ಚಲಿಸುವ ರೈಲಿನ ಮೇಲೆ ಸ್ಕೇಟಿಂಗ್ ಸ್ಟಂಟ್ ಮಾಡುವಾಗ ವ್ಯಕ್ತಿಯೊಬ್ಬ ಭೀಕರ ಅಪಘಾತಕ್ಕೆ ಸಿಲುಕಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ರೈಲಿನ ಮೇಲೆ ಸ್ಕೇಟಿಂಗ್ ಮಾಡುವ ಯುವಕ ಸಮತೋಲನ ಕಳೆದುಕೊಂಡು ಮೇಲಿನಿಂದ ಬೀಳುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರೈಲಿನ ಮೇಲೆ ಸ್ಟಂಟ್ ಮಾಡಲು ಹೋಗಿ ಕೆಳಗೆ ಬಿದ್ದ ಯುವಕ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಯಾವುದೇ ನೈಜ ಘಟನೆಯನ್ನು ಚಿತ್ರಿಸಿಲ್ಲ, ಬದಲಾಗಿ ಇದು AI- ರಚಿತ ಕ್ಲಿಪ್ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದ್ದೇವೆ. ಈ ಸಂದರ್ಭ ಡಿಸೆಂಬರ್ 5 ರಂದು sphereofAI ಹೆಸರಿನಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಲಾದ ಇದೇ ವೀಡಿಯೊಕ್ಕೆ ನಮ್ಮನ್ನು ಕರೆದೊಯ್ಯಿತು. ಇದಕ್ಕೆ ನೀಡಿರುವ ವಿವರಗಳನ್ನು ವಿಶ್ಲೇಷಿಸಿದಾಗ, ಬಳಕೆದಾರರು ಇದು AI- ರಚಿತವಾಗಿದೆ ಮತ್ತು ನಿಜವಾದ ಘಟನೆಯನ್ನು ಚಿತ್ರಿಸುವುದಿಲ್ಲ ಎಂದು ಹೇಳಿದ್ದಾರೆ.
ಇವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ ಬಯೋದಲ್ಲಿ ತಾನು ಎಐ ಸೃಷ್ಟಿಕರ್ತ ಎಂದು ಬರೆದುಕೊಂಡಿದ್ದಾರೆ. ಈ ಖಾತೆಯಲ್ಲಿ ಅನೇಕ AI-ರಚಿತ ವಿಷಯವನ್ನು ಹಂಚಿಕೊಂಡಿರುವುದು ಕಂಡುಬಂತು.
ಬಳಿಕ ನಾವು AI ಪತ್ತೆ ಸಾಧನ ಹೈವ್ ಮಾಡರೇಶನ್ ಅನ್ನು ಬಳಸಿಕೊಂಡು ವೈರಲ್ ಕ್ಲಿಪ್ ಅನ್ನು ವಿಶ್ಲೇಷಿಸಿದ್ದೇವೆ. ಇದು ಶೇಕಡಾ 99 ರಷ್ಟು ದೃಶ್ಯಗಳು AI-ರಚಿತವಾಗಿದೆ ಎಂದು ದೃಢಪಡಿಸಿದೆ.
ಹೀಗಾಗೀ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಚಲಿಸುವ ರೈಲಿನಲ್ಲಿ ಸ್ಕೇಟಿಂಗ್ ಸ್ಟಂಟ್ ಮಾಡುತ್ತಿರುವ ವ್ಯಕ್ತಿಯೊಬ್ಬನ AI-ರಚಿತ ವೀಡಿಯೊವನ್ನು ನಿಜವೆಂದು ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.