Fact Check: ಬಿಜೆಪಿ ವಿರುದ್ಧ ಮಾತನಾಡಿದ್ದಕ್ಕೆ ಸ್ವಾಮಿ ಅವಿಮುಕ್ತೇಶ್ವರಾನಂದರ ಮೇಲೆ ಲಾಠಿ ಚಾರ್ಜ್? ಇಲ್ಲ, ಇದು 2015ರ ವೀಡಿಯೊ
ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಇವರಿಗೆ ಈ ಪರಿಸ್ಥಿತಿ ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
By Vinay Bhat Published on 11 Feb 2025 8:32 PM IST![Fact Check: ಬಿಜೆಪಿ ವಿರುದ್ಧ ಮಾತನಾಡಿದ್ದಕ್ಕೆ ಸ್ವಾಮಿ ಅವಿಮುಕ್ತೇಶ್ವರಾನಂದರ ಮೇಲೆ ಲಾಠಿ ಚಾರ್ಜ್? ಇಲ್ಲ, ಇದು 2015ರ ವೀಡಿಯೊ Fact Check: ಬಿಜೆಪಿ ವಿರುದ್ಧ ಮಾತನಾಡಿದ್ದಕ್ಕೆ ಸ್ವಾಮಿ ಅವಿಮುಕ್ತೇಶ್ವರಾನಂದರ ಮೇಲೆ ಲಾಠಿ ಚಾರ್ಜ್? ಇಲ್ಲ, ಇದು 2015ರ ವೀಡಿಯೊ](https://newsmeter.in/h-upload/2025/02/11/394526-swami-avimukteshwaranand-lathi-charge-fact-check.webp)
Claim: ಬಿಜೆಪಿ ವಿರುದ್ಧ ಮಾತನಾಡಿದ್ದಕ್ಕೆ ಸ್ವಾಮಿ ಅವಿಮುಕ್ತೇಶ್ವರಾನಂದರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ.
Fact: ಇದು ಸೆಪ್ಟೆಂಬರ್ 2015 ರ ವೀಡಿಯೊ ಆಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಅವಧಿಯಲ್ಲಿ ನಡೆದ ಘಟನೆ ಆಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರಲ್ಲಿ ಜ್ಯೋತಿರ್ಮಠದ ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಶ್ರೀಗಳನ್ನು ಬೆನ್ನಟ್ಟಿ ಪೊಲೀಸರು ಲಾಠಿ ಚಾರ್ಜ್ ನಡೆಸುತ್ತಿರುವುದುನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಇವರಿಗೆ ಈ ಪರಿಸ್ಥಿತಿ ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಿಜೆಪಿ ಸರ್ಕಾರದ ವಿರುದ್ಧ ಎರಡು ಮಾತಾಡಿದ ಕಾರಣಕ್ಕೆ ಹಿಂದು ಸಮುದಾಯದ ಒಬ್ಬ ಸ್ವಾಮೀಜಿಯ ಪರಿಸ್ಥಿತಿ ನೋಡಿ. ಸ್ವಾಮೀಜಿ ಆದ್ರೆ ಏನು ಇನ್ನೊಬ್ಬರು ಆದ್ರೆ ಏನು, ದೇಶ ಅಪಾಯದಲ್ಲಿದೆ’’ ಎಂದು ಬರೆದುಕೊಂಡಿದ್ದಾರೆ. (ಪೋಸ್ಟ್‌ನ ಆರ್ಕೈವ್ ಲಿಂಕ್ ಅನ್ನು ಇಲ್ಲಿ ನೋಡಿ)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಮೊದಲನೆಯದಾಗಿ ಈ ವೀಡಿಯೊ ಇತ್ತೀಚಿನದ್ದಲ್ಲ. ಇದು ಸೆಪ್ಟೆಂಬರ್ 2015 ರ ವೀಡಿಯೊ ಆಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಅವಧಿಯಲ್ಲಿ ವಾರಣಾಸಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಕುರಿತ ವಿವಾದದ ಸಂದರ್ಭದಲ್ಲಿ ಈ ಲಾಠಿಚಾರ್ಜ್ ಘಟನೆ ನಡೆದಿತ್ತು.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೆಲ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಕೆಲ ಸುದ್ದಿ ಮಾಧ್ಯಮ ಯೂಟ್ಯೂಬ್ನಲ್ಲಿ ವೈರಲ್ ವೀಡಿಯೊಕ್ಕೆ ಹೋಲುವ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂತು. ಇಂಡಿಯಾ ಟಿವಿ ಸೆಪ್ಟೆಂಬರ್ 23, 2015 ರಂದು ‘‘ವಾರಣಾಸಿಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಸಾರ ಮಾಡಿದೆ. ಈ ವೀಡಿಯೊದ 59ನೇ ಸೆಕೆಂಡ್ನಲ್ಲಿ ವೈರಲ್ ವೀಡಿಯೊದಲ್ಲಿರುವ ದೃಶ್ಯ ಕಾಣಬಹುದು.
ಫಸ್ಟ್ ಇಂಡಿಯಾ ನ್ಯೂಸ್ ಕೂಡ ಸೆಪ್ಟೆಂಬರ್ 23, 2015 ರಂದು ಇದೇ ರೀತಿಯ ವೀಡಿಯೊ ಹಂಚಿಕೊಂಡಿರುವುದು ನಾವು ಕಂಡುಕೊಂಡಿದ್ದೇವೆ. ವೀಡಿಯೊದ ಶೀರ್ಷಿಕೆಯು ವಾರಣಾಸಿಯಲ್ಲಿ ವಿಗ್ರಹ ವಿಸರ್ಜನೆಯ ಕುರಿತು ಸಂತರ ಮೇಲೆ ಲಾಠಿ ಚಾರ್ಜ್ ಎಂದು ಹೇಳುತ್ತದೆ.
ಈ ಮಾಹಿತಿಯನ್ನು ಪಡೆದುಕೊಂಡು ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆಗ ನವ್ಭಾರತ್ ಟೈಮ್ಸ್ ಸೆಪ್ಟೆಂಬರ್ 23, 2015 ರಂದು ವೈರಲ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳನ್ನು ಒಳಗೊಂಡಿರುವ ಫೋಟೋ ಗ್ಯಾಲರಿ ಸುದ್ದಿಯನ್ನು ಪ್ರಕಟಿಸಿರುವುದು ಸಿಕ್ಕಿತು. ಇದರಲ್ಲಿರುವ ಮಾಹಿತಿಯ ಪ್ರಕಾರ, ‘ಗಂಗಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬಗ್ಗೆ ವಾರಣಾಸಿಯಲ್ಲಿ 30 ಗಂಟೆಗಳ ಕಾಲ ನಡೆದ ಹಿಂಸಾಚಾರ ಮತ್ತು ದಿಗ್ಬಂಧನವು ಸೆಪ್ಟೆಂಬರ್ 23 ರ ಬುಧವಾರ ಮುಂಜಾನೆ ಕೊನೆಗೊಂಡಿತು. ವಿದ್ಯಾ ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಸೇರಿದಂತೆ ಕೆಲವು ಹಿಂದೂ ಮಠಾಧೀಶರು ಸೇರಿದಂತೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡರು. ಪೊಲೀಸರು ಲಕ್ಷ್ಮಿ ಕುಂಡದಲ್ಲಿ ವಿಗ್ರಹವನ್ನು ವಿಸರ್ಜಿಸಿದರು. ಸುಮಾರು 30 ಜನರು ಗಾಯಗೊಂಡರು, ಗಲಭೆ ಮತ್ತು ಕಲ್ಲು ತೂರಾಟದ ಜೊತೆಗೆ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ಉಲ್ಲಂಘಿಸಿದ್ದಕ್ಕಾಗಿ 25 ಜನರನ್ನು ಬಂಧಿಸಲಾಯಿತು. ಇದಲ್ಲದೆ, ಗಾಯಗೊಂಡ ಶ್ರೀಗಳನ್ನು ಸೆಪ್ಟೆಂಬರ್ 23 ರ ಬುಧವಾರ ವಿಭಾಗೀಯ ಆಸ್ಪತ್ರೆಯ ತುರ್ತು ವಾರ್ಡ್‌ಗೆ ದಾಖಲಿಸಲಾಗಿದೆ’’ ಎಂದು ಬರೆದುಕೊಂಡಿದೆ.
ಸೆಪ್ಟೆಂಬರ್ 24, 2015 ರ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ‘‘ವಾರಣಾಸಿಯ ಆಡಳಿತವು ಲಕ್ಷ್ಮಿ ಕುಂಡದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಜನರಿಗೆ ಅವಕಾಶ ನೀಡಿತ್ತು. ಆದಾಗ್ಯೂ, ದ್ವಾರಕಾ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದರ ಶಿಷ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಮಹಾಂತ್ ಬಾಲಕ ದಾಸ್ ನೇತೃತ್ವದ ಪ್ರತಿಭಟನಾಕಾರರು, ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಗಂಗಾ ನದಿಯಲ್ಲಿ ವಿಗ್ರಹವನ್ನು ವಿಸರ್ಜಿಸಲು ದೃಢನಿಶ್ಚಯ ಮಾಡಿದರು. ಈ ಪ್ರತಿಭಟನಾಕಾರರು ದಶಾಶ್ವಮೇಧ ಘಾಟ್ ಬಳಿಯ ಗೊಡೌಲಿಯಾ ಕ್ರಾಸಿಂಗ್‌ನಲ್ಲಿ ಧರಣಿ ಕುಳಿತಿದ್ದರು. 30 ಗಂಟೆಗಳ ಕಾಲ ನಡೆದ ಘರ್ಷಣೆಯ ನಂತರ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು’’ ಎಂದು ಬರೆಯಲಾಗಿದೆ.
ಹೀಗಾಗಿ ಸುಮಾರು 10 ವರ್ಷಗಳ ಹಿಂದೆ ಅಂದರೆ 2015 ರಲ್ಲಿ ನಡೆದ ಘಟನೆ ಇದಾಗಿದೆ. ಆ ಸಂದರ್ಭ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರ್ಕಾರವಿತ್ತು ಮತ್ತು ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.
ಇನ್ನು ಸಂತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಕ್ಕಾಗಿ ಅಖಿಲೇಶ್ ಯಾದವ್ ಅವರು ಆರು ವರ್ಷಗಳ ಬಳಿಕ ಕ್ಷಮೆಯನ್ನು ಕೂಡ ಕೇಳಿದ್ದರು. Swarajyamag ಏಪ್ರಿಲ್ 12, 2021 ರಂದು ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ಆಡಳಿತದ ಅವಧಿಯಲ್ಲಿ ಮಾಡಿದ ತಪ್ಪಿಗೆ ಹಿಂದೂ ಸ್ವಾಮೀಜಿಗಳ ಕ್ಷಮೆಯಾಚಿಸಿದ್ದಾರೆ. 2015 ರಲ್ಲಿ ವಾರಣಾಸಿಯಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಅವರ ಸರ್ಕಾರವು ಶ್ರೀಗಳ ಮೇಲೆ ಲಾಠಿ ಚಾರ್ಜ್‌ಗೆ ಆದೇಶಿಸಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಮಾಡಿದ ತಪ್ಪನ್ನು ಒಪ್ಪಿಕೊಂಡು ಯಾದವ್ ಶಂಕರಾಚಾರ್ಯರಲ್ಲಿ ಕ್ಷಮೆಯಾಚಿಸಿದರು. ಏಪ್ರಿಲ್ 11 ರಂದು ಯಾದವ್ ಅವರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು’’ ಎಂದು ವರದಿಯಲ್ಲಿದೆ.
ಈ ಮೂಲಕ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರ ಮೇಲೆ ಲಾಠಿಚಾರ್ಜ್ ನಡೆದಿದ್ದು ಬಿಜೆಪಿ ಸರ್ಕಾರದ ಅಡಿಯಲ್ಲಿ ಅಲ್ಲ ಅಖಿಲೇಶ್ ಯಾದವ್ ಸರ್ಕಾರದ ಅವಧಿಯಲ್ಲಿ ಎಂಬುದು ಸ್ಪಷ್ಟವಾಗಿದೆ.