ಇರಾನ್ ದೇಶದ ಕಟ್ಟುನಿಟ್ಟಾದ ಇಸ್ಲಾಮಿಕ್ ಡ್ರೆಸ್ ಕೋಡ್ ವಿರುದ್ಧ ಇತ್ತೀಚೆಗಷ್ಟೆ ಯುವತಿಯೊಬ್ಬಳು ಇರಾನ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಬಟ್ಟೆಗಳನ್ನು ಕಳಚಿ ಒಳ ಉಡುಪಿನಲ್ಲಿ ಪ್ರತಿಭಟನೆ ನಡೆಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಮುಸ್ಲಿಂ ದೇಶದ್ದು ಎಂದು ಹೇಳಲಾಗುತ್ತಿರುವ ಮತ್ತೊಂದು ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಹಲವು ಮಹಿಳೆಯರು ಅರೆನಗ್ನವಾಗಿ ‘‘ಮಹಿಳೆಯರ ಮೇಲಿನ ಯುದ್ಧವನ್ನು ನಿಲ್ಲಿಸಿ’’ ಎಂದು ಎದೆಯ ಮೇಲೆ ಮತ್ತು ‘‘ಮಹಿಳೆಯರ ಜೀವನ ಸ್ವಾತಂತ್ರ್ಯ’’ ಎಂದು ಪೋಸ್ಟರ್ ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ನವೆಂಬರ್ 26, 2024 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಮುಸ್ಲಿಂ ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಸಹೋದರಿಯರು ಮುಸ್ಲಿಂ ನೆಲದಲ್ಲಿಯೇ ಹಿಜಾಬ್ ಅನ್ನು ಕಿತ್ತೆಸೆದು ಅರೆನಗ್ನದಲ್ಲಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಹೆಣ್ಣಾಗಿ ಈ ರೀತಿ ಪ್ರತಿಭಟಿಸುತ್ತಿದ್ದಾರೆ ಎಂದರೆ ಅವರಿಗೆ ಇನ್ನೆಷ್ಟು ನೋವ್ವಾಗಿರಬೇಡ. ಭಾರತದ ಕನ್ವರ್ಟೆಡ್ ಗಳಿಗೆ ಯಾವಾಗ ಅರ್ಥವಾಗುತ್ತದೆಯೋ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟಿರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಯಾವುದೇ ಮುಸ್ಲಿಂ ದೇಶದಲ್ಲಿ ಷರಿಯಾ ಕಾನೂನಿನ ವಿರುದ್ಧ ಮಹಿಳೆಯರು ಪ್ರತಿಭಟಿಸಿರುವ ವೀಡಿಯೊವಲ್ಲ. ಬದಲಾಗಿ ಪ್ಯಾರಿಸ್‌ನಲ್ಲಿ ಸ್ತ್ರೀಹತ್ಯೆ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಖಂಡಿಸಿ ಕೆಲವು ಮಹಿಳೆಯರು ಮತ್ತು ಪುರುಷರು ನಡೆಸಿದ ಲಿಂಗ ಆಧಾರಿತ ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆ ಇದಾಗಿದೆ.
ನಿಜಾಂಶವನ್ನುತ ತಿಳಿಯಲು ನಾವು ಮೊದಲು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ವೀಡಿಯೊ ಮೇಲೆ Brut. ಎಂದು ಬರೆದಿರುವುದು ಕಾಣಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹೆಸರಿನ ಖಾತೆ ಇದೆಯೇ ಎಂದು ನಾವು ಹುಡುಕಿದ್ದೇವೆ. ಆಗ, ಬ್ರೂಟ್ ಫ್ರಾನ್ಸ್‌ನ ಇನ್ಸ್ಟಾಗ್ರಾಮ್ಖಾತೆ ನಮಗೆ ಸಿಕ್ಕಿದ್ದು, ಇದರಲ್ಲಿ 24 ನವೆಂಬರ್ 2024 ರಂದು ಇದೇ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.
ಈ ವರದಿಯ ಶೀರ್ಷಿಕೆ ಮತ್ತು ವೀಡಿಯೊದಲ್ಲಿ, ಫೆಮಿನಿಸ್ಟ್ ಸಂಸ್ಥೆ ಫೆಮೆನ್ ಫ್ರಾನ್ಸ್ ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂ ಬಳಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ, ಪ್ರತಿಭಟನಾನಿರತ ಮಹಿಳೆಯರು ‘‘ಮಹಿಳೆಯ ಜೀವನ ಮತ್ತು ಸ್ವಾತಂತ್ರ್ಯ’’ ಮತ್ತು ‘‘ಮಹಿಳೆಯರ ವಿರುದ್ಧದ ಯುದ್ಧವನ್ನು ನಿಲ್ಲಿಸಿ’’ ಎಂಬ ಘೋಷಣೆಗಳನ್ನು ಕೂಗಿದರು ಎಂದು ಹೇಳಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ನಾವು ಫ್ರೆಂಚ್ ಕೀವರ್ಡ್ ಗಳನ್ನು ಬಳಸಿ ಗೂಗಲ್ನಲ್ಲಿ ಇನ್ನಷ್ಟು ಶೋಧ ನಡೆಸಿದ್ದೇವೆ. ಆಗ 25 ನವೆಂಬರ್ 2024ರ ಪಂಕ್ಚುವಲ್ ವರದಿಯಲ್ಲಿ, ‘‘ಲೌವ್ರೆ ಮುಂಭಾಗದಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಕಾರ್ಯಕರ್ತರು ಪ್ರತಿಭಟಿಸಿದರು’’ ಎಂದಿದೆ. ಈ ವರದಿಯೊಂದಿಗೆ ವೀಡಿಯೊವನ್ನು ಕೂಡ ಲಗತ್ತಿಸಲಾಗಿದ್ದು ಇದು ವೈರಲ್ ವೀಡಿಯೋದ ಕೀಫ್ರೇಮ್ ಗಳಿಗೆ ಸಾಮ್ಯತೆ ಹೊಂದಿರುವುದನ್ನು ಗಮನಿಸಿದ್ದೇವೆ.
‘‘ಫೆಮೆನ್ ಗುಂಪಿನ ಸುಮಾರು ನೂರು ಸ್ತ್ರೀವಾದಿ ಕಾರ್ಯಕರ್ತರು ಪ್ಯಾರಿಸ್‌ನ ಲೌವ್ರೆ ವಸ್ತುಸಂಗ್ರಹಾಲಯದ ಮುಂದೆ ಲೈಂಗಿಕ ಹಿಂಸಾಚಾರದ ವಿರುದ್ಧ ಈ ಭಾನುವಾರ ಪ್ರತಿಭಟಿಸಿದರು’’ ಎಂದು ವರದಿಯಲ್ಲಿದೆ. ಇದೇ ವರದಿಯಲ್ಲಿ ಮಹಿಳೆಯರು ಅರೆನಗ್ನವಾಗಿ ಪ್ರತಿಭಟಿಸಿದ ಕುರಿತ ಉಲ್ಲೇಖವನ್ನು ಗಮನಿಸಿದ್ದೇವೆ.
ಇನ್ನೂ ಅನೇಕ ಮಾಧ್ಯಮಗಳು ಇದೇ ಮಾಹಿತಿಯನ್ನು ಒಳಗೊಂಡ ವರದಿಗಳನ್ನು ಪ್ರಕಟಿಸಿರುವುದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗೆಯೇ ಯೂಟ್ಯೂಬ್‌ನಲ್ಲಿ ಸಹ ಈ ಪ್ರತಿಭಟನೆಯ ವೀಡಿಯೊಗಳನ್ನು ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಮಹಿಳೆಯರು ಮುಸ್ಲಿಂ ನೆಲದಲ್ಲೇ ಅರೆನಗ್ನವಾಗಿ ಪ್ರತಿಭಟಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಪ್ಯಾರಿಸ್‌ನಲ್ಲಿ ಸ್ತ್ರೀಹತ್ಯೆ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಖಂಡಿಸಿ ಕೆಲವು ಮಹಿಳೆಯರು ಮತ್ತು ಪುರುಷರು ನಡೆಸಿದ ಲಿಂಗ ಆಧಾರಿತ ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆ ಆಗಿದೆ.