ಹೈದರಾಬಾದ್: “ಎಲ್ಲಾ ವಾಹನಗಳಿಗೆ ಹೊಸ ರೂಲ್ಸ್ // ಈ ಕೆಲಸ ಕಡ್ಡಾಯ.! ಇಲ್ಲ ಅಂದ್ರೆ 1000 ದಂಡ! ಬೈಕ್ ಕಾರು ಟ್ಯಾಕ್ಸಿ!” - ಹೀಗೊಂದು ಶೀರ್ಷಿಕೆ ನೀಡಿ, ವಿಡಿಯೋ ಮಾಡಲಾಗಿದೆ. ಈ ಬಗ್ಗೆ ನ್ಯೂಸ್ ಮೀಟರ್ ನಿಂದ ಫ್ಯಾಕ್ಟ್ ಚೆಕ್ ಮಾಡಿದ್ದು, ಈ ಬಗ್ಗೆ ಇರುವ ಮಾಹಿತಿ ತಪ್ಪಿನಿಂದ ಕೂಡಿದೆ ಎಂಬುದು ಕಂಡುಬಂದಿದೆ.
ಈ ವಿಡಿಯೋದಲ್ಲಿ ಇರುವ ಸುದ್ದಿ ನೋಡಲು ಇಲ್ಲಿ ಕ್ಲಿಕ್ ಮಾಡಿ.
Fact Check
2019ನೇ ಇಸವಿಗಿಂತ ಮುಂಚೆ ನೋಂದಣಿ ಮಾಡಿರುವ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ನವೆಂಬರ್ ಹದಿನೇಳನೇ ತಾರೀಕಿಗೆ ಮುಂಚೆ ಅಳವಡಿಸಿಕೊಳ್ಳಬೇಕು. ಆ ನಂತರ ಐನೂರರಿಂದ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಇದು ಕರ್ನಾಟಕಕ್ಕೆ ಮಾತ್ರ ಅನ್ವಯಿಸುವಂತೆ ಸುದ್ದಿ ಆಗಿದ್ದು, ಈ ಬಗ್ಗೆ ‘ದ ಹಿಂದೂ’ ವೆಬ್ ಸೈಟ್ ನಲ್ಲಿ ಆಗಸ್ಟ್ ಇಪ್ಪತ್ನಾಲ್ಕನೇ ತಾರೀಕು ವರದಿ ಆಗಿದೆ. 2019ನೇ ಇಸವಿ ಏಪ್ರಿಲ್ ಒಂದನೇ ತಾರೀಕಿಗೂ ಮುಂಚೆ ಕರ್ನಾಟಕದಲ್ಲಿ ಎರಡು ಕೋಟಿಯಷ್ಟು ವಾಹನಗಳು ನೋಂದಣಿ ಆಗಿದೆ ಎಂದು ಅದೇ ವರದಿಯಲ್ಲಿ ಇದೆ.
ಇದೇ ವರ್ಷದ ಫೆಬ್ರವರಿ ಹದಿನಾರನೇ ತಾರೀಕಿನಂದು ದ ಎಕನಾಮಿಕ್ ಟೈಮ್ಸ್ ವರದಿ ಮಾಡಿದ್ದು, ಅದರಲ್ಲಿರುವಂತೆ, ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಇಲ್ಲದ- ನೋಯ್ಡಾದಲ್ಲಿ ನೋಂದಣಿಯಾದ ವಾಹನಗಳಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸುವ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿರುವ ಬಗ್ಗೆ ವರದಿ ಆಗಿದೆ.
ಇದೇ ವರ್ಷದ ಜುಲೈ ಹದಿನೈದರಂದು ಟೈಮ್ಸ್ ಆಫ್ ಇಂಡಿಯಾ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಕಟ ಆಗಿದ್ದು, ರಸ್ತೆ ಸಾರಿಗೆ ಸಚಿವಾಲಯವು ನೀಡಿರುವ ಹೇಳಿಕೆ ಬಗ್ಗೆ ವರದಿ ಆಗಿದೆ. ಅದರಲ್ಲಿ ಇರುವಂತೆ, ದೆಹಲಿ, ಉತ್ತರಪ್ರದೇಶ ಮತ್ತು ಹರ್ಯಾಣದಂಥ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಗಳ ಮಾರಾಟಗಾರರನ್ನು ಅಂತಿಮಗೊಳಿಸಬೇಕಿದೆ. ಆದ್ದರಿಂದ ಅಲ್ಲಿಯ ತನಕ ವಾಹನ ಮಾಲೀಕರಿಗೆ ದಂಡ ವಿಧಿಸುವುದು ಬೇಡ ಎಂದು ಕಾನೂನು ಜಾರಿ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ರಸ್ತೆ ಸಾರಿಗೆ ಸಚಿವಾಲಯ ಸೂಚನೆಯನ್ನು ನೀಡಿದೆ.
Conclusion
ದೇಶದ ಎಲ್ಲ ವಾಹನ ಸವಾರರಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಜಾರಿ ಕಡ್ಡಾಯ ಮಾಡಲಾಗಿದೆ ಎಂಬುದು ಸರಿಯಾದ ಮಾಹಿತಿ ಇಲ್ಲ. ಇನ್ನು ದಂಡ ಶುಲ್ಕವು ಒಂದೇ ರೀತಿಯಲ್ಲಿ ಇರುತ್ತದೆ ಎಂಬುದು ಸಹ ಸರಿಯಲ್ಲ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿ ಮಾತ್ರ ಈಚೆಗೆ ಘೋಷಣೆ ಮಾಡಲಾಗಿದೆ.