ಹೈದರಾಬಾದ್: “ಇವತ್ತಿನಿಂದ ಗ್ಯಾಸ್ ಬೆಲೆ ಕೇವಲ 500? ಬಡವರ ಬಂಧುವಾದ ಸಿಎಮ್ ಸಿದ್ದರಾಮಯ್ಯ”- ಹೀಗೊಂದು ಶೀರ್ಷಿಕೆ ಇರುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಶೀರ್ಷಿಕೆಯನ್ನು ತಪ್ಪಾಗಿ ನೀಡಿ, ಓದುಗರನ್ನು ದಾರಿ ತಪ್ಪಿಸುವ ಪ್ರಯತ್ನ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ತಿಳಿದುಬಂದಿದೆ. ಶೀರ್ಷಿಕೆಯನ್ನು ಗಮನಿಸಿದರೆ ಇದು ಕರ್ನಾಟಕದಲ್ಲಿ ಘೋಷಣೆ ಮಾಡಿರುವಂಥ ಯೋಜನೆ ಎನಿಸುವಂತಿದೆ. ಆದರೆ ಸುದ್ದಿಯಲ್ಲಿ ತಿಳಿಸಿರುವಂತೆ ಇದು ರಾಜಸ್ಥಾನದ ಸರ್ಕಾರ ಜಾರಿಗೆ ತಂದಿರುವ ಯೋಜನೆ ಆಗಿದೆ.
ಈ ಸುದ್ದಿಯನ್ನು ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ.
Factcheck
ಈ ರೀತಿ ಕರ್ನಾಟಕ ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ಘೋಷಣೆ ಮಾಡಿದ ಯೋಜನೆ ಎಂಬಂತೆ ಶೀರ್ಷಿಕೆ ಇದ್ದರೂ ಸುದ್ದಿಯ ಕೊನೆ ಭಾಗದಲ್ಲಿ, “ನಮ್ಮ ಕರ್ನಾಟಕದಲ್ಲಿ ಕೂಡ ಆಧಾರ್ ಕಾರ್ಡ್ ಹಾಗೂ ಬಿಪಿಲ್ ಕಾರ್ಡ್ ಹೊಂದಿದ್ದರೆ ಉಚಿತ ಇಲ್ಲವೇ 500 ರೂ ಪಡೆದು ಸಿಲಿಂಡರ್ ಕೊಡಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ,” ಎಂದಿದೆ.
ಅಂದ ಹಾಗೆ ಐನೂರು ರೂಪಾಯಿಗೆ ಅಡುಗೆ ಅನಿಲ ಸಿಲಿಂಡರ್ ಎಂಬುದು ರಾಜಸ್ಥಾನದಲ್ಲಿ ಅಲ್ಲಿನ ಮುಖ್ಯಮಂತ್ರಿ- ಕಾಂಗ್ರೆಸ್ ನ ಅಶೋಕ್ ಗೆಹ್ಲೋತ್ ಚಾಲನೆ ನೀಡಿದ ಯೋಜನೆ ಆಗಿದೆ. ಅಲ್ಲಿನ ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳಷ್ಟೇ ಬಾಕಿ ಇದ್ದು, ಇಂಥ ಸಂದರ್ಭದಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಐನೂರು ರೂಪಾಯಿಗೆ ದೊರೆಯುವಂತೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಂದರೆ ಮಾರಾಟದ ಬೆಲೆ ನಿಗದಿಯಂತೆ ಇದ್ದರೂ ವ್ಯತ್ಯಾಸದ ಹಣವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗಿದೆ.
ಇನ್ನೂ ವಿಚಿತ್ರ ಏನೆಂದರೆ, ಐನೂರು ರೂಪಾಯಿಗೆ ಸಿಲಿಂಡರ್ ನೀಡುವ ಯೋಜನೆಗೆ ರಾಜಸ್ಥಾನದಲ್ಲಿ ಜೂನ್ ಐದನೇ ತಾರೀಕಿನಂದೇ ಚಾಲನೆ ನೀಡಲಾಗಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುದ್ದಿಯಲ್ಲಿ, ಈ ಯೋಜನೆಯು ಏಪ್ರಿಲ್ 1, 2023 ರಿಂದ ಜಾರಿಗೆ ಬಂದಿದೆ ಅಂತ ಇದೆ. ಇದು ಸುಳ್ಳು. ಈ ಬಗ್ಗೆ ಎನ್ ಡಿಟಿವಿಯಲ್ಲಿ ಪ್ರಕಟವಾದ ಸುದ್ದಿಯ ಲಿಂಕ್ ನೀಡಲಾಗಿದೆ.
ಉಜ್ವಲ ಎಂಬುದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವಂಥ ಯೋಜನೆ. ಯಾರು ಬಡತನ ರೇಖೆಗಿಂತ ಕೆಳಗಿರುತ್ತಾರೋ ಅವರಿಗೆ ಅಡುಗೆ ಅನಿಲ ಸಿಲಿಂಡರ್ ಅನ್ನು ಐನೂರು ರೂಪಾಯಿಗೆ ದೊರಕಿಸುವಂಥದ್ದು ರಾಜಸ್ಥಾನದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಘೋಷಣೆ. ಅದಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
Conclusion
ರಾಜಸ್ಥಾನದಲ್ಲಿ ಜಾರಿಗೆ ಬಂದ ಯೋಜನೆ ಎಂದು ಶೀರ್ಷಿಕೆ ನೀಡಬೇಕಾದದ್ದನ್ನು, ಇವತ್ತಿನಿಂದ ಗ್ಯಾಸ್ ಬೆಲೆ ಕೇವಲ 500? -ಹೀಗೆ ಪ್ರಶ್ನಾರ್ಥಕ ಚಿಹ್ನೆ ಹಾಕಿ ಸುದ್ದಿ ಪ್ರಕಟಿಸಲಾಗಿದೆ. ಈ ಸುದ್ದಿಯಲ್ಲಿ ಸುಳ್ಳು ಮಾಹಿತಿ, ಓದುಗರನ್ನು ದಾರಿ ತಪ್ಪಿಸುವಂಥ ಯತ್ನ, ಅಪೂರ್ಣ ವಿವರ ಎಲ್ಲವೂ ಇದೆ.