Fact Check: ಪ. ಬಂಗಾಳ ಶಾಸಕ ಮೊಹಮ್ಮದ್ ಪೊಲೀಸರನ್ನು ಥಳಿಸಿದ್ದಾರೆಯೇ? ಇಲ್ಲ, ಇದು ಯುಪಿಯ ಹಳೇಯ ವೀಡಿಯೊ
ಪಶ್ಚಿಮ ಬಂಗಾಳದ ಶಾಸಕ ಮೊಹಮ್ಮದ್ ಪೊಲೀಸರನ್ನು ಹೊಡೆಯುತ್ತಿದ್ದಾನೆ ಎಂಬ ಹೇಳಿಕೆಯೊಂದಿಗೆ ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
By Vinay Bhat
Claim:ಪಶ್ಚಿಮ ಬಂಗಾಳ ಶಾಸಕ ಮೊಹಮ್ಮದ್ ಪೊಲೀಸರನ್ನು ಥಳಿಸುತ್ತಿದ್ದಾನೆ.
Fact:ಇದು 2018ರ ವೀಡಿಯೊ ಆಗಿದ್ದು, ಮೀರತ್‌ನ ಭಾರತೀಯ ಜನತಾ ಪಕ್ಷದ ಪುರಸಭೆ ಸದಸ್ಯ ಮುನೀಶ್ ಚೌಧರಿ ಪೊಲೀಸರನ್ನು ಹೊಡೆದಿರುವ ಘಟನೆ ಇದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಪೊಲೀಸ್ ಯುನಿಫಾರ್ಮನಲ್ಲಿರುವ ಅಧಿಕಾರಿಯನ್ನು ಓರ್ವ ವ್ಯಕ್ತಿ ಕುತ್ತಿಗೆ ಹಿಡಿದು ಮನಬಂದಂತೆ ಕಪಾಳಕ್ಕೆ ಹೊಡೆಯುತ್ತಿರುವುದು ಕಾಣಬಹುದು. ವ್ಯಕ್ತಿ ಹೊಡೆದ ಏಟಿಗೆ ಪೊಲೀಸ್ ಅಧಿಕಾರಿ ಆಯತಪ್ಪಿ ನೆಲಕ್ಕೆ ಬೀಳುತ್ತಾನೆ. ಪಶ್ಚಿಮ ಬಂಗಾಳದ ಶಾಸಕ ಮೊಹಮ್ಮದ್ ಪೊಲೀಸರನ್ನು ಹೊಡೆಯುತ್ತಿದ್ದಾನೆ ಎಂಬ ಹೇಳಿಕೆಯೊಂದಿಗೆ ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಮಾರ್ಚ್ 22, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದ ಶಾಸಕ ಮೊಹಮ್ಮದ್ "ಪೊಲೀಸರನ್ನು ಹೊಡೆಯುತ್ತಿದ್ದಾನೆ"?. ಪೊಲೀಸರ ಸ್ಥಿತಿ ಹೀಗಿರುವಾಗ ಬಂಗಾಳದ ಮತದಾರರ ಸ್ಥಿತಿ ಏನಾಗಬಹುದು?. ಈ ಹಿಂದೆ ಯುಪಿಯಲ್ಲಿ ಪರಿಸ್ಥಿತಿ ಹೀಗಿತ್ತು, ಒಬ್ಬ ಪೋಲೀಸ್‌ನನ್ನು ಕೊಂದ ನಂತರ ಮೃತ ದೇಹವನ್ನು ಸಂಗ್ರಹಿಸಲು ಅತೀಕ್ ಅಹ್ಮದ್ ಡಿಜಿಪಿಗೆ ಕರೆ ಮಾಡುತ್ತಿದ್ದ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೋ 2018 ರದ್ದಾಗಿದ್ದು, ಮೀರತ್‌ನ ಬಿಜೆಪಿ ಪುರಸಭೆಯ ಸದಸ್ಯರೊಬ್ಬರು ಪೊಲೀಸರನ್ನು ಹೊಡೆದ ಘಟನೆ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಅಕ್ಟೋಬರ್ 20, 2018 ರಂದು ಹಿಂದೂಸ್ತಾನ್ ಟೈಮ್ಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವೈರಲ್ ವೀಡಿಯೊ ಅಪ್ಲೋಡ್ ಆಗಿರುವುದು ಕಂಡುಬಂದಿದೆ. ಇದಕ್ಕೆ "ಉತ್ತರ ಪ್ರದೇಶದಲ್ಲಿ ಬಿಜೆಪಿ ಕಾರ್ಪೊರೇಟರ್ ಸಬ್ ಇನ್ಸ್‌ಪೆಕ್ಟರ್‌ಗೆ ಥಳಿಸಿ, ಮಹಿಳಾ ವಕೀಲರನ್ನು ಬೆದರಿಸಿದರು" ಎಂದು ಶೀರ್ಷಿಕೆ ನೀಡಲಾಗಿದೆ.
ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಮೀರತ್‌ನ ಭಾರತೀಯ ಜನತಾ ಪಕ್ಷದ ಪುರಸಭೆ ಸದಸ್ಯ ಮುನೀಶ್ ಚೌಧರಿ ಅವರನ್ನು ಅಕ್ಟೋಬರ್ 20, 2018 ರಂದು ಚೌಧರಿ ಅವರ ರೆಸ್ಟೋರೆಂಟ್‌ನಲ್ಲಿ ಕೆಲಸ ವಿಳಂಬವಾದ ಬಗ್ಗೆ ವಾಗ್ವಾದದ ನಂತರ ಸಬ್-ಇನ್ಸ್‌ಪೆಕ್ಟರ್ ಸುಖ್‌ಪಾಲ್ ಸಿಂಗ್ ಪನ್ವಾರ್ ಅವರನ್ನು ಥಳಿಸಿದ್ದಕ್ಕಾಗಿ ಬಂಧಿಸಲಾಯಿತು’’ ಎಂದು ಹೇಳಲಾಗಿದೆ.
ANI UP ಅಧಿಕೃತ X ಖಾತೆಯಲ್ಲಿ ಕೂಡ ಅಕ್ಟೋಬರ್ 20, 2018 ರಂದು ಇದೇ ವೈರಲ್ ವೀಡಿಯೊ ಹಂಚಿಕೊಳ್ಳಲಾಗಿದ್ದು, ಈ ಘಟನೆ ಅಕ್ಟೋಬರ್ 19, 2018 ರಂದು ನಡೆದಿರುವುದಾಗಿ ಹೇಳಿದೆ. ‘‘ಮಹಿಳಾ ವಕೀಲೆಯೊಂದಿಗೆ ಹೋಟೆಲ್‌ಗೆ ಬಂದು ವೈಟರ್ ಜೊತೆ ವಾಗ್ವಾದಕ್ಕಿಳಿದ ಸಬ್-ಇನ್ಸ್‌ಪೆಕ್ಟರ್ ಮೇಲೆ ಬಿಜೆಪಿ ಕೌನ್ಸಿಲರ್ ಮನೀಷ್ ಹಲ್ಲೆ ನಡೆಸಿದ್ದಾರೆ. ಕೌನ್ಸಿಲರ್‌ನನ್ನು ಬಂಧಿಸಲಾಗಿದೆ’’ ಎಂದು ಟ್ವೀಟ್ನಲ್ಲಿ ಬರೆಯಲಾಗಿದೆ.
#WATCH: BJP Councillor Manish thrashes a Sub-Inspector who came to his (Manish's) hotel with a lady lawyer and got into an argument with a waiter. The councillor has been arrested. (19.10.18) (Note- Strong Language) pic.twitter.com/aouSxyztSa
— ANI UP/Uttarakhand (@ANINewsUP) October 20, 2018
ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡ ಅಕ್ಟೋಬರ್ 2018 ರ ಹಲವು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಇದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಓದಬಹುದು. ವರದಿಯ ಪ್ರಕಾರ, ಸಬ್-ಇನ್ಸ್‌ಪೆಕ್ಟರ್ ಮಹಿಳಾ ವಕೀಲರೊಂದಿಗೆ ಬಿಜೆಪಿ ನಾಯಕನ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭ ಸಮಯಕ್ಕೆ ಸರಿಯಾಗಿ ವೈಟರ್ ಸೇವೆ ಸಲ್ಲಿಸದಿರುವ ಬಗ್ಗೆ ಆ ಮಹಿಳೆ ವೇಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇದು ನಂತರ ವೈರಲ್ ಕ್ಲಿಪ್‌ನಲ್ಲಿ ಸೆರೆಹಿಡಿಯಲಾದ ಜಗಳವಾಗಿ ಮಾರ್ಪಟ್ಟಿತು’’ ಎಂದು ಹೇಳಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪಶ್ಚಿಮ ಬಂಗಾಳದ ಶಾಸಕ ಮೊಹಮ್ಮದ್ ಪೊಲೀಸರನ್ನು ಹೊಡೆಯುತ್ತಿದ್ದಾನೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು 2018ರ ವೀಡಿಯೊ ಆಗಿದ್ದು, ಮೀರತ್‌ನ ಭಾರತೀಯ ಜನತಾ ಪಕ್ಷದ ಪುರಸಭೆ ಸದಸ್ಯ ಮುನೀಶ್ ಚೌಧರಿ ಪೊಲೀಸರನ್ನು ಹೊಡೆದಿರುವ ಘಟನೆ ಇದಾಗಿದೆ.