ಮದುವೆಗೆ ಕೆಲವೇ ಗಂಟೆಗಳ ಮೊದಲು ವಧು ತನ್ನ ಮಾಜಿ ಪ್ರಿಯತಮೆಯನ್ನು ಭೇಟಿಯಾಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ದೃಶ್ಯಗಳಲ್ಲಿ ಇಬ್ಬರೂ ರಸ್ತೆಯಲ್ಲಿ ಸಂಭಾಷಣೆಯಲ್ಲಿ ತೊಡಗಿದಂತೆ ತೋರುತ್ತಿದ್ದರೆ, ಮಹಿಳೆಯನ್ನು ಅಲ್ಲಿಗೆ ಕರೆದುಕೊಂಡು ಬಂದ ಇನ್ನೊಬ್ಬ ವ್ಯಕ್ತಿ ಆ ಕ್ಷಣವನ್ನು ರೆಕಾರ್ಡ್ ಮಾಡಿದ್ದಾರೆ. ಕ್ಲಿಪ್‌ನಲ್ಲಿ, ಕುಟುಂಬದ ಒತ್ತಡದಿಂದಾಗಿ ಮಹಿಳೆ ತನ್ನ ಮಾಜಿ ಸಂಗಾತಿಯನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಹೇಳಿಕೊಂಡಿದ್ದಾರೆ. ಕಾರಿಗೆ ಹಿಂತಿರುಗಿದ ನಂತರ ಮಹಿಳೆ ಅಳುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮದುವೆಯ ಕೊನೆ ಕ್ಷಣದಲ್ಲಿ ಮಾಜಿ ಲವ್ವರ್ನ್ ಭೇಟಿಯಾಗಿ ಕಣ್ಣೀರಿಟ್ಟ ಯುವತಿ!’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ದಾರಿ ತಪ್ಪಿಸುವ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನೈಜ್ಯವಾಗಿ ನಡೆದ ಘಟನೆ ಅಲ್ಲ ಬದಲಾಗಿ ಇದು ಸ್ಕ್ರಿಪ್ಟೆಡ್ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಡಿಸೆಂಬರ್ 13 ರಂದು @chalte_phirte098 ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡ ಪೋಸ್ಟ್ ಸಿಕ್ಕಿತು. ಈ ಖಾತೆಯು ಡಿಜಿಟಲ್ ಸೃಷ್ಟಿಕರ್ತ ಆರವ್ ಮಾವಿ ಅವರಿಗೆ ಸೇರಿದೆ. ಖಾತೆಯ ಬಯೋದಲ್ಲಿ, "ಹೃದಯಕ್ಕೆ ನೋವಾಗ ಘಟನೆಯನ್ನು ಕಥೆಗಳನ್ನಾಗಿ ಪರಿವರ್ತಿಸುವುದು.. ಪ್ರತಿ ಛಿದ್ರಗೊಂಡ ಹೃದಯಕ್ಕೂ ಒಂದು ಕಥೆ ಇರುತ್ತದೆ. ನಿಮ್ಮದನ್ನು ನನ್ನೊಂದಿಗೆ ಹಂಚಿಕೊಳ್ಳಿ!" ಎಂದು ಬರೆಯಲಾಗಿದೆ.
ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ವೀಕ್ಷಿಸಿದಾಗ ಇದೇ ವೈರಲ್ ವೀಡಿಯೊ ಬಗ್ಗೆ ಅವರು ಮಾತನಾಡಿರುವುದು ಸಿಕ್ಕಿದೆ. ‘‘ನಾನು ಈ ವೀಡಿಯೊ ಹಂಚಿಕೊಂಡಿರುವುದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇದು ನಿಜವಾದ ವೀಡಿಯೊ ಅಲ್ಲ, ಆದರೆ, ನಿಜ ಸಂಗತಿಯನ್ನು ಆಧರಿಸಿದ ವೀಡಿಯೊ ಆಗಿದೆ ಎಂದು ಹೇಳಿದ್ದಾರೆ.’’ ಜನರು ತಮ್ಮ ಬಗ್ಗೆ ರೀಲ್‌ಗಳನ್ನು ರಚಿಸಲು ಬಯಸಿದರೆ ಇವರು ಅವರ ಕಥೆಗಳನ್ನು ಕಳುಹಿಸಲು ಕೇಳುತ್ತಾರೆ. ಮಾವಿ ಆಗಾಗ್ಗೆ ಪ್ರೀತಿ ಮತ್ತು ಸಂಬಂಧಗಳಂತಹ ವಿಷಯಗಳ ಕುರಿತು ಇಂತಹ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ರಚಿಸುತ್ತಾರೆ. ಅಂತಹ ಕೆಲವು ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮಹಿಳೆಯೊಬ್ಬಳು ತನ್ನ ಮದುವೆಗೆ ಕೆಲವು ಗಂಟೆಗಳ ಮೊದಲು ತನ್ನ ಮಾಜಿ ಸಂಗಾತಿಯನ್ನು ಭೇಟಿಯಾಗುವುದನ್ನು ತೋರಿಸುವ ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ವೀಕ್ಷಕರನ್ನು ದಾರಿ ತಪ್ಪಿಸಲು ನೈಜ ಘಟನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.