚೆತ್ತುಕೊಂಡರೂ ಪ್ರಯೋಜನವಿಲ್ಲ ಹಿಂದೂಗಳೇ’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬಹಿರಂಗ ಸ್ಥಳದಲ್ಲಿ ನಮಾಜ್ ಮಾಡುತ್ತಿರುವ ಈ ವೀಡಿಯೊ ಮಹಾರಾಷ್ಟ್ರದ್ದಲ್ಲ, ಬದಲಾಗಿ ಇದು ತೆಲಂಗಾಣದ್ದು ಎಂದು ತಿಳಿದುಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ತೆಲಂಗಾಣದ ಡೆಕ್ಕನ್ ನ್ಯೂಸ್ ಡೈಲಿ ಫೇಸ್‌ಬುಕ್ ಖಾತೆಯಲ್ಲಿ ವೈರಲ್ ವೀಡಿಯೊಗೆ ಹೆಚ್ಚಿನ ಪ್ರಮಾಣದಲ್ಲಿ ಹೊಂದಿಕೆಯಾಗುವ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಈ ಪೋಸ್ಟ್ ಅನ್ನು ಜನವರಿ 5, 2025 ರಂದು ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು, ತಬ್ಲಿಘಿ ಜಮಾತ್‌ನ ವೀಡಿಯೊ ವೈರಲ್ ಎಂದು ಬರೆದು ತೆಲಂಗಾಣ ಮತ್ತು ಶಂಕರಪಲ್ಲಿ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಹಂಚಿಕೊಳ್ಳಲಾಗಿದೆ.

ಹಾಗೆಯೆ AHN News ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಕೂಡ ನಾವು ವೈರಲ್ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು 4 ಜನವರಿ 2025 ರಂದು ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿರುವ ಮಾಹಿತಿ ಪ್ರಕಾರ, ‘‘ಶಂಕರಪಲ್ಲಿಯ ಅತಿಥಿ ಮೈದಾನದಲ್ಲಿ ಇಜ್ತೆಮಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ತಬ್ಲಿಘಿ ಇಜ್ತೆಮಾ ಕಾರ್ಯಕ್ರಮದಲ್ಲಿ ಲಕ್ಷಾಂತರ ಮುಸ್ಲಿಮರು ಭಾಗವಹಿಸಿದ್ದರು’’ ಎಂದು ಹೇಳಲಾಗಿದೆ.

ಶಂಕರಪಲ್ಲಿಯ ಅತಿಥಿ ಮೈದಾನದಲ್ಲಿ ಇಜ್ತೆಮಾ ಕಾರ್ಯಕ್ರಮ ಎಂದು ಹೈದರಾವಾದ್​ನ ಕೆಲವು ಸ್ಥಳೀಯ ಮಾಧ್ಯಮ ಹಂಚಿಕೊಂಡಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘ತೆಲಂಗಾಣ, ಶಂಕರಪಲ್ಲಿ, ತಬ್ಲಿಘಿ ಜಮಾತ್‌’ ಎಂಬ ಕೀವರ್ಡ್ ಬಳಸಿ ಇತ್ತೀಚಿನ ಸುದ್ದಿಯನ್ನು ಹುಡುಕಿದ್ದೇವೆ. ಆಗ siasat.com 2 ಜನವರಿ, 2025 ರಂದು ಪ್ರಕಟಿಸಿರುವ ವರದಿ ನಮಗೆ ಸಿಕ್ಕಿದೆ. ‘‘ಜನವರಿ 3 ರಿಂದ ಜನವರಿ 5 ರವರೆಗೆ ಶಂಕರಪಲ್ಲಿಯ ಅತಿಥಿ ಮೈದಾನದಲ್ಲಿ ಇಜ್ತೆಮಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಭದ್ರತಾ ವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆಯ ಜವಾಬ್ದಾರಿಯನ್ನು ಚೇವೆಲ್ಲಾ ಪೊಲೀಸ್ ಠಾಣೆಗೆ ನೀಡಲಾಗಿದೆ’’ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಜನರು ಬಹಿರಂಗವಾಗಿ ನಮಾಜ್ ಮಾಡುತ್ತಿರುವ ವೈರಲ್ ವೀಡಿಯೊ ಮಹಾರಾಷ್ಟ್ರದಿಂದಲ್ಲ, ತೆಲಂಗಾಣದ ಶಂಕರಪಲ್ಲಿಯದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಈ ದೃಶ್ಯ ಬಾಂಗ್ಲಾದೇಶದ್ದೋ ಅಥವಾ ಪಾಕಿಸ್ತಾನದ್ದೋ ಅಲ್ಲ. ಮಹಾರಾಷ್ಟ್ರದಲ್ಲಿ ಕಂಡುಬಂದ ದೃಶ್ಯ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಜನರು ಬಹಿರಂಗವಾಗಿ ನಮಾಜ್ ಮಾಡುತ್ತಿರುವ ವೈರಲ್ ವೀಡಿಯೊ ಮಹಾರಾಷ್ಟ್ರದಿಂದಲ್ಲ, ತೆಲಂಗಾಣದ ಶಂಕರಪಲ್ಲಿಯದ್ದು.
Next Story