ಫ್ರೀಜರ್‌ನಲ್ಲಿ ಬೆತ್ತಲೆಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಆಘಾತಕಾರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅಸ್ಸಾಂನಲ್ಲಿ ಮುಸ್ಲಿಂ ಹುಡುಗನೊಂದಿಗೆ ಸಂಬಂಧ ಹೊಂದಿದ್ದ ಈ ಮಹಿಳೆಯನ್ನು ಆತನ ಜೊತೆ ಸೇರಿಯೇ ಏಳು ಮುಸ್ಲಿಂ ಸಹಚರರು ಎಂಟು ದಿನಗಳ ಕಾಲ ಅತ್ಯಾಚಾರ ಮಾಡಿದ್ದಾರೆ ನಂತರ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿರುವ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
ಜುಲೈ 20, 2024 ರಂದು ರವಿ ಪ್ರತಾಪ್ ಸಿಂಗ್ ಎಂಬ ಫೇಸ್ಬುಕ್ ಖಾತೆಯಿಂದ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ''ಬ್ರೇಕಿಂಗ್ ನ್ಯೂಸ್- ಅಸ್ಸಾಂನಲ್ಲಿ ನಡೆದ ಮತ್ತೊಂದು ಶ್ರದ್ಧಾ ರೀತಿಯ ಹತ್ಯೆ. ಈ ಮಹಿಳೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿದ್ದಳು. ಇದೀಗ ಶಮ್ಮಿ ಅಲಿಯಾಸ್ ಶಬೀರ್ ಮಿಯಾನ್ ಇವಳನ್ನು 7 ಮುಸ್ಲಿಂ ಹುಡುಗರ ಜೊತೆ ಅತ್ಯಾಚಾರ ಮಾಡಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವಳನ್ನು ಫ್ರೀಜರ್‌ನಲ್ಲಿ ಜೀವಂತವಾಗಿ ಪ್ಯಾಕ್ ಮಾಡಿದ್ದಾರೆ. ನಂತರ ಸಾವನ್ನಪ್ಪಿದ್ದಾಳೆ. ಗಫಾರ್ ಮಿಯಾನ್ ಮತ್ತು ಅವನ ಸಹಚರರು ಪ್ರತಿದಿನ 8 ದಿನಗಳ ಕಾಲ ಫ್ರೀಜರ್ನಿಂದ ಈ ಹುಡುಗಿಯ ಶವವನ್ನು ಹೊರತೆಗೆದು ಅತ್ಯಾಚಾರವೆಸಗಿ ಬೆಂಕಿ ಹಚ್ಚಿ, ನಂತರ ಮತ್ತೆ ಫ್ರಿಡ್ಜ್‌ನಲ್ಲಿ ಪ್ಯಾಕ್ ಮಾಡಿದ್ದಾರೆ. ಹಿಂದೂ ಹುಡುಗಿಯರೇ ಎಚ್ಚರ,'' ಎಂದು ರವಿ ಪ್ರತಾಪ್ ಸಿಂಗ್ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದು ಫೋಟೋ ಹಂಚಿಕೊಂಡಿದ್ದಾರೆ. Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಈ ವೈರಲ್ ಫೋಟೋದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಅಸ್ಸಾಂನಲ್ಲಿ ಇಂತಹ ಯಾವುದೇ ಘಟನೆ ನಡೆದ ಬಗ್ಗೆ ವರದಿಯಾಗಿದೆಯೇ ಎಂದು ನೋಡಲು ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಆದರೆ, ಈ ಕುರಿತು ಯಾವುದೇ ಸುದ್ದಿ, ವರದಿಗಳು ಕಂಡುಬಂದಿಲ್ಲ.
ನಂತರ ನಾವು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಆಗ 2010 ರ ಬ್ಲಾಗ್ ಪೋಸ್ಟ್‌ನಲ್ಲಿ ಈ ಫೋಟೋವನ್ನು ಕಂಡುಕೊಂಡಿದ್ದೇವೆ. ಈ ಬ್ಲಾಗ್ನಲ್ಲಿ ಘಟನೆಯ ಸ್ಥಳ ಮತ್ತು ದಿನಾಂಕವನ್ನು ಉಲ್ಲೇಖಿಸಿಲ್ಲ. ಸದ್ಯ ವೈರಲ್ ಆಗುತ್ತಿರುವ ಫೋಟೋಗಳನ್ನು ಹೊಂದಿರುವ ಪೋರ್ಚುಗೀಸ್ ಬ್ಲಾಗ್ ಪ್ರಕಾರ, ''45 ವರ್ಷದ ವ್ಯಕ್ತಿ ತನ್ನ ಹೆಂಡತಿಯನ್ನು ಕೊಂದು ಶವವನ್ನು ಬ್ರೆಜಿಲ್‌ನ ಗ್ರೇಟರ್ ಸಾವೊ ಪಾಲೊ ಪ್ರದೇಶದ ಒಸಾಸ್ಕೋದಲ್ಲಿರುವ ತನ್ನ ಮನೆಯ ಫ್ರೀಜರ್‌ನಲ್ಲಿ ಇರಿಸಿದ್ದಾನೆ,'' ಎಂದು ಬರೆಯಲಾಗಿದೆ.
ಹಾಗೆಯೆ ಅಸ್ಸಾಂನ ಡಿಜಿಪಿ ಜಿಪಿ ಸಿಂಗ್ ಅವರು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಿಂಗ್ ಅವರು ಇಂದು (22 ಜುಲೈ 2024) ತಮ್ಮ ಎಕ್ಸ್ ಖಾತೆಯಲ್ಲಿ 2022 ರಲ್ಲಿ ಅಸ್ಸಾಂ ಪೊಲೀಸರು ಹಂಚಿಕೊಂಡ ಟ್ವೀಟ್ ಅನ್ನು ಮೆನ್ಶನ್ ಮಾಡಿ, ''ಕೆಲವರು ಅಸ್ಸಾಂ ಬಗ್ಗೆ ಕೆಟ್ಟ ಸುದ್ದಿಯನ್ನು ಹರಿಬಿಡುತ್ತಿದ್ದಾರೆ, ಅದು ಸುಳ್ಳು. ಅಸ್ಸಾಂ ಪೊಲೀಸರು 2022 ರಲ್ಲೇ ಈ ಬಗ್ಗೆ ಹೇಳಿದ್ದರು,'' ಎಂದು ಬರೆದುಕೊಂಡಿದ್ದಾರೆ. ಪೋರ್ಚುಗೀಸ್ ಬ್ಲಾಗ್‌ನಲ್ಲಿ ಪ್ರಕಟವಾದ ಈ ಘಟನೆಯ ವರ್ಷ ಮತ್ತು ಸ್ಥಳವನ್ನು ನ್ಯೂಸ್‌ಮೀಟರ್ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಚಿತ್ರಗಳು ಕನಿಷ್ಠ 2010 ರಿಂದ ಇಂಟರ್ನೆಟ್‌ನಲ್ಲಿವೆ ಎಂದು ನಾವು ಕಂಡುಕೊಂಡಿದ್ದೇವೆ. ಅಲ್ಲದೆ, ಅಸ್ಸಾಂ ಪೊಲೀಸರ ಪ್ರಕಾರ, ಈ ಘಟನೆಯು ಅಸ್ಸಾಂನಲ್ಲಿ ನಡೆದಿಲ್ಲ. ಹೀಗಾಗಿ ವೈರಲ್ ಆಗುತ್ತಿರುವ ಫೋಟೋ ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ.