ಭಾರೀ ಗಾತ್ರದ ವಾಹನಗಳು ಮತ್ತು ಕಾರುಗಳು ಗುಂಡಿಗಳಿಂದ ತುಂಬಿರುವ ರಸ್ತೆಯಲ್ಲಿ ಹಾದುಹೋಗುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯಗಳು ಕರ್ನಾಟಕ ನಗರದವು ಎಂದು ಹೇಳಿಕೆ ಸೂಚಿಸುತ್ತದೆ.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಗ್ಯಾರಂಟಿ ಗುಂಡಿಗಳು ಜನರ ಹಾಗೂ ಪ್ರಯಾಣಿಕರ ಜೀವದ ಗ್ಯಾರಂಟಿ ಯನ್ನೇ ಕಸಿದುಕೊಂಡು ಬಿಟ್ಟಿವೆ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಚೀನಾಕ್ಕೆ ಸಂಬಂಧಪಟ್ಟ ವೀಡಿಯೊ ಆಗಿದ್ದು, ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದಾಗ, ಇದೇ ರೀತಿಯ ದೃಶ್ಯಗಳನ್ನು ಹಂಚಿಕೊಂಡ ಹಲವಾರು ವೀಡಿಯೊಗಳು ಯೂಟ್ಯೂಬ್ ಸೇರಿದಂತೆ ಕೆಲ ಚೀನೀ ವೆಬ್ಸೈಟ್ಗಳಲ್ಲಿ ಕಂಡುಬಂದಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿವೀಕ್ಷಿಸಬಹುದು. ಈ ವೀಡಿಯೊಗಳಲ್ಲಿ, ಅವರು ಇದನ್ನು ಚೀನಾದಲ್ಲಿನ ರಸ್ತೆಯ ಸ್ಥಿತಿ ಎಂದು ಉಲ್ಲೇಖಿಸಿದ್ದಾರೆ.
ಈ ಎಲ್ಲಾ ವೀಡಿಯೊಗಳಲ್ಲಿ, ‘ಲೈವ್‌ಲೀಕ್’ ಲೋಗೋವನ್ನು ವೀಡಿಯೊ ಪರದೆಯಲ್ಲಿ ಕಾಣಬಹುದು. ಈ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ ಜುಲೈ 12, 2022 ರಂದು, ‘‘ಭಾರೀ ಮಳೆಯ ನಂತರ ಚೀನೀ ರಸ್ತೆಗಳಲ್ಲಿ ಗುಂಡಿಗಳು’’ ಎಂಬ ಶೀರ್ಷಿಕೆಯೊಂದಿಗೆ ಲೈವ್‌ಲೀಕ್ ವೆಬ್‌ಸೈಟ್‌ನ ಗೂಗಲ್ ಹುಡುಕಾಟ ಫಲಿತಾಂಶವನ್ನು ನಾವು ಕಂಡುಕೊಂಡೆವು.
ಜುಲೈ 17, 2020 ರಂದು ಚೀನೀ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊದ 1:54 ನಿಮಿಷಗಳ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊದ ಚೀನೀ ಶೀರ್ಷಿಕೆಯು ಇಂಗ್ಲಿಷ್‌ಗೆ "ಭೂಮಿಯನ್ನು ನೆಲಸಮಗೊಳಿಸುವ ಮೂಲಕ ಎಷ್ಟು ಕಾರುಗಳು ಹಾದುಹೋಗಿವೆ ಎಂಬುದನ್ನು ರೆಕಾರ್ಡ್ ಮಾಡಿ? ಎಲ್ಲರೂ ಸುರಕ್ಷತೆಯ ಬಗ್ಗೆ ಗಮನ ಹರಿಸಿ" ಎಂದು ಬರೆಯಲಾಗಿದೆ.
ವೀಡಿಯೊದ ದೀರ್ಘ ಆವೃತ್ತಿಯು ನಮಗೆ ಹಲವಾರು ದೃಶ್ಯ ಸುಳಿವುಗಳನ್ನು ನೀಡಿತು. ಹಿನ್ನೆಲೆಯಲ್ಲಿ ಇರುವ ಅಂಗಡಿಯ ಜಾಹೀರಾತು ಫಲಕಗಳಲ್ಲಿ ಚೀನೀ ಅಕ್ಷರಗಳು ಇರುವುದನ್ನು ನಾವು ಗಮನಿಸಿದ್ದೇವೆ. ಹಾಗೆಯೆ ಭಾರತದಲ್ಲಿ ಬಲಗೈ ಚಾಲನಾ ನಿಯಮಗಳನ್ನು ಹೊಂದಿರುವ ವಾಹನಗಳಿಗಿಂತ ಭಿನ್ನವಾಗಿ, ಈ ವೀಡಿಯೊದಲ್ಲಿ ನಾವು ವಾಹನಗಳ ಎಡಗೈ ಚಾಲನೆಯನ್ನು ಕಾಣಬಹುದು. ವೀಡಿಯೊದಲ್ಲಿರುವ 1.30 ನಿಮಿಷಗಳ ಕೌಂಟರ್‌ನಲ್ಲಿ, 'JMC' ಎಂದು ಬರೆದಿರುವ ಬಿಳಿ ಟ್ರಕ್ ಹಾದುಹೋಗುತ್ತದೆ. ಹುಡುಕಾಟ ನಡೆಸಿದಾಗ JMC ಎಂದರೆ ಚೀನಾದ ಜಿಯಾಂಗ್ಸಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಚೀನಾದ ಆಟೋಮೊಬೈಲ್ ತಯಾರಕ ಜಿಯಾಂಗ್ಲಿಂಗ್ ಮೋಟಾರ್ಸ್ ಕಾರ್ಪೊರೇಷನ್ ಲಿಮಿಟೆಡ್ (JMC) ಎಂದು ಕಂಡುಬಂದಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊದ ಮೂಲವನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಕ್ಲಿಪ್‌ನಲ್ಲಿ ತೋರಿಸಿರುವ ರಸ್ತೆ ಕರ್ನಾಟಕದ್ದಲ್ಲ ಎಂಬುದು ಸ್ಪಷ್ಟವಾಗಿದೆ.