ಹೈದರಾಬಾದ್: ಆಕಸ್ಮಿಕವಾಗಿ ಯಾರಾದರೂ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟರೆ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಮರಣೋತ್ತರ ಪರೀಕ್ಷೆಯ ಪ್ರಮಾಣ ಪತ್ರವನ್ನು ಪಡೆದು ನಿಮ್ಮ ವ್ಯಾಪ್ತಿಯ ಅರಣ್ಯ ಇಲಾಖೆ ಕಚೇರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ. ಮೃತರ ವಾರಸುದಾರರಿಗೆ ಅರಣ್ಯ ಇಲಾಖೆಯ ವತಿಯಿಂದ 7.50 ಲಕ್ಷ ಪರಿಹಾರ ದೊರೆಯುತ್ತದೆ. ಈ ಸಂದೇಶವನ್ನು ಇತರರಿಗೂ ತಲುಪಿಸಿ- ಹೀಗೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ನ್ಯೂಸ್ ಮೀಟರ್ ಫ್ಯಾಕ್ಟ್ ಮಾಡಿದಂತೆ ಇದು ಸುಳ್ಳು ಸುದ್ದಿ ಎಂಬುದು ಗೊತ್ತಾಗಿದೆ.
Fact Check
ಎಪಿಸಿಸಿಎಫ್ ವನ್ಯಜೀವಿ ಕುಮಾರ್ ಪುಷ್ಕರ್ ಎಂಬುವರ ಮೂಲಕ ಈ ಬಗ್ಗೆ ಮಾಹಿತಿ ಪಡೆದಿದ್ದು, ಅವರು ತಿಳಿಸಿರುವಂತೆ, ಅರಣ್ಯ ಇಲಾಖೆಯಿಂದ ಅಂಥ ಪರಿಹಾರ ನೀಡುವುದಿಲ್ಲ. ವನ್ಯಜೀವಿಗಳಾದ ಹುಲಿ, ಚಿರತೆ, ಕರಡಿ, ಆನೆ ಮೊದಲಾದ ಪ್ರಾಣಿಗಳಿಂದ ಏನಾದರೂ ಹಾನಿ ಆದಲ್ಲಿ ಆಗ ಪರಿಹಾರವನ್ನು ನೀಡುವುದಕ್ಕೆ ಅವಕಾಶಗಳಿವೆ. ಆ ಮೊತ್ತ ಕೂಡ ದೊಡ್ಡದಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇನ್ನು ನ್ಯೂಸ್ ಮೀಟರ್ ಗೆ ಸರ್ಕಾರದಿಂದ ಹೊರಡಿಸಿರುವ ಅಧಿಕೃತ ಆದೇಶದ ಪತ್ರವೇ ಲಭ್ಯವಾಗಿದ್ದು, ಅದರ ಪ್ರಕಾರವೂ ಪರಿಹಾರ ಮೊತ್ತ ಎರಡು ಲಕ್ಷ ರೂಪಾಯಿ ಎಂಬುದು ಖಾತ್ರಿ ಆಗಿದೆ. ಅದರಲ್ಲಿ ಇರುವಂತೆ, ರೈತ ಕುಟುಂಬಗಳಿಗೆ ನೀಡಬೇಕಾದ ಪರಿಹಾರದ ಬಗ್ಗೆ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ಒಂದು ವೇಳೆ ಆ ಸಮಿತಿಯ ತೀರ್ಪು ಸಮಂಜಸ ಎನಿಸದಿದ್ದರೆ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು.
ಆದ್ದರಿಂದ ರೈತರ ಆತ್ಮಹತ್ಯೆ, ಹಾವು ಕಡಿತದಿಂದ ಸಾವು, ಬಣವೆಗೆ ಬೆಂಕಿ ಬಿದ್ದ ಪ್ರಕರಣಗಳಲ್ಲಿ ಕಂದಾಯ ಇಲಾಖೆಯಿಂದ ಪರಿಹಾರ ನೀಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟು ಆದೇಶವನ್ನು ಹೊರಡಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದಿಂದ ಅನುದಾನವನ್ನು ಸಹ ಒದಗಿಸಲಾಗಿದೆ.
ರೈತರು ಆತ್ಮಹತ್ಯೆ ಮಾಡಿಕೊಂಡಲ್ಲಿ ಐದು ಲಕ್ಷ ಪರಿಹಾರ, ಹಾವು ಕಡಿತ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಎರಡು ಲಕ್ಷ ರೂಪಾಯಿ ಮತ್ತು ಬಣವೆ ನಷ್ಟಕ್ಕೆ ಇಪ್ಪತ್ತು ಸಾವಿರ ರೂಪಾಯಿ ಪರಿಹಾರವಾಗಿ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.
Conclusion
ಸರ್ಕಾರದ ಆದೇಶದಲ್ಲೇ ಯಾವ ಇಲಾಖೆಗೆ ಬರುತ್ತದೆ ಮತ್ತು ಎಷ್ಟು ಮೊತ್ತ ಪಾವತಿಸಬೇಕು ಎಂಬ ಬಗ್ಗೆ ಮಾಹಿತಿ ಇರುವುದರಿಂದ ಅರಣ್ಯ ಇಲಾಖೆಯು ಹಾವಿನ ಕಡಿತದಿಂದ ಮೃತಪಟ್ಟವರಿಗೆ ಏಳೂವರೆ ಲಕ್ಷ ರೂಪಾಯಿ ಪರಿಹಾರ ನೀಡುತ್ತದೆ ಎಂಬುದು ಸುಳ್ಳು ಸುದ್ದಿ.