ಹೈದರಾಬಾದ್: ಮಾಜಿ ಸಿಎಂ ಪುತ್ರನಿಗೆ ಭೀಕರ ಹೃದಯಾಘಾತ, ಕಣ್ಣೀರಿಟ್ಟ ಕನ್ನಡಿಗರು - ಹೀಗೊಂದು ಶೀರ್ಷಿಕೆ ನೀಡಿದ ವಿಡಿಯೋ ವೈರಲ್ ಆಗಿದ್ದು, ಕಣ್ಣೀರಿಟ್ಟ ಕನ್ನಡಿಗರು ಎಂದು ಇರುವುದರಿಂದ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳ ಪೈಕಿ ಒಬ್ಬರ ಮಗ ಇರಬಹುದು ಎಂಬರ್ಥ ಧ್ವನಿಸುತ್ತಿದೆ. ಆದರೆ ಇದು ಓದುಗರನ್ನು ದಿಕ್ಕು ತಪ್ಪಿಸುವಂಥ ಶೀರ್ಷಿಕೆ ಆಗಿದ್ದು, ಈ ವಿಡಿಯೋದಲ್ಲಿನ ಮಾಹಿತಿ ಸಹ ಸುಳ್ಳು ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಎದೆನೋವಿನ ಕಾರಣಕ್ಕೆ ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿಯನ್ನು ಹೃದಯಾಘಾತ ಎಂದು ಶೀರ್ಷಿಕೆಯಲ್ಲಿ ನೀಡಲಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Factcheck
ಮಾಜಿ ಸಿಎಂ ಪುತ್ರ ಎಂಬ ಶೀರ್ಷಿಕೆಯನ್ನು ನೀಡಿ, ಆ ವಿಡಿಯೋದಲ್ಲಿ ಕರ್ನಾಟಕದ ರಾಜಕಾರಣಿಗಳ ಫೋಟೋಗಳನ್ನು ತೋರಿಸಲಾಗುತ್ತದೆ. ಆ ನಂತರ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಎದೆನೋವಿನ ಕಾರಣಕ್ಕೆ ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಯಾವ ಕಾರಣಕ್ಕೆ ದಾಖಲು ಮಾಡಲಾಗಿದೆ ಎಂಬುದನ್ನು ಅವರ ಕುಟುಂಬ ಅಧಿಕೃತವಾಗಿ ಹೇಳಿಲ್ಲ ಎಂಬುದನ್ನೂ ವಿಡಿಯೋದಲ್ಲಿ ಹೇಳಲಾಗಿದೆ. ಆದರೆ ಶೀರ್ಷಿಕೆ ಹಾಗೂ ವಿಡಿಯೋದ ಥಂಬ್ ನೇಲ್ ನಲ್ಲಿ ಮಾಜಿ ಸಿಎಂ ಪುತ್ರನಿಗೆ ಭೀಕರ ಹೃದಯಾಘಾತ ಎಂದು ಹಾಕಲಾಗಿದೆ.
ಇನ್ನು ತೇಜ್ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದರ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ಸುದ್ದಿ ಪ್ರಕಟಿಸಿದೆ. ಬಿಹಾರದ ಪರಿಸರ ಸಚಿವರಾದ ತೇಜ್ ಪ್ರತಾಪ್ ಎದೆ ನೋವು ಕಾಣಿಸಿಕೊಂಡಿದ್ದರಿಂದ ಸಂಜೆ ವೇಳೆ ಪಾಟ್ನಾದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅವರಿಗೆ ಇಸಿಜಿ ಮೊದಲಾದ ಪ್ರಾಥಮಿಕ ಪರೀಕ್ಷೆಗಳನ್ನು ಮಾಡಲಾಯಿತು. ಈ ವೇಳೆ ಯಾವುದೇ ಗಂಭೀರ ಸಮಸ್ಯೆಗಳು ಕಂಡುಬರಲಿಲ್ಲ. ಆದ್ದರಿಂದ ರಾತ್ರಿ 10.50ಕ್ಕೆ ಅವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿದೆ ಎಂದು ಮಾಹಿತಿ ಇದೆ.
ಹೃದಯಾಘಾತ ಆದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ ಆಸ್ಪತ್ರೆಯಿಂದ ಯಾದವ್ ಡಿಸ್ ಚಾರ್ಜ್ ಆಗಿದ್ದರೂ ಹೃದಯಾಘಾತ ಆಗಿದೆ ಅಂತಲೂ ಅದರಲ್ಲೂ ಕರ್ನಾಟಕದ ಮಾಜಿ ಸಿಎಂ ಮಗ ಎಂಬರ್ಥ ಬರುವ ರೀತಿಯಲ್ಲಿ ವಿಡಿಯೋ ಇದೆ.
Conclusion
ಮಾಜಿ ಸಿಎಂ ಪುತ್ರನಿಗೆ ಭೀಕರ ಹೃದಯಾಘಾತ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆದ ವಿಡಿಯೋ ದಾರಿ ತಪ್ಪಿಸುವಂಥ ಪ್ರಯತ್ನ ಅಷ್ಟೇ. ಇನ್ನು ಮಾಹಿತಿ ಸಹ ಸುಳ್ಳು. ಆದ್ದರಿಂದ ಇದು ಸತ್ಯಕ್ಕೆ ದೂರವಾದದ್ದು.