ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ನೇಪಾಳದಲ್ಲಿ ಆರಂಭವಾದ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಶಸ್ತ್ರಾಸ್ತ್ರಗಳನ್ನು ಹಿಡಿದ ಪ್ರತಿಭಟನಾಕಾರರು ಹಿಂಸಾತ್ಮಕವಾಗಿ ವರ್ತಿಸಿ ಪ್ರಧಾನಿ, ರಾಷ್ಟ್ರಪತಿಗಳ ಖಾಸಗಿ ನಿವಾಸ ಮತ್ತು ಸಂಸತ್ತಿನ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಈ ಹಿಂಸಾತ್ಮಕ ಪ್ರತಿಭಟನೆಯನ್ನು ಲಿಂಕ್ ಮಾಡುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಪ್ರತಿಭಟನಾಕಾರರು ಕಲ್ಲು ತೂರಾಟ ಮತ್ತು ಪೊಲೀಸರ ಮೇಲೆ ಕೋಲುಗಳಿಂದ ಹೊಡೆಯುವುದನ್ನು ಕಾಣಬಹುದು. ಅತ್ತ ಪೊಲೀಸರು ಗಲಭೆ ನಿಗ್ರಹ ಸಾಧನಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದಕ್ಕಾಗಿ ಪೊಲೀಸರ ಮೇಲೆ ನೇಪಾಳ ಯುವಕರ ದಾಳಿ: ನೇಪಾಳದಲ್ಲಿ ಪೊಲೀಸರ ಮೇಲೆ ದಾಳಿ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ವಿಡಿಯೋ ಇಂಡೋನೇಷ್ಯಾದ್ದಾಗಿರುವುದರಿಂದ ಈ ಹಕ್ಕು ಸುಳ್ಳು ಎಂದು ನ್ಯೂಸ್‌ಮೀಟರ್ ಕಂಡುಕೊಂಡಿದೆ.
ವೈರಲ್ ವೀಡಿಯೊದ ಸತ್ಯವನ್ನು ಕಂಡುಹಿಡಿಯಲು, ನಾವು ಅದರಿಂದ ಹಲವಾರು ಪ್ರಮುಖ ಫ್ರೇಮ್‌ಗಳನ್ನು ಹೊರತೆಗೆದು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಹುಡುಕಿದೆವು. ಈ ಸಂದರ್ಭ 'ನೈಜೀರಿಯನ್ಮಿಲಿಟರಿ ಗ್ಯಾಲರಿ' ಎಂಬ ಹೆಸರಿನ ಫೇಸ್‌ಬುಕ್ ಪುಟದಲ್ಲಿ ನಮಗೆ ವೈರಲ್ ವೀಡಿಯೊ ಕಂಡುಬಂದಿದೆ. ಈ ವೀಡಿಯೊವನ್ನು ಸೆಪ್ಟೆಂಬರ್ 2, 2025 ರಂದು ಹಂಚಿಕೊಳ್ಳಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ವೈರಲ್ ವೀಡಿಯೊ ಇಂಡೋನೇಷ್ಯಾದಲ್ಲಿ ನಡೆದ ಪ್ರತಿಭಟನೆಯದ್ದಾಗಿದೆ.
ಸೆಪ್ಟೆಂಬರ್ 2, 2025 ರಂದು ಅದೇ ಮಾಹಿತಿಯೊಂದಿಗೆ Instagram, YouTubeಮತ್ತು X ನಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ.
ಈ ಮಾಹಿತಿಯ ಆಧಾರದ ಮೇಲೆ, ನಾವು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್ನಲ್ಲಿ ಹುಡುಕಿದೆವು. ಆಗ carnegieendowment ವೆಬ್‌ಸೈಟ್‌ನಲ್ಲಿ ಈ ಹಕ್ಕಿಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡೆವು. ವರದಿಯನ್ನು ಸೆಪ್ಟೆಂಬರ್ 3, 2025 ರಂದು ಪ್ರಕಟಿಸಲಾಗಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಇಂಡೋನೇಷ್ಯಾದಲ್ಲಿ ಸಂಸದರ ವೇತನ ಹೆಚ್ಚಳದ ಬಗ್ಗೆ ರಾಷ್ಟ್ರೀಯ ಸಂಸತ್ತಿನ ಮುಂದೆ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ವಾಸ್ತವವಾಗಿ, ಸಂಸದರ ವೇತನವನ್ನು ಸುಮಾರು ಹತ್ತು ಪ್ರತಿಶತದಷ್ಟು ಹೆಚ್ಚಿಸಲಾಗುತ್ತಿದೆ. ಜನರು ಇದರ ಬಗ್ಗೆ ಮತ್ತು ಹೆಚ್ಚುತ್ತಿರುವ ಭ್ರಷ್ಟಾಚಾರದ ಬಗ್ಗೆ ಕೋಪಗೊಂಡಿದ್ದರು. ಅವರು ಇದರ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿದರು ಮತ್ತು ನಂತರ ಈ ಪ್ರತಿಭಟನೆ ಹಿಂಸಾತ್ಮಕವಾಯಿತು.
ಅಸೋಸಿಯೇಟೆಡ್ ಪ್ರೆಸ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ವೈರಲ್ ವೀಡಿಯೊಗೆ ಹೋಲುವ ವೀಡಿಯೊ ನಮಗೆ ಕಂಡುಬಂದಿದೆ. ಈ ವೀಡಿಯೊವನ್ನು ಇಂಡೋನೇಷ್ಯಾದ ಪ್ರತಿಭಟನೆ ಎಂದು ಹೇಳಿಕೊಂಡು ಹಂಚಿಕೊಳ್ಳಲಾಗಿದೆ.
ನಾವು ವೈರಲ್ ಆಗಿರುವ ವಿಡಿಯೋ ಮತ್ತು ಇಂಡೋನೇಷ್ಯಾ ಪೊಲೀಸರ ಫೋಟೋವನ್ನು ಹೋಲಿಸಿದ್ದೇವೆ. ಇವೆರಡರ ನಡುವಿನ ಹೋಲಿಕೆಯನ್ನು ಕೆಳಗೆ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಜನರು ಮತ್ತು ಪೊಲೀಸರ ನಡುವಿನ ಘರ್ಷಣೆಯ ವೈರಲ್ ವೀಡಿಯೊ ನೇಪಾಳದದ್ದಲ್ಲ, ಇಂಡೋನೇಷ್ಯಾದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.