ಹೈದರಾಬಾದ್: 2024 ರ ಚುನಾವಣೆಗೆ ಭರ್ಜರಿ ಆಫರ್ ಕೊಟ್ಟ ಮೋದಿಜಿ, ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ- ಹೀಗೊಂದು ಹೆಡ್ಡಿಂಗ್ ನೀಡಿರುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ಸುದ್ದಿಗೆ ಸಂಬಂಧಿಸಿದ ಫೋಟೋದಲ್ಲಿ 30,000/- Rs ಎಂದು ತೋರಿಸಲಾಗಿದೆ. ಮೇಲ್ನೋಟಕ್ಕೆ ಚಿನ್ನದ ಬೆಲೆ ಹತ್ತು ಗ್ರಾಮ್ ಗೆ ಭಾರೀ ಕಡಿಮೆ ಆಗಿರಬಹುದು ಎನಿಸುವಂತೆ ಸುದ್ದಿ ಮಾಡಲಾಗಿದ್ದು, ಇದು ಸುಳ್ಳು ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.
ಈ ಸುದ್ದಿಯನ್ನು ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ.
Factcheck
ಈ ಸುದ್ದಿಗೆ ನೀಡಿರುವ ಶೀರ್ಷಿಕೆ ಹಾಗೂ ಫೋಟೋದ ಮೇಲ್ಭಾಗ ಕೊಟ್ಟಿರುವ ಮಾಹಿತಿಯ ರೀತಿಯ ಅಂಕಿ- ಅಂಶ ದಿಕ್ಕು ತಪ್ಪಿಸುವಂಥದ್ದಾಗಿದೆ. “ಅಂತೂ ಇಂತೂ ಚಿನ್ನ ಪ್ರಿಯರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಕಳೆದ ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಶುಕ್ರವಾರವೂ ಅಲ್ಪ ಇಳಿಕೆ ಕಂಡಿದೆ. ಹೌದು 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಇಳಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 70 ರೂಪಾಯಿ, 560 ರೂಪಾಯಿ ಮತ್ತು 700 ರೂಪಾಯಿ ಕುಸಿತ ಕಂಡಿದೆ.” - ಹೀಗೆ ಮಾಹಿತಿ ಇದೆ.
ಗುಡ್ ರಿಟರ್ನ್ಸ್ ಎಂಬ ವೆಬ್ ಸೈಟ್ ನಲ್ಲಿ ನಿತ್ಯವೂ ಚಿನ್ನ- ಬೆಳ್ಳಿ ದರವನ್ನು ಅಪ್ ಡೇಟ್ ಮಾಡಲಾಗುತ್ತದೆ. ಅದರಲ್ಲಿ ಇರುವ ಮಾಹಿತಿಯಂತೆ, ಜೂನ್ 23, 2023ರಂದು 22 ಕ್ಯಾರೆಟ್ ಚಿನ್ನದ ದರ 400 ರೂಪಾಯಿ ಕಡಿಮೆ ಆಗಿದ್ದರೆ, 24 ಕ್ಯಾರೆಟ್ ಚಿನ್ನ ಬೆಲೆ 430 ರೂಪಾಯಿ ಕಡಿಮೆ ಆಗಿದೆ. ಇದು ಹತ್ತು ಗ್ರಾಮ್ ಚಿನ್ನಕ್ಕೆ ಇಳಿಕೆ ಆಗಿರುವುದು. ಸುದ್ದಿಯಲ್ಲಿ ತಿಳಿಸಿರುವಂತೆ 700 ರೂಪಾಯಿ ಇಳಿಕೆ ಆಗಿಲ್ಲ. ಒಂದು ವೇಳೆ ಅದರ ಒಂದು ವಾರದ ಹಿಂದಿನ ಶುಕ್ರವಾರ, ಅಂದರೆ ಜೂನ್ 16ನೇ ತಾರೀಕಿನದ್ದು ಏನಾದರೂ ಮಾಹಿತಿ ಪ್ರಕಟಿಸಿರಬಹುದಾ ಅಂತ ನೋಡಿದರೆ, ಆಗ 22 ಕ್ಯಾರೆಟ್ ಚಿನ್ನದ ಬೆಲೆ 400 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನ ಬೆಲೆ 440 ರೂಪಾಯಿ ಹತ್ತು ಗ್ರಾಮ್ ಗೆ ಏರಿಕೆ ಆಗಿದೆ.
ಇನ್ನು ಸುದ್ದಿಯ ಫೋಟೋದಲ್ಲಿ 30,000 ರೂಪಾಯಿ ಎಂದಿದೆ. ಜೂನ್ 25ನೇ ತಾರೀಕಿನಂದು 22 ಕ್ಯಾರೆಟ್ ಚಿನ್ನ ಒಂದು ಗ್ರಾಮ್ ಗೆ 5425 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಮ್ ಗೆ 5918 ರೂಪಾಯಿ ಇದೆ. ಹೀಗಿರುವಾಗ 30,000 ರೂಪಾಯಿ ಎನ್ನುವುದು ಎಷ್ಟು ಗ್ರಾಮ್ ಗೆ ಎಂಬುದರ ಪ್ರಸ್ತಾವ ಇಲ್ಲ. ಆದರೆ ಸಾಮಾನ್ಯವಾಗಿ ಹತ್ತು ಗ್ರಾಮ್ ಚಿನ್ನ ಎಂದು ಜನರ ಲೆಕ್ಕಾಚಾರ ಇರುತ್ತದ್ದಾದರಿಂದ 30,000 ರೂಪಾಯಿ ಎಂಬ ಮೊತ್ತ ಎಲ್ಲೂ ತಾಳೆ ಆಗಲ್ಲ.
Conclusion
ಕೇಂದ್ರ ಸರ್ಕಾರ ಚಿನ್ನದ ಮಾರಾಟದ ಮೇಲಿನ ಜಿಎಸ್ ಟಿ ಇಳಿಸಬಹುದು, ಇನ್ನು ಚಿನ್ನವನ್ನು ಆಮದು ಮಾಡಿಕೊಳ್ಳುವ ಸುಂಕವನ್ನು ಕಡಿಮೆ ಮಾಡಬಹುದು. ಹೀಗೆ ಮಾಡುವುದರಿಂದ ದೇಶೀ ಗ್ರಾಹಕರಿಗೆ ಚಿನ್ನದ ಬೆಲೆ ಕಡಿಮೆ ಆಗುತ್ತದೆ. ಆದರೆ ಇಂಥದ್ದು ಯಾವುದನ್ನೂ ಕೇಂದ್ರ ಸರ್ಕಾರ ಸದ್ಯದಲ್ಲೆಲ್ಲೂ ಮಾಡಿಲ್ಲ. ಆದ್ದರಿಂದ ಬೆಲೆ ಕಡಿಮೆಯೂ ಆಗಿಲ್ಲ, ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ 2024ರ ಚುನಾವಣೆಗೆ ಭರ್ಜರಿ ಆಫರ್ ಅಂತಲೂ ಇಲ್ಲ. ಈ ಸುದ್ದಿ ಸುಳ್ಳು, ಜನರ ದಾರಿ ತಪ್ಪಿಸುವಂಥದ್ದು.