2025 ರ ಪಂಜಾಬ್ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ 42 ಕೋಟಿ ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಒಂದು ಫೋಟೋ ಕೂಡ ವೈರಲ್ ಆಗುತ್ತಿದ್ದು, ಇದರಲ್ಲಿ ಯುವರಾಜ್ ಸಿಂಗ್ ಡೊನೇಟ್ ಮಾಡುತ್ತಿರುವುದನ್ನು ಕಾಣಬಹುದು. ಜೊತೆಗೆ ಇವರ ಹಿಂಭಾಗ ನೀಲಿ ಬಣ್ಣದ ಅನೇಕ ಟ್ರ್ಯಾಕ್ಟರ್ಗಳಿವೆ.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಯುವರಾಜ್ ಸಿಂಗ್- ಭಾರತದ ಕ್ರಿಕೆಟಿಗ ಇತ್ತೀಚಿಗೆ ಪ್ರವಾಹ ಬಂದು ಸಂಕಷ್ಟದಲ್ಲಿರುವ ಪಂಜಾಬ್ ರೈತರಿಗೆ 42 ಕೋಟಿ ವ್ಯಚ್ಚ ಮಾಡಿ ಬರೋಬ್ಬರಿ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡಿದ್ದಾರೆ. ಇವರ ಹೃದಯ ವೈಶಾಲ್ಯತೆಗೆ ಒಂದು ಸಲಾಂ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಸುದ್ದಿ ಎಂಬುದು ತಿಳಿದುಬಂದಿದೆ. ಯುವರಾಜ್ ಸಿಂಗ್ ಈರೀತಿಯ ಯಾವುದೇ ದಾನಾ ಮಾಡಿಲ್ಲ. ಅಲ್ಲದೆ ಯುವರಾಜ್ ದಾನಾ ಮಾಡಿದ್ದಾರೆ ಎಂದು ವೈರಲ್ ಆಗುತ್ತಿರುವ ಫೋಟೋ ಕೃತಕ ಬುದ್ದಿಮತ್ತೆಯಿಂದ ರಚಿಸಿದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಈ ಹೇಳಿಕೆಯನ್ನು ಸಂಬಂಧಿತ ಕೀವರ್ಡ್‌ನೊಂದಿಗೆ ಗೂಗಲ್ನಲ್ಲಿ ಹುಡುಕಿದೆವು. ಆದರೆ ಯಾವುದೇ ಮಾಧ್ಯಮ ವರದಿಗಳು ಅಥವಾ ಅದನ್ನು ಬೆಂಬಲಿಸುವ ವಿಶ್ವಾಸಾರ್ಹ ಮಾಹಿತಿ ಕಂಡುಬಂದಿಲ್ಲ. ಯುವರಾಜ್ ಸಿಂಗ್ ಇಷ್ಟು ದೊಡ್ಡ ಮೊತ್ತದ ದೇಣಿಗೆ ನೀಡಿದ್ದೇ ಆಗಿದ್ದರೆ ಅದು ದೊಡ್ಡ ಸುದ್ದಿ ಆಗಿರುತ್ತಿತ್ತು ಆದರೆ ಅಂತಹ ಯಾವುದೇ ಸುದ್ದಿ ವರದಿ ಆಗಿಲ್ಲ.
ಹುಡುಕಾಟದ ಸಮಯದಲ್ಲಿ, ಸೋನು ಸೂದ್, ರಣದೀಪ್ ಹೂಡಾ, ಕಪಿಲ್ ಶರ್ಮಾ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ದಿಲ್ಜಿತ್ ದೋಸಾಂಜ್, ಆಮಿ ವಿರ್ಕ್, ಸೋನಮ್ ಬಾಜ್ವಾ, ಗುರುದಾಸ್ ಮಾನ್, ವಿಕ್ಕಿ ಕೌಶಲ್, ಭೂಮಿ ಪೆಡ್ನೇಕರ್, ಕರಣ್ ಔಜ್ಲಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಪಂಜಾಬ್ ಪ್ರವಾಹ ಪೀಡಿತರಿಗೆ ಸಹಾಯ ಮಾಡಿದ್ದಾರೆ ಎಂಬ ವರದಿ ಸಿಕ್ಕಿತು. ಆದಾಗ್ಯೂ, ಯುವರಾಜ್ ಸಿಂಗ್ 600 ಟ್ರಾಕ್ಟರ್‌ಗಳನ್ನು ನೀಡಲು ನಿರ್ಧರಿಸಿದ್ದಾರೆ ಎಂಬುದಕ್ಕೆ ಯಾವುದೇ ಮಾಧ್ಯಮ ವರದಿಗಳು ಅಥವಾ ಪುರಾವೆಗಳು ನಮಗೆ ಕಂಡುಬಂದಿಲ್ಲ.
ನಂತರ ನಾವು ಯುವರಾಜ್ ಸಿಂಗ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಮತ್ತು ಅವರ ಫೌಂಡೇಶನ್ You We Can ಖಾತೆಗಳು ಮತ್ತು ವೆಬ್‌ಸೈಟ್ ಪರಿಶೀಲಿಸಿದ್ದೇವೆ. ಆದರೆ 600 ಟ್ರ್ಯಾಕ್ಟರ್‌ಗಳ ದೇಣಿಗೆಯ ಬಗ್ಗೆ ಇಲ್ಲೂ ಯಾವುದೇ ಉಲ್ಲೇಖ ಕಂಡುಬಂದಿಲ್ಲ. ಸೆಪ್ಟೆಂಬರ್ 01, 2025 ರಂದು ಯುವರಾಜ್ ಮಾಡಿದ ಪೋಸ್ಟ್ ಒಂದು ಕಂಡುಬಂತು. ಇದರಲ್ಲಿ ಪಂಜಾಬ್ ಪ್ರವಾಹ ಮತ್ತು ಪೀಡಿತ ಕುಟುಂಬಗಳಿಗೆ ಬೆಂಬಲ ಸೂಚಿಸಿ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಆದರೆ ದೇಣಿಗೆಯ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡಲಿಲ್ಲ.
ಬಳಿಕ ನಾವು ವೈರಲ್ ಫೋಟೋವನ್ನು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಹಿಂದಿಭಾಷೆಯಲ್ಲೂ ಇಂತಹುದೇ ಪೋಸ್ಟ್ ಗಳನ್ನು ನೋಡಿದ್ದೇವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಜೊತೆಗೆ ನಾವು ವೈರಲ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ನೈಜ್ಯತೆಗೆ ದೂರವಾದಂತಿತ್ತು. ಇದರಲ್ಲಿ ತಪ್ಪು ಅಕ್ಷರಗಳು (Yuvaj, Punab) ಕಂಡುಬಂದವು. ಅಲ್ಲದೆ ಫೋಟೋದ ಕೆಳಗಿನ ಬಲ ಮೂಲೆಯಲ್ಲಿ ಜೆಮಿನಿ AI ವಾಟರ್‌ಮಾರ್ಕ್ ಕಂಡುಬಂದಿದೆ, ಇದು ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲ್ಪಟ್ಟಿರಬಹುದು ಎಂಬ ಅನುಮಾನ ಮೂಡಿತು.
ಹೀಗಾಗಿ ನಾವು ವೈರಲ್ ಚಿತ್ರವು AI-ರಚಿತವಾಗಿದೆಯೇ ಎಂದು ಪರಿಶೀಲಿಸಲು, AI ವಿಷಯ ಪತ್ತೆ ಪರಿಕರಗಳನ್ನು ಬಳಸಿಕೊಂಡು ಅದನ್ನು ವಿಶ್ಲೇಷಿಸಿದ್ದೇವೆ. AI ವಿಷಯ ಪತ್ತೆ ಸಾಧನವಾದ ಹೈವ್, ಚಿತ್ರವು AI-ರಚಿತವಾಗಿದೆ ಎಂಬ 98.1% ಸಾಧ್ಯತೆಯನ್ನು ಸೂಚಿಸುತ್ತದೆ. ಹಾಗೆಯೆ was it ai ಕೂಡ ಈ ಫೋಟೋ ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಯುವರಾಜ್ ಸಿಂಗ್ ಪಂಜಾಬ್ ಪ್ರವಾಹ ಪೀಡಿತರಿಗೆ ₹42 ಕೋಟಿ ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡಿದ್ದಾರೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.