ಹೈದರಾಬಾದ್: ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕವಾಗಿ ಬಿಜೆಪಿಯ ಚುನಾವಣೆ ಪ್ರಚಾರದ ವೇಳೆ ನಡೆದ ಘಟನೆ ಎಂದು ಟ್ವೀಟ್ ಒಂದನ್ನು ಮಾಡಿದೆ. ಅದರ ಒಕ್ಕಣೆ ಹೀಗಿದೆ: ಖಾಲಿ ಕುರ್ಚಿಗಳ ಸಮಾವೇಶ ನಡೆಸುತ್ತಿದ್ದ ಬಿಜೆಪಿಗೆ ಜನಾಕ್ರೋಶ ದರ್ಶನ ಮುಂದುವರೆದಿದೆ. ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶ ಹುಟ್ಟುವಂತಾಗಿದೆ. ವಾಹನಕ್ಕೆ ಬಿದ್ದ ಒಂದೊಂದು ಕಲ್ಲೆಟುಗಳೂ @BJP4Karnatakaಯ ಬೆಲೆ ಏರಿಕೆ, ಭ್ರಷ್ಟಾಚಾರ, ವಂಚನೆ, ದುರಾಡಳಿತಕ್ಕೆ ಸಿಕ್ಕ ಉತ್ತರಗಳು. ಆದರೆ ಈ ಟ್ವೀಟ್ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ, ಇದು ತೆಲಂಗಾಣದಲ್ಲಿ ನಡೆದ ಘಟನೆ ಎಂಬುದು ನ್ಯೂಸ್ ಮೀಟರ್ ನಿಂದ ಮಾಡಲಾದ ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.
Factcheck
ಕರ್ನಾಟಕ ಕಾಂಗ್ರೆಸ್ ಮಾಡಿರುವ ಟ್ವೀಟ್ ಸದ್ಯ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯದ್ದಲ್ಲ. ಅಸಲಿಗೆ ಇದು ಕರ್ನಾಟಕದ್ದೇ ಅಲ್ಲ. ಈ ಘಟನೆ ಬಗ್ಗೆ ಎಎನ್ ಐ ಸುದ್ದಿ ಸಂಸ್ಥೆಯು ವರದಿ ಮಾಡಿದ್ದು, ನವೆಂಬರ್ 1,2022ರಂದು ವಿಡಿಯೋ ಟ್ವೀಟ್ ಮಾಡಲಾಗಿದೆ. ತೆಲಂಗಾಣದ ನಲಗೊಂಡದಲ್ಲಿನ ಮುನುಗೊಡೆ ಎಂಬಲ್ಲಿ ಉಪ ಚುನಾವಣೆ ಸಂದರ್ಭದಲ್ಲಿ ಟಿಆರ್ ಎಸ್ (ಈಗ ಬಿಆರ್ ಎಸ್) ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ನಡೆದ ಮಾರಾಮಾರಿಯ ವಿಡಿಯೋ ಇದು. ಆ ಟ್ವೀಟ್ ನ ಸ್ಕ್ರೀನ್ ಶಾಟ್ ಇಲ್ಲಿ ನೀಡಲಾಗಿದೆ.
ಹದಿನೈದನೇ ಸೆಕೆಂಡ್ ನಂತರದಲ್ಲಿ ಬಿಜೆಪಿಯ ವಾಹನದ ಮೇಲೆ ಕಲ್ಲು ತೂರುವುದು, ಅದಕ್ಕೆ ಜಖಂ ಮಾಡುವುದು ಕಂಡುಬರುತ್ತದೆ. ಆಗ ತೆಲಂಗಾಣ ರಾಷ್ಟ್ರ ಸಮಿತಿ ಹಾಗೂ ಈಗ ಭಾರತ್ ರಾಷ್ಟ್ರ ಸಮಿತಿ ಎನ್ನುವ ಈ ಪಕ್ಷದ ಸ್ಥಾಪಕರು ಕೆ ಚಂದ್ರಶೇಖರ್ ರಾವ್ (ಕೆಸಿಆರ್).
ಇನ್ನು ಇದೇ ವಿಡಿಯೋವನ್ನು ಜಿ. ಕಿಶನ್ ರೆಡ್ಡಿ ಎಂಬುವರು ಸಹ ಟ್ವೀಟ್ ಮಾಡಿದ್ದಾರೆ.
Conclusion
ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಿಂದ ಮಾಡಿರುವ ಪೋಸ್ಟ್ ಖಡಾಖಂಡಿತವಾಗಿಯೂ ಕರ್ನಾಟಕ ಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿದ್ದಲ್ಲ ಹಾಗೂ ಇದು ತೆಲಂಗಾಣದಲ್ಲಿ ನಡೆದ ಘಟನೆ ಆಗಿದ್ದು, ಟಿಆರ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ನಡೆದ ಮಾರಾಮಾರಿ ಆಗಿತ್ತು.