Fact Check: 24 ಮಕ್ಕಳ ತಾಯಿ ಎಂದು ಮಹಿಳೆ ಹೇಳಿಕೊಳ್ಳುವ ಈ ವೈರಲ್ ವೀಡಿಯೊ ಹಿಂದಿನ ಸತ್ಯವೇನು?
ಮಹಿಳೆಯೊಬ್ಬರ ಸಂದರ್ಶನದ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶದ ಈ ಮಹಿಳೆ 24 ಮಕ್ಕಳನ್ನು ಹೊಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ.
By Vinay Bhat Published on 25 Dec 2024 4:15 PM ISTClaim: ಉತ್ತರ ಪ್ರದೇಶದ ಈ ಮಹಿಳೆ 24 ಮಕ್ಕಳನ್ನು ಹೊಂದಿದ್ದಾರೆ.
Fact: ಇದು ಮನರಂಜನೆ ಉದ್ದೇಶಕ್ಕಾಗಿ ಮಾಡಿದ ಸ್ಕ್ರಿಪ್ಟ್ ವೀಡಿಯೊ ಆಗಿದೆ.
ಮಹಿಳೆಯೊಬ್ಬರ ಸಂದರ್ಶನದ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶದ ಈ ಮಹಿಳೆ 24 ಮಕ್ಕಳನ್ನು ಹೊಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಹಾತಾಯಿ, ಇವರು 24 ಮಕ್ಕಳ ತಾಯಿ. ಉತ್ತರಪ್ರದೇಶದ ಒಂದು ಹಳ್ಳಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಶ್ರೀಮಂತಿಕೆ ಇಲ್ಲದೇ ಇದ್ದರೂ, ಗಂಡ ಕೇವಲ ವೃತ್ತಿ ಮಾಡುತ್ತಿದ್ದರೂ, 24 ಮಕ್ಕಳನ್ನು ಹಡೆದು ಈ ದೇಶದ ಜನಸಂಖ್ಯೆಗೆ ಮತ್ತಷ್ಟು ಸೇರಿಸಿದ್ದಾರೆ. 24 ಮಕ್ಕಳ ತಾಯಿ ತನ್ನ ಶಾರೀರಿಕ ಸೌಂದರ್ಯದಲ್ಲೂ ಯಾರಿಗೂ ಕಮ್ಮಿ ಇಲ್ಲದಂತೆ ಕಾಪಾಡಿಕೊಂಡಿರುವುದು ಇನ್ನೂ ಹೆಮ್ಮೆಯ ವಿಚಾರ ಕೇಳಿದರೆ, ಎಲ್ಲವೂ ದೈವ ಇಚ್ಛೆ ಎಂದಷ್ಟೇ ಹೇಳುತ್ತಾಳೆ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಇದು ಸ್ಕ್ರಿಪ್ಟ್ ಮಾಡಲಾದ ವೀಡಿಯೊ ಎಂಬುದು ಕಂಡುಬಂದಿದೆ. ಮನರಂಜನೆಗಾಗಿ ಮಾಡಿದ ಈ ವೀಡಿಯೊವನ್ನು ಕೆಲವರು ನಿಜವೆಂದು ಪರಿಗಣಿಸಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದಿಂದ ತೆಗೆದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಭಾರತ್ ಪ್ರೈಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. 11 ಆಗಸ್ಟ್ 2024 ರಂದು ಅಪ್‌ಲೋಡ್ ಮಾಡಲಾದ ಈ ವೀಡಿಯೊದಲ್ಲಿ ಆಕೆಗೆ 24 ಮಕ್ಕಳಿದ್ದಾರೆ ಎಂದು ಹೇಳುವ ವೀಡಿಯೊ ವೈರಲ್ ಆದ ನಂತರ ಭಾರತ್ ಪ್ರೈಮ್ ತಂಡವು ಮಹಿಳೆಯನ್ನು ಸಂಪರ್ಕಿಸಿ ಸಂದರ್ಶನ ನಡೆಸಿರುವುದು ಇದರಲ್ಲಿದೆ.
ಈ ಸಂದರ್ಶನದ 8.50 ನಿಮಿಷಗಳಲ್ಲಿ, ವೈರಲ್ ವೀಡಿಯೊದಲ್ಲಿರುವ ಮಹಿಳೆ ನನ್ನ ಹೆಸರು ಖುಷ್ಬೂ ಪಾಠಕ್ ಎಂದು ಹೇಳಿದ್ದಾಳೆ ಮತ್ತು ತಾನು ಸ್ಕ್ರಿಪ್ಟ್ ಮಾಡಿದ ಹಾಸ್ಯ ವೀಡಿಯೊಗಳಲ್ಲಿ ನಟಿಸುತ್ತೇನೆ ಎಂಬುದನ್ನೂ ತಿಳಿಸಿದ್ದಾಳೆ. ಜೊತೆಗೆ 24 ಮಕ್ಕಳಿದ್ದಾರೆ ಎಂದು ಮಾಡಿರುವ ವೈರಲ್ ವೀಡಿಯೊ ಕಾಲ್ಪನಿಕ ಎಂದು ಸ್ಪಷ್ಟಪಡಿಸಿರುವುದು ಇದರಲ್ಲಿದೆ.
ನ್ಯೂಸ್ 24 ಯುಪಿ & ಉತ್ತರಖಂಡ್ ಕೂಡ 14 ಆಗಸ್ಟ್ 2024 ರಲ್ಲಿ ಇದೇ ಮಹಿಳೆಯ ಆನ್ಲೈನ್ ಸಂದರ್ಶನ ನಡೆಸಿದೆ. ಫೇಸ್ಬುಕ್ನಲ್ಲಿ ಈ ಸಂದರ್ಶನ ವೀಡಿಯೊ ಅಪ್ಲೋಡ್ ಮಾಡಿದ್ದು, ‘‘ಎರಡು ಡಜನ್ ಮಕ್ಕಳ ಸುಂದರ ತಾಯಿ, ಅವರ ಮುಂದೆ ನಾಯಕಿಯರು ಸಹ ವಿಫಲರಾಗುತ್ತಾರೆ! ಇದರ ಸತ್ಯ ತಿಳಿದರೆ ಅಚ್ಚರಿ ಪಡುತ್ತೀರಿ’’ ಎಂಬ ಶೀರ್ಷಿಕೆ ನೀಡಿದೆ. ಈ ವೀಡಿಯೊದಲ್ಲಿ ಕೂಡ ಅದೊಂದು ಮನರಂಜನೆಗೋಸ್ಕರ ಮಾಡಿದ ಕಾಮಿಡಿ ವೀಡಿಯೊ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗೆಯೆ ಖಬರ್ ದುನಿಯಾ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 18, 2024 ರಂದು ಪ್ರಕಟಿಸಲಾದ ಮತ್ತೊಂದು ವೀಡಿಯೊವನ್ನು ಕೂಡ ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊದಲ್ಲಿನ ಸಂದರ್ಶನದ ಸಮಯದಲ್ಲಿ, ‘‘ನಮ್ಮ ಮನೆಯಲ್ಲಿ ಇಬ್ಬರು ಮಕ್ಕಳಿದ್ದಾರೆ ಮತ್ತು ಇತರ 22 ಗಿಡಗಳನ್ನು ಬೆಳೆಸಿದ್ದೇನೆ. ಹೀಗಾಗಿ ನನಗೆ ಒಟ್ಟಿ 24 ಮಕ್ಕಳಿದ್ದಾರೆ. ನಾನು ನೆಟ್ಟ ಮರಗಳು ನನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತೇನೆ’’ ಎಂದು ಹೇಳಿರುವುದು ಇದೆ. ಹಾಗೆಯೆ ಖುಷ್ಬು ತನ್ನದೊಂದು ‘ಅಪ್ನಾ ಅಜ್’ ಎಂಬ ಯೂಟ್ಯೂಬ್ ಚಾನೆಲ್ ಇದೆ ಎಂದು ಉಲ್ಲೇಖಿದಿದ್ದಾರೆ.
ಆ ಬಳಿಕ ನಾವು ಖುಷ್ಬು ಪಾಠಕ್ ಅವರು ಉಲ್ಲೇಖಿಸಿರುವ ‘ಅಪ್ನಾ ಅಜ್’ ಯೂಟ್ಯೂಬ್ ಚಾನೆಲ್ ಅನ್ನು ನಾವು ಹುಡುಕಿದ್ದೇವೆ. ಆಗ ಇವರ ಖಾತೆ ನಮಗೆ ಸಿಕ್ಕಿದ್ದು, ಈ ಚಾನೆಲ್‌ನಲ್ಲಿ ಅನೇಕ ಸ್ಕ್ರಿಪ್ಟೆಡ್ ವೀಡಿಯೊಗಳನ್ನು ಅಪ್ಲೋಡ್ ಮಾಡಲಾಗಿದೆ. ಯೂಟ್ಯೂಬ್ ಚಾನೆಲ್ ನಲ್ಲಿ ಅವರು ತಮ್ಮ ಬಯೋದಲ್ಲಿ ಕಾಮಿಡಿ ವೀಡಿಯೊಗಳನ್ನು ಮಾಡುತ್ತಾರೆ ಎಂದು ಬರೆದಿದ್ದಾರೆ. ಅಲ್ಲದೆ ಈ ಯೂಟ್ಯೂಬ್ ಚಾನೆಲ್‌ನಲ್ಲಿ ‘24 ಮಕ್ಕಳ ತಾಯಿ’ ಎಂಬ ಶೀರ್ಷಿಕೆಯೊಂದಿಗೆ ಅನೇಕ ವೀಡಿಯೊಗಳನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮಹಿಳೆ 24 ಮಕ್ಕಳನ್ನು ಹೊಂದಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಸ್ಕ್ರಿಪ್ಟೆಡ್ ಎಂದು ನಾವು ಖಚಿತವಾಗಿ ಹೇಳುತ್ತೇವೆ.