ವೆನೆಜುವೆಲಾ ಮೇಲಿನ ದಾಳಿಯ ನಂತರ, ಯುಎಸ್ ಮಿಲಿಟರಿ ಉತ್ತರ ಸಮುದ್ರದಲ್ಲಿ ರಷ್ಯಾದ ಧ್ವಜ ಹೊಂದಿರುವ ತೈಲ ಟ್ಯಾಂಕರ್ ಮತ್ತು ಇನ್ನೊಂದು ಹಡಗನ್ನು ವಶಪಡಿಸಿಕೊಂಡಿದೆ. ಇದರ ಬೆನ್ನಲ್ಲೇ ಮಿಲಿಟರಿ ಹೆಲಿಕಾಪ್ಟರ್‌ನಿಂದ ಸೈನಿಕರು ಹಡಗಿನಲ್ಲಿ ಇಳಿಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ವೆನೆಜುವೆಲಾದಿಂದ ಬರುತ್ತಿರುವ ರಷ್ಯಾದ ಧ್ವಜ ಹೊಂದಿರುವ ತೈಲ ಟ್ಯಾಂಕರ್ ಅನ್ನು ಯುಎಸ್ ಮಿಲಿಟರಿ ವಶಪಡಿಸಿಕೊಂಡಿರುವುದನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರಷ್ಯಾ ಧ್ವಜವಿದ್ದ ತೈಲ ಟ್ಯಾಂಕರ್ ವಶಪಡಿಸಿಕೊಂಡ US ಪಡೆಗಳು’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಮೆರಿಕದ ಸೇನೆಯು ರಷ್ಯಾದ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದ್ದರೂ, ವೈರಲ್ ಆಗಿರುವ ವೀಡಿಯೊ ಅಕ್ಟೋಬರ್ 2025 ರದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಅಕ್ಟೋಬರ್ 6, 2025 ರಂದು ಸೌತ್ ಚೀನಾ ಮಾರ್ನಿಂಗ್ಪೋಸ್ಟ್ ವೆಬ್‌ಸೈಟ್‌ನಲ್ಲಿ ವೈರಲ್ ವೀಡಿಯೊಕ್ಕೆ ಹೋಲಿಕೆ ಆಗುವ ಫೋಟೋದೊಂದಿಗೆ ಸುದ್ದಿ ಪ್ರಕಟ ಆಗಿರುವುದು ಕಂಡುಬಂತು. ಶೀರ್ಷಿಕೆಯು "ಪ್ರದರ್ಶನದ ಸಮಯದಲ್ಲಿ ಯುಎಸ್ ನೌಕಾಪಡೆಯ ತಂಡವು ಅಮೇರಿಕನ್ ಹಡಗಿನ ಡೆಕ್ ಮೇಲೆ ಇಳಿಯಿತು" ಎಂದು ಹೇಳುತ್ತದೆ. ವರದಿಯ ಪ್ರಕಾರ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೌಕಾಪಡೆಯ 250 ನೇ ವಾರ್ಷಿಕೋತ್ಸವದಂದು ವರ್ಜೀನಿಯಾದ ನಾರ್ಫೋಕ್‌ನಲ್ಲಿ ಯುಎಸ್ ನೌಕಾಪಡೆಯನ್ನು ಹೊಗಳಿದರು.
ವೈರಲ್ ವೀಡಿಯೊಕ್ಕೆ ಹೋಲಿಕೆ ಆಗುವ ಫೋಟೋವನ್ನು ಗೆಟ್ಟಿ ಇಮೇಜಸ್‌ನಲ್ಲಿಯೂ ವೀಕ್ಷಿಸಬಹುದು. ಶೀರ್ಷಿಕೆ ಹೀಗಿದೆ, "ಅಕ್ಟೋಬರ್ 5, 2025 ರಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಪ್ರದರ್ಶನದ ಸಮಯದಲ್ಲಿ ಯುಎಸ್ ನೇವಿ ಸೀಲ್ ತಂಡವು ಯುಎಸ್ಎಸ್ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ವಿಮಾನವಾಹಕ ನೌಕೆಯ ಡೆಕ್ ಮೇಲೆ ಇಳಿಯುತ್ತದೆ. ವಿಮಾನವಾಹಕ ನೌಕೆ ವರ್ಜೀನಿಯಾದ ನಾರ್ಫೋಕ್ ಬಳಿ ಸಮುದ್ರದಲ್ಲಿತ್ತು."
"250 ವರ್ಷಗಳ ನೌಕಾಪಡೆಯ ಸೇವೆಯನ್ನು ಆಚರಿಸುತ್ತಾ, ನೇವಿ ಸೀಲ್‌ಗಳು ಅಧ್ಯಕ್ಷ ಟ್ರಂಪ್ ಮತ್ತು ಪ್ರಥಮ ಮಹಿಳೆಯ ಮುಂದೆ ಯುಎಸ್‌ಎಸ್ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್‌ನಲ್ಲಿ ಲೈವ್-ಫೈರ್ ಪ್ರದರ್ಶನವನ್ನು ಪ್ರದರ್ಶಿಸಿದರು" ಎಂದು ಬರೆದು, ಇನ್‌ಸ್ಟಾಗ್ರಾಮ್ ಬಳಕೆದಾರ ಏವಿಯೇಷನ್ಡೈರಿಹ್ಡ್ ಅಕ್ಟೋಬರ್ 6, 2025 ರಂದು ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ವೀಡಿಯೊ ರಷ್ಯಾದ ಧ್ವಜ ಹೊಂದಿರುವ ತೈಲ ಟ್ಯಾಂಕರ್ ಅನ್ನು ಸೆರೆಹಿಡಿಯುವುದಿಲ್ಲ, ಇದು ಸೈನಿಕರು ಹಡಗಿನ ಡೆಕ್ ಮೇಲೆ ಇಳಿಯುವ ಹಳೆಯ ವೀಡಿಯೊ ಎಂದು ನಾವು ಖಚಿತವಾಗಿ ಹೇಳುತ್ತೇವೆ.