ಶಾಲಿಮಾರ್ ಬಾಗ್ ವಿಧಾನಸಭಾ ಸ್ಥಾನದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದ ರೇಖಾ ಗುಪ್ತಾ ದೆಹಲಿಯ ನೂತನ ಮುಖ್ಯಮಂತ್ರಿಯಾಗಿದ್ದಾರೆ. ಪಕ್ಷದ ಹಿರಿಯ ನಾಯಕರ ನಡುವೆ ಸುಮಾರು ಎರಡು ವಾರಗಳ ಕಾಲ ಚರ್ಚೆ ನಡೆದ ನಂತರ, ರೇಖಾ ಗುಪ್ತಾ ಅವರ ಹೆಸರನ್ನು ಮುಖ್ಯಮಂತ್ರಿಯಾಗಿ ಘೋಷಿಸಲಾಯಿತು. ಫೆಬ್ರವರಿ 19, 2025 ರಂದು ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಮಹಿಳೆಯೊಬ್ಬರು ನದಿಯ ದಡದಲ್ಲಿ ಪೂಜೆ ಸಲ್ಲಿಸುತ್ತಿರುವುದು, ನಂತರ ಸ್ಟ್ರೆಚಿಂಗ್ ವ್ಯಾಯಾಮ ಮಾಡುವುದು, ಕೌಶಲ್ಯದಿಂದ ಕತ್ತಿ ಹಿಡಿಯುವುದನ್ನು ತೋರಿಸಲಾಗಿದೆ. ಇವರು ದೆಹಲಿಯಲ್ಲಿ ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಂಬ ಹೇಳಿಕೆಯೊಂದಿಗೆ ಅನೇಕರು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಫೆಬ್ರವರಿ 21, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಆರ್.ಎಸ್. ಎಸ್.ಕಾರ್ಯಕರ್ತೆ ರೇಖಾ ಗುಪ್ತಾ ಅವರ ಹಳೆಯ ವಿಡಿಯೋ, ಈಗ ದೆಹಲಿ ಸಿಎಂ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಹೇಳಿಕೆ ಸುಳ್ಳು ಎಂದು ನ್ಯೂಸ್ ಮೀಟರ್ ಕಂಡುಕೊಂಡಿದೆ. ವೀಡಿಯೊದಲ್ಲಿ ಇರುವ ಮಹಿಳೆ ಮರಾಠಿ ನಟಿ ಪಾಯಲ್ ಜಾಧವ್ ಆಗಿದ್ದಾರೆ.
ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಫೆಬ್ರವರಿ 19, 2025 ರ ಮೂಲ ಪೋಸ್ಟ್ ಮರಾಠಿ ನಟಿ ಪಾಯಲ್ ಜಾಧವ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಿಕ್ಕಿತು. ಶೀರ್ಷಿಕೆಯಲ್ಲಿ, ಶಿವಾಜಿ ಜಯಂತಿಯ ಸ್ಮರಣಾರ್ಥವಾಗಿ ವೀಡಿಯೊ ಪ್ರದರ್ಶನ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಜಾಧವ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ, ಮರಾಠಿ ನಾಟಕ ಅಬೀರ್ ಗುಲಾಲ್ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ ಹಲವಾರು ವೀಡಿಯೊಗಳನ್ನು ನಾವು ನೋಡಿದ್ದೇವೆ. ( ವೀಡಿಯೊಗಳನ್ನು ವೀಕ್ಷಿಸಲು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡಿ.)
ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಜಾಧವ್ ಅವರ ಇತ್ತೀಚಿನ ಚಿತ್ರಗಳಲ್ಲಿ ತ್ರೀ ಆಫ್ ಅಸ್ ಮತ್ತು ಬಾಪ್ಲ್ಯೋಕ್ ಸೇರಿವೆ. ಐಎಮ್‌ಡಿಬಿ ಅವರು ಪ್ಯಾರೀಸ್, ಗೋಲ್ ಮಾಲ್ ಮತ್ತು ಮನ್ವತ್ ಮರ್ಡರ್ಸ್ ಚಿತ್ರಗಳ ಪಾತ್ರವರ್ಗದ ಭಾಗದಲ್ಲಿ ಇವರ ಹೆಸರನ್ನು ಪಟ್ಟಿ ಮಾಡಿದೆ.
ಜಾಧವ್ ಮತ್ತು ರೇಖಾ ಗುಪ್ತಾ ಅವರ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿದಾಗ ವೈರಲ್ ವೀಡಿಯೊದಲ್ಲಿರುವವರು ದೆಹಲಿ ಸಿಎಂ ಅಲ್ಲ ಎಂದು ದೃಢಪಟ್ಟಿದೆ.
ಆದ್ದರಿಂದ, ವೈರಲ್ ವೀಡಿಯೊದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅಲ್ಲ, ಮರಾಠಿ ನಟಿ ಪಾಯಲ್ ಜಾದಹವ್ ಇದ್ದಾರೆ ಎಂದು ನಾವು ತೀರ್ಮಾನಿಸುತ್ತೇವೆ. ಈ ಹೇಳಿಕೆ ಸುಳ್ಳು.