ಹೈದರಾಬಾದ್: ರಾತ್ರೋರಾತ್ರಿ ಪೆಟ್ರೋಲ್ ಡೀಸೆಲ್ ಬೆಲೆ ಪಾತಾಳಕ್ಕೆ ಕುಸಿತ ವಾಹನ ಸವಾರರಿಗೆ ಗುಡ್ ನ್ಯೂಸ್!! ಎಂಬ ಶೀರ್ಷಿಕೆ ಹಾಗೂ ಪೆಟ್ರೋಲ್- ಡೀಸೆಲ್ ಪಾತಾಳಕ್ಕೆ…? ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್! ಜತೆಗೆ 31-5-2023 Ltr 76 ಎಂಬ ಥಮ್ ನೇಲ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇರುವಂತೆ ಕರ್ನಾಟಕ ಸರ್ಕಾರದಿಂದ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಯಾವುದೇ ಕಡಿಮೆ ಆಗಿಲ್ಲ, ಈ ವಿಡಿಯೋದಲ್ಲಿ ಇರುವಂಥ ಮಾಹಿತಿ ಸುಳ್ಳು ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.
FACTCHECK
ಈ ವಿಡಿಯೋದಲ್ಲಿ ಇರುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಅನ್ನು ಮಂಡನೆ ಮಾಡಿಲ್ಲ. ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದು ಮೇ 20ನೇ ತಾರೀಕು. ಇನ್ನೂ ನೂತನ ಸರ್ಕಾರ ಬಜೆಟ್ ಮಂಡನೆ ಮಾಡಿಲ್ಲ. ಆದರೆ ವಿಡಿಯೋದಲ್ಲಿ ಬಜೆಟ್ ಮಂಡಿಸಿದ್ದಾರೆ ಎಂದಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬ್ಯಾರಲ್ ಗೆ 75 ರೂಪಾಯಿ ಹಾಗೂ ಡಬ್ಲ್ಯುಟಿಸಿ ಬ್ಯಾರಲ್ ಗೆ 71 ರೂಪಾಯಿ ಎಂದು ಹೇಳಲಾಗಿದೆ.
ವಾಸ್ತವವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯನ್ನು ಅಮೆರಿಕನ್ ಡಾಲರ್ ಗಳಲ್ಲಿ ನಿಗದಿ ಮಾಡಲಾಗುತ್ತದೆ. ಜೂನ್ ಒಂದನೇ ತಾರೀಕಿಗೆ ರಾತ್ರಿ ಹನ್ನೊಂದು ಗಂಟೆ ಹೊತ್ತಿಗೆ ಬ್ರೆಂಟ್ ಕಚ್ಚಾ ತೈಲ ಬ್ಯಾರಲ್ ಗೆ 72.73 ಅಮೆರಿಕನ್ ಡಾಲರ್ ಇದ್ದರೆ, ಡಬ್ಲ್ಯುಟಿಐ ಕಚ್ಚಾ ತೈಲ ಬ್ಯಾರಲ್ ಗೆ 68.61 ಅಮೆರಿಕನ್ ಡಾಲರ್ ಇತ್ತು. ಅಂದಹಾಗೆ ಒಂದು ಬ್ಯಾರೆಲ್ ಗೆ ಎಷ್ಟು ಲೀಟರ್ ಗೊತ್ತಾ? 158.98 ಲೀಟರ್. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಒಂದು ಬ್ಯಾರೆಲ್ ಗೆ ಎಪ್ಪತ್ತೈದು ರೂಪಾಯಿಗೆ ಅಂತ ಮಾರಾಟ ಆದಲ್ಲಿ ಪ್ರತಿ ಲೀಟರ್ ಗೆ ಐವತ್ತು ಪೈಸೆ ಆದಂತಾಗುತ್ತದೆ. ಆದ್ದರಿಂದ ಈ ಮಾಹಿತಿಯೂ ಸುಳ್ಳು.
ವಿಡಿಯೋದ ಮತ್ತೊಂದು ಭಾಗದಲ್ಲಿ ಪೆಟ್ರೋಲ್ ಬೆಲೆಯನ್ನು ಸರ್ಕಾರವು ಲೀಟರ್ ಗೆ 6ರಿಂದ 9 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 5ರಿಂದ 8 ರೂಪಾಯಿ ಇಳಿಸುವ ಎಲ್ಲ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೀಗೆ ರಾಜ್ಯ ಸರ್ಕಾರದಿಂದ ಎಲ್ಲಿಯೂ ಹೇಳಿಲ್ಲ. ಅಂಥ ಯಾವ ಸಾಧ್ಯತೆಯೂ ಇಲ್ಲ.
ಮೇ 31ಕ್ಕೆ ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 102.71 ರೂಪಾಯಿ ಇದ್ದು, ಹಿಂದಿನ ದಿನಕ್ಕಿಂತ 0.32 ಪೈಸೆ ಹೆಚ್ಚಾಗಿದೆ ಎಂಬುದು ಎನ್ ಡಿಟಿವಿಯಲ್ಲಿನ ದರದ ಮಾಹಿತಿಯಿಂದ ತಿಳಿದುಬರುತ್ತದೆ. ಆದ್ದರಿಂದ ಮೇ 31ಕ್ಕೆ ಪೆಟ್ರೋಲ್ ಬೆಲೆ ಲೀಟರ್ ಗೆ 76 ಎಂಬ ಮಾಹಿತಿಯೂ ಸುಳ್ಳು.
CONCLUSION
ರಾಜ್ಯ ಸರ್ಕಾರದ ಯಾವುದೇ ಅಧಿಸೂಚನೆಯನ್ನು ಹೊರಡಿಸಿಲ್ಲ. ಇನ್ನು ಪ್ರತಿ ನಿತ್ಯ ಬೆಳಗ್ಗೆ ಆರು ಗಂಟೆಗೆ ದೇಶಾದ್ಯಂತ ತೈಲ ಮಾರ್ಕೆಟಿಂಗ್ ಕಂಪನಿಗಳು ಪೆಟ್ರೋಲ್- ಡೀಸೆಲ್ ಬೆಲೆಯ ಪರಿಷ್ಕರಣೆ ಮಾಡುತ್ತವೆ. ಅದರಲ್ಲಿಯೂ ದರ ಕಡಿಮೆ ಆಗಿಲ್ಲ. ಆದ್ದರಿಂದ ವಿಡಿಯೋ ಮೂಲಕ ಹರಿದಾಡುತ್ತಿರುವ ಸುದ್ದಿ ಸುಳ್ಳು.