ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದರು. ಡಿಸೆಂಬರ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಾಗಿ ನವದೆಹಲಿಯ ಹೈದರಾಬಾದ್ ಹೌಸ್‌ಗೆ ಆಗಮಿಸಿದರು. ಇದರ ಮಧ್ಯೆ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ರಾಮ ಮಂದಿರದ ಮುಂದೆ ನಿಂತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪುಟಿನ್ ಭಾರತ ಭೇಟಿಯ ಸಮಯದಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡಲು ಅಯೋಧ್ಯೆಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ನಿನ್ನೆ ಅಯೋದ್ಯೆ ಪ್ರಭು ಶ್ರೀರಾಮ್ ಮಂದಿರ್ ದಲ್ಲಿ ಕಂಡು ಬಂದ ಅದ್ಭುತ ದೃಶ್ಯ. ವಿಶ್ವದ ಮೂವರು ಶ್ರೇಷ್ಠ ಮಹಾ ನಾಯಕರು ಒಂದೇ ಫ್ರೇಮ್ ನಲ್ಲಿ. ನಮೋ ಯೋಗಿ ಪುಟಿನ್’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಕೃತಕ ಬುದ್ದಿಮತ್ತೆಯಿಂದ ರಚಿಸಿದ ಫೋಟೋ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ, ರಷ್ಯಾದ ಅಧ್ಯಕ್ಷ ಪುಟಿನ್ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆಯೇ ಎಂದು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆದರೆ, ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಪ್ರಕಟಿತ ವರದಿಗಳು ಸಿಗಲಿಲ್ಲ. ಡಿಸೆಂಬರ್ 4 ರಂದು ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪುಟಿನ್ ಭೇಟಿ ಮತ್ತು ಅವರ ವೇಳಾಪಟ್ಟಿಯ ಕುರಿತು ಹೊರಡಿಸಲಾದ ಮಾಧ್ಯಮಸಲಹೆ ನಮಗೆ ಸಿಕ್ಕಿತು. ಇದು ಪುಟಿನ್ ಅವರ ಭಾರತದಿಂದ ಆಗಮನ ಮತ್ತು ನಿರ್ಗಮನವನ್ನು ವಿವರಿಸುತ್ತದೆ, ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಅವರ ಭೇಟಿಯ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡುವುದಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಡಿಸೆಂಬರ್ 4 ರ ಸಂಜೆ ಭಾರತಕ್ಕೆ ಆಗಮಿಸಿದ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಭೇಟಿಯ ನಂತರ ರಷ್ಯಾಕ್ಕೆ ಮರಳಿದರು. ಈ ಅವಧಿಯಲ್ಲಿ, 23 ನೇ ಭಾರತ-ರಷ್ಯಾ ವಾರ್ಷಿಕ ಸಭೆ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆಯಿತು. ಇದಲ್ಲದೆ, ಎರಡೂ ದೇಶಗಳ ನಡುವೆ ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ವ್ಲಾಡಿಮಿರ್ ಪುಟಿನ್ ಭಾರತ ಭೇಟಿಯ ಸಮಯದಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿಲ್ಲ.
ಬಳಿಕ ನಾವು ವೈರಲ್ ಆಗಿರುವ ಫೋಟೋವನ್ನು ಸೂಕ್ಷ್ಮವಾಗಿ ನೋಡಿದಾಗ, ಹಲವಾರು ಅಸಂಗತತೆಗಳನ್ನು ಗಮನಿಸಿದ್ದೇವೆ. ಉದಾಹರಣೆಗೆ, ಮೂವರ ಮುಖಗಳಲ್ಲಿನ ಅತಿಯಾದ ಹೊಳಪು ಮತ್ತು ನಗುತ್ತಿರುವಾಗ ಯೋಗಿ ಆದಿತ್ಯನಾಥ್ ಅವರ ತುಟಿಗಳ ಅಸಾಮಾನ್ಯ ಆಕಾರದಲ್ಲಿದೆ. ಪುಟಿನ್ ಮತ್ತು ಯೋಗಿ ಆದಿತ್ಯನಾಥ್ ಸಾಕ್ಸ್ ಧರಿಸಿದಂತೆ ಕಾಣುತ್ತಿದ್ದರೆ, ಪ್ರಧಾನಿ ಮೋದಿ ಬರಿಗಾಲಿನಲ್ಲಿದ್ದಾರೆ. ಇದು ಚಿತ್ರವನ್ನು AI ರಚಿಸಿದೆ ಎಂದು ಅನುಮಾನ ಮೂಡಿಸಿತು.
ಚಿತ್ರದ ದೃಢೀಕರಣವನ್ನು ಪರಿಶೀಲಿಸಲು, ನಾವು ಅದನ್ನು AI ಪತ್ತೆ ಸಾಧನ ಹೈವ್ ಮಾಡರೇಶನ್‌ನಲ್ಲಿ ಪರೀಕ್ಷಿಸಿದ್ದೇವೆ. ಈ ಉಪಕರಣವು AI ನಿಂದ ಚಿತ್ರ ರಚಿಸಲ್ಪಡುವ ಶೇಕಡಾ 99.9 ರಷ್ಟು ಅವಕಾಶವನ್ನು ತೋರಿಸಿದೆ. ಸೈಟ್‌ಎಂಜಿನ್ ಕೂಡ ಈ ಫೋಟೋ 99 ಪ್ರತಿಶತ AI ನಿಂದ ರಚಿತವಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಾಮ ಮಂದಿರಕ್ಕೆ ಭೇಟಿ ನೀಡಿರುವ ವೈರಲ್ ಫೋಟೋ ನಿಜವಲ್ಲ, ಬದಲಾಗಿ ಇದನ್ನು ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.