ಹೈದರಾಬಾದ್: “ನಾನು ಮೊನ್ನೆ ಹೋಗ್ತೀನಿ, ನನ್ನ ತಾಯಿ ಹೇಳ್ತಾರೆ, ನನ್ನ ಅಕೌಂಟ್ ನಲ್ಲಿ ಒಂದು ಲಕ್ಷ ಇದೆ. ಅದು ಹೇಗಮ್ಮ ಅಂತ ಕೇಳಿದೆ. ನನಗೆ ಗೊತ್ತಿಲ್ಲ, ಸರ್ಕಾರದಿಂದ ಬಂದಿದೆ. ಹೀಗೆ ಇವತ್ತು ಪ್ರತಿಯೊಬ್ಬ ರೈತನ ಅಕೌಂಟಿಗೆ ಒಂದು ಲಕ್ಷ, ಎರಡು ಲಕ್ಷ, ಮೂರು ಲಕ್ಷ ರೂಪಾಯಿ ಬಂದಿದೆ. ಯಾರೂ ಅರ್ಜಿ ಹಾಕದೆ ನೇರವಾಗಿ ಬಂದಿದ್ದರೆ ಅದು ನರೇಂದ್ರ ಮೋದಿ (Narendra Modi) ಸರ್ಕಾರದ ಕೊಡುಗೆ, ನರೇಂದ್ರ ಮೋದಿ ಸರ್ಕಾರದ ಕೊಡುಗೆ” - ಇದು ಕರ್ನಾಟಕ ರಾಜ್ಯ ಬಿಜೆಪಿ (Karnataka BJP) ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿರುವಂಥ ವಿಡಿಯೋ ತುಣುಕು. ವಾರ್ತಾಭಾರತಿ ಲೋಗೋವನ್ನು ಹೊಂದಿರುವ ಆ ವಿಡಿಯೋ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಅದು ವೈರಲ್ ಆಗಿದೆ. ಅವರು ನೀಡಿರುವ ಹೇಳಿಕೆ ಸುಳ್ಳಿನ ಮಾಹಿತಿಯಿಂದ ಕೂಡಿದೆ ಎಂಬುದು “ನ್ಯೂಸ್ ಮೀಟರ್” ವೆಬ್ ಸೈಟ್ ನ ಫ್ಯಾಕ್ಟ್ ಚೆಕ್ ನಲ್ಲಿ ತಿಳಿದುಬಂದಿದೆ.
Fact Check
ಕೇಂದ್ರ ಸರ್ಕಾರದ ಪ್ರಮುಖ ಕೃಷಿ ಯೋಜನೆಗಳ ಪಟ್ಟಿ ಹೀಗಿದೆ: 1. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY), 2. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY), 3. ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ (NMSA), 4. ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY), 5. ಕಿಸಾನ್ ಕ್ರೆಡಿಟ್ ಕಾರ್ಡ್ (KCC), 6. ಇ-ನ್ಯಾಮ್, 7. ಕಿರು ನೀರಾವರಿ ನಿಧಿ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, 9. ಪ್ರಧಾನ ಮಂತ್ರಿ ಕಿಸಾನ್ ಮಾನ್-ಧನ್ ಯೋಜನೆ (PM-KMY), 10. ಗ್ರಾಮೀಣ ಭಂಡಾರನ್ ಯೋಜನೆ. ಇವುಗಳು ಮಾತ್ರವಲ್ಲದೆ ಬಡ್ಡಿಯಲ್ಲಿ ವಿನಾಯಿತಿ, ಪ್ರೋತ್ಸಾಹ ಧನವಾಗಿ ರೈತರಿಗೆ ನೀಡಲಾಗುತ್ತದೆ.
ಇವುಗಳಲ್ಲಿ ಭಾರತದಲ್ಲೇ ಅತಿ ಹೆಚ್ಚಿನ ಪ್ರಮಾಣದ ರೈತರಿಗೆ ನೇರವಾಗಿ ಹಣ ತಲುಪಿಸುವ ಯೋಜನೆ ಅಂದರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಅದರ ಮೂಲಕ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಎರಡು ಸಾವಿರ ರೂಪಾಯಿಯಂತೆ, ವರ್ಷಕ್ಕೆ ಆರು ಸಾವಿರ ರೂಪಾಯಿ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುತ್ತದೆ.
ಆದರೆ, ನಳಿನ್ ಕುಮಾರ್ ಕಟೀಲ್ ಅವರು ಹೇಳಿದಂತೆ ಅರ್ಜಿಯನ್ನೇ ಹಾಕಿಕೊಳ್ಳದೆ ಹಣ ಜಮೆ ಆಗುವಂಥದ್ದು ಇದಲ್ಲ. ಜತೆಗೆ ಪ್ರತಿ ರೈತನ ಖಾತೆಗೆ ಎಂದು ಅವರು ಹೇಳಿದ್ದಾರೆ. ಹಾಗೆ ಒಂದು ಲಕ್ಷ, ಎರಡು ಲಕ್ಷ, ಮೂರು ಲಕ್ಷ ರೂಪಾಯಿ ಪ್ರತಿ ರೈತನ ಖಾತೆಗೆ, ಅರ್ಜಿಯನ್ನೇ ಹಾಕಿಕೊಳ್ಳದೆ ಮೊತ್ತ ವರ್ಗಾವಣೆ ಆಗುವಂಥ ಯೋಜನೆ ಯಾವುದೂ ಇಲ್ಲ.
Shramika Siri President/ Farmer JC Soma Shekhar
ಈ ಬಗ್ಗೆ ತುಮಕೂರು ಜಿಲ್ಲೆಯ ತೋವಿನಕೆರೆಯ ರೈತರು- ಶ್ರಮಿಕ ಸಿರಿ ಸಂಘದ ಅಧ್ಯಕ್ಷರಾದ ಜೆ.ಸಿ.ಸೋಮಶೇಖರ್ ‘ನ್ಯೂಸ್ ಮೀಟರ್’ ಜತೆಗೆ ಮಾತನಾಡಿ, “ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ರೈತರ ಖಾತೆಗಳಿಗೆ ಹಣ ಬರುವುದು ಹೌದು. ಆದರೆ ಅದು ಪ್ರತಿ ರೈತರ ಖಾತೆಗೆ ಒಂದು, ಎರಡು, ಮೂರು ಲಕ್ಷ ಅಂತೇನೂ ಬರುವುದಿಲ್ಲ, ಬಂದಿಲ್ಲ. ಇನ್ನು ಅರ್ಜಿಯೇ ಹಾಕಿಕೊಳ್ಳದೆ ರೈತರ ಖಾತೆಗೆ ಹಣ ಬರುವುದಕ್ಕೆ ಅದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
Karnataka State BJP President Nalin Kumar Katil
Conclusion
ಕರ್ನಾಟಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹೇಳಿದಂತೆ, ಪ್ರತಿ ರೈತರ ಖಾತೆಗೆ ಒಂದು, ಎರಡು, ಮೂರು ಲಕ್ಷ ರೂಪಾಯಿ ಬಂದಿರುವುದು ಸತ್ಯವಾದ ಮಾಹಿತಿ ಅಲ್ಲ. ಇನ್ನು ತಮ್ಮ ತಾಯಿ ಅವರ ಬ್ಯಾಂಕ್ ಖಾತೆಗೇ ಒಂದು ಲಕ್ಷ ರೂಪಾಯಿ ಬಂದಿದೆ ಎಂದು ಹೇಳಿದ್ದಾರೆ. ಆದರೆ ಅದು ಯಾವ ಯೋಜನೆ ಅಡಿಯಲ್ಲಿ ಎಂಬ ಮಾಹಿತಿಯನ್ನು ಅವರು ಹೇಳಿಲ್ಲ. ಆದ್ದರಿಂದ ನಳಿನ್ ಕುಮಾರ್ ಕಟೀಲ್ ಅವರ ಮಾತಿನಲ್ಲಿ ನಿಜ ಕಂಡುಬರುವುದಿಲ್ಲ. ಇನ್ನು ಈ ಬಗ್ಗೆ ಪ್ರತಿಕ್ರಿಯೆ- ವಿವರಣೆ ಕೇಳುವುದರ ಸಲುವಾಗಿ ಕಟೀಲ್ ಅವರಿಗೆ ಕರೆ ಮಾಡಲಾಯಿತು. ಆದರೆ ಕರೆಯನ್ನು ಸ್ವೀಕರಿಸಲಿಲ್ಲ.