Disclaimer: ಈ ಸತ್ಯ ಪರಿಶೀಲನೆಯು ಹಿಂಸಾಚಾರದ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಕೃತ್ಯದ ಫೋಟೋ ಅಥವಾ ವಿಡಿಯೋವನ್ನು ಇಲ್ಲಿ ಸೇರಿಸಿಲ್ಲ. ಇದು ಓದುಗರ ವಿವೇಚನೆಗೆ ಬಿಡಲಾಗಿದೆ.
ಇತ್ತೀಚೆಗೆ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಅಂಗೀಕಾರವಾದ ನಂತರ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಕಾನೂನಿನ ವಿರುದ್ಧದ ಪ್ರತಿಭಟನೆಗಳು ಕೋಮು ಹಿಂಸಾಚಾರಕ್ಕೆ ತಿರುಗಿ ಅಶಾಂತಿ ಭುಗಿಲೆದ್ದಿತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದರು ಮತ್ತು ಮುರ್ಷಿದಾಬಾದ್‌ನ ವಿವಿಧ ಭಾಗಗಳಿಂದ ಭಯಭೀತರಾದ ನಿವಾಸಿಗಳು ಪಲಾಯನ ಮಾಡಿದರು. ಇದರ ಮಧ್ಯೆ ಈಗ 1 ನಿಮಿಷ 30 ಸೆಕೆಂಡ್ಗಳ ವೀಡಿಯೊ ಒಂದು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಗುಂಪೊಂದು ಬಾಲಕನನ್ನು ಮನಬದಂತೆ ಹೊಡೆದು ಕಾಲಿನಿಂದ ತಿಳಿಯುತ್ತಿರುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಏಪ್ರಿಲ್ 18, 2025 ರಂದು ಈ ವೀಡಿಯೊವನ್ನು ಹಂಚಿಡು, ‘‘ಪಶ್ಚಿಮ ಬಂಗಾಳದಲ್ಲಿ 10 ವರ್ಷದ ದಲಿತ ಹಿಂದೂ ಮಗುವನ್ನು ಮನಸೋ ಇಚ್ಚೆ ಹೊಡೆದು ಕೊಲೆ ಮಾಡಿದ ದೇಶದ್ರೋಹಿಗಳು’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಕ್ಕು ಪಶ್ಚಿಮ ಬಂಗಾಳಕ್ಕೂ ಯಾವುದೇ ಸಂಬಂಧವಿಲ್ಲ. ಬಾಂಗ್ಲಾದೇಶದ ಢಾಕಾದಲ್ಲಿ ಅತ್ಯಾಚಾರದ ಆರೋಪಿಯನ್ನು ಗುಂಪೊಂದು ಥಳಿಸುತ್ತಿರುವ ಘಟನೆ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೀಫ್ರೇಮ್‌ನ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಆಗ ಮಾರ್ಚ್ 2025 ರಲ್ಲಿ ಕೆಲ ಬಾಂಗ್ಲಾದೇಶಿ ಬಳಕೆದಾರರು ಇದೇ ವೈರಲ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಕಂಡುಬಂತು.
ಇದೇವೇಳೆ ಮಾರ್ಚ್ 19, 2025 ರಂದು ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ SomoyNews.tvಇದೇ ವೈರಲ್ ವೀಡಿಯೊದ ಸ್ಕ್ರೀನ್ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಈ ಘಟನೆ ಮಾರ್ಚ್ 18 ರಂದು ಬಾಂಗ್ಲಾದೇಶದ ರಾಜಧಾನಿ ಢಾಕಾದ ಖಿಲ್ಖೇತ್ ಪ್ರದೇಶದಲ್ಲಿ ನಡೆದಿದೆ. ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹದಿಹರೆಯದವನನ್ನು ಒಂದು ಗುಂಪು ಹೊಡೆದಿದೆ’’ ಎಂದು ಹೇಳಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆಗ Prothomalo.com ಮಾರ್ಚ್ 19, 2025 ರಂದು ಈ ಘಟನೆ ಕುರಿತು ಸುದ್ದಿ ಮಾಡಿರುವುದು ಸಿಕ್ಕಿದೆ. ‘‘ರಾಜಧಾನಿಯ ಖಿಲ್ಖೇತ್ ಪ್ರದೇಶದಲ್ಲಿ ಅತ್ಯಾಚಾರದ ಆರೋಪಿಯ ಮೇಲೆ ಕೋಪಗೊಂಡ ಸ್ಥಳೀಯ ಗುಂಪೊಂದು ಥಳಿಸಿ ಗಾಯಗೊಳಿಸಿದೆ. ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಲಾಯಿತು. ಪೊಲೀಸ್ ಠಾಣೆಯ OC (ತನಿಖೆ) ಆಶಿಕುರ್ ರೆಹಮಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಹದಿಹರೆಯದವರನ್ನು ಸಹ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ’’ ಎಂದು ಬರೆಯಲಾಗಿದೆ.
ಮಾರ್ಚ್ 18, 2025 ರಂದು Ekushey TV ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ಘಟನೆಯ ವೀಡಿಯೊ ವರದಿಯು ವೈರಲ್ ವೀಡಿಯೊಗೆ ಹೋಲುವ ದೃಶ್ಯಗಳನ್ನು ತೋರಿಸುತ್ತದೆ. ವೀಡಿಯೊದ ಡಿಸ್ಕ್ರಿಪ್ಷನ್ನಲ್ಲಿ ಈ ಘಟನೆ ಕುರಿತು ಮಾಹಿತಿ ನೀಡಲಾಗಿದ್ದು, ‘‘ರಾಜಧಾನಿಯ ಖಿಲ್ಖೇತ್ ಮಧ್ಯಪಾರ ಪ್ರದೇಶದಲ್ಲಿ ಅತ್ಯಾಚಾರದ ಆರೋಪದ ಮೇಲೆ ಕೋಪಗೊಂಡ ಸ್ಥಳೀಯ ಗುಂಪೊಂದು ಯುವಕನೊಬ್ಬನನ್ನು ಥಳಿಸಿ ತೀವ್ರವಾಗಿ ಗಾಯಗೊಳಿಸಿದೆ. ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಪೊಲೀಸ್ ವಾಹನದ ಮೇಲೆ ದಾಳಿ ಮಾಡಿದರು’’ ಎಂದು ಬರೆಯಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪಶ್ಚಿಮ ಬಂಗಾಳದಲ್ಲಿ ಹಿಂದೂ ಮಗುವನ್ನು ಮನಸೋ ಇಚ್ಚೆ ಹೊಡೆದು ಕೊಲೆ ಮಾಡಲಾಗಿದೆ ಎಂದು ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ ಆಗಿದೆ.