ಹೈದರಾಬಾದ್: “ ಎಲ್ಲ ರೈತರಿಗೂ ಗುಡ್ ನ್ಯೂಸ್, ಪ್ರತಿ ಹೆಕ್ಟೇರ್ ಗೆ 10,000 ಸಹಾಯಧನ.!” - ಹೀಗೊಂದು ಶೀರ್ಷಿಕೆ ಅಡಿಯಲ್ಲಿ ಸುದ್ದಿಯೊಂದು ವೈರಲ್ ಆಗಿದ್ದು, ಕರ್ನಾಟಕದಲ್ಲಿ ಎಲ್ಲ ರೈತರಿಗೂ ಈ ಸಹಾಯಧನ ದೊರೆಯಲಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಈ ಸುದ್ದಿ ತಪ್ಪು ಮಾಹಿತಿ ಹಾಗೂ ಓದುಗರನ್ನು ದಾರಿ ತಪ್ಪಿಸುವ ಶೀರ್ಷಿಕೆ ಹಾಗೂ ಉದ್ದೇಶವನ್ನು ಹೊಂದಿದೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.
ರಾಜ್ಯ ಸರ್ಕಾರ ರೈತರಿಗೆ ಮತ್ತೊಂದು ಭರವಸೆ ಸಿಕ್ಕಿದೆ. ರಾಜ್ಯದಲ್ಲಿ ಬೀದರ್, ಯಾದಗಿರಿ ವಿಜಯಪುರ ಮತ್ತು ಕಲ್ಬುರ್ಗಿ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ನಲ್ಲಿ ತೊಗರಿ ಬೆಳೆ ಬೆಳೆದ ರೈತರಿಗೆ ನೆಟೆರೋಗ ಬಾಧಿಸಿದೆ. ಇದರಿಂದ ತೀವ್ರ ಸಂಕಷ್ಟದಲ್ಲಿರುವ ರೈತರುಗಳಿಗೆ ಈಗ ಸರ್ಕಾರದ ಕಡೆಯಿಂದ ಪ್ರತಿ ಹೆಕ್ಟೇರಿಗೆ 10 ಸಾವಿರ ರೂ ಸಹಾಯಧನ ಸಿಗುವ ಭರವಸೆ ಸಿಕ್ಕಿದೆ. ಈ ಬಗ್ಗೆ ನೂತನ ಕೃಷಿ ಸಚಿವರಾಗಿರುವ ಚೆಲುವರಾಯಸ್ವಾಮಿ ಅವರೇ ಹೇಳಿಕೆ ಕೊಟ್ಟಿದ್ದಾರೆ. ಅರ್ಹ ರೈತರುಗಳು ಗ್ರಾಮ ಲೆಕ್ಕಾಧಿಕಾರಿಗಳಿಗೆ ರೈತರ ಆಧಾರ್ ಕಾರ್ಡ್, ಬ್ಯಾಂಕಿನ ಪಾಸ್ ಪುಸ್ತಕ ಮತ್ತು ಜಮೀನಿನ ಪಹಣಿ ಇತ್ಯಾದಿ ಮಾಹಿತಿಗಳ ಜೊತೆಗೆ ಅರ್ಜಿ ಕೂಡ ಸಲ್ಲಿಸಿ. ಈ ಯೋಜನೆಯ ಫಲಾನುಭವಿಗಳಾಗಬಹುದು ಎಂಬ ಮಾಹಿತಿಯನ್ನು ಈ ಸುದ್ದಿ ಒಳಗೊಂಡಿದೆ.
ಸುದ್ದಿಯನ್ನು ಸಂಪೂರ್ಣ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
FACTCHECK
ರಾಜ್ಯದ ಕೃಷಿ ಸಚಿವರಾಗಿರುವ ಎನ್. ಚಲುವರಾಯಸ್ವಾಮಿ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಮೇ 30ನೇ ತಾರೀಕಿನ ಮಂಗಳವಾರ ಮಾತನಾಡಿ, ಕಲಬುರಗಿ, ಬೀದರ್, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 2.43 ಲಕ್ಷ ಹೆಕ್ಟೇರ್ ತೊಗರಿ ಬೆಳೆ ನೆಟೆ ರೋಗದಿಂದ ಹಾಳಾಗಿ ರೈತರಿಗೆ ನಷ್ಟ ವುಂಟಾಗಿತ್ತು. ಆ ರೈತರಿಗೆ ಪ್ರತಿ ಹೆಕ್ಟೇರ್‌ಗೆ ತಲಾ 10 ಸಾವಿರ ರೂ. ಪರಿಹಾರ ನೀಡುವುದಾಗಿ ಹಿಂದಿನ ಸರ್ಕಾರ ಘೋಷಿಸಿತ್ತು. ಆದರೆ, ಪರಿಹಾರ ನೀಡಲು ಹಿಂದಿನ ಸರ್ಕಾರ ವಿಫಲವಾಗಿತ್ತು. ಈಗ ಪರಿಹಾರ ನೀಡುವ ಕಾರ್ಯವನ್ನು ಆರಂಭಿಸಲಾಗುವುದು. ಒಟ್ಟು 223 ಕೋಟಿ ರು. ಪರಿಹಾರ ನೀಡಬೇಕಿದ್ದು, ಶೀಘ್ರದಲ್ಲಿ ರೈತರ ಖಾತೆಗೆ ಪಾವತಿಸಲಾಗುವುದು ಎಂದು ಹೇಳಿದರು. - ಹೀಗೆ ‘ಸುವರ್ಣನ್ಯೂಸ್’ ವೆಬ್ ಸೈಟ್ ನಲ್ಲಿ ವರದಿ ಆಗಿದೆ. ಅದನ್ನು ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಇನ್ನು ಈ ಸುದ್ದಿಯಲ್ಲಿ ಇರುವಂತೆ ಎಲ್ಲ ರೈತರಿಗೂ ಅನ್ವಯ ಆಗುವಂಥದ್ದಲ್ಲ. ಮೊಟ್ಟಮೊದಲಿಗೆ ಇದು ಸಹಾಯಧನವೇ ಅಲ್ಲ; ಇದು ಬೆಳೆನಷ್ಟ ಪರಿಹಾರ. ತೊಗರಿ ಬೆಳೆ ನೆಟೆ ರೋಗದಿಂದ ನಷ್ಟ ಆದವರಿಗೆ ಪ್ರತಿ ಹೆಕ್ಟೇರ್ ಗೆ ತಲಾ ಹತ್ತು ಸಾವಿರ ನೀಡುವುದಾಗಿ ಘೋಷಿಸಿದ್ದ ಹಿಂದಿನ ಸರ್ಕಾರದಿಂದ ಅನುಷ್ಠಾನಕ್ಕೆ ಬರಲಿಲ್ಲ. ಅದನ್ನು ನಾವು ನೀಡುವುದಕ್ಕೆ ಆರಂಭಿತ್ತೇವೆ ಎಂದು ಕೃಷಿ ಸಚಿವರು ಹೇಳಿದ್ದಾರೆ. ಆದ್ದರಿಂದ ಇದೇನೂ ನೂತನ ಘೋಷಣೆಯೂ ಅಲ್ಲ. ಈ ಸಂಬಂಧ ಯಾವುದೇ ದಾಖಲೆಗಳ ಬಗ್ಗೆ ಸಚಿವರು ಪ್ರಸ್ತಾವವನ್ನೇ ಮಾಡಿಲ್ಲ. ಆದರೆ ಸುದ್ದಿಯಲ್ಲಿ ಈ ಮೂರು ದಾಖಲೆ ಕೊಡಿ ಎನ್ನಲಾಗಿದೆ. ಹೀಗೆ ಒಂದು ಸಾಲಿನ ಮಾಹಿತಿಯನ್ನು ಬಹುತೇಕ ತಪ್ಪಾಗಿ ತಲುಪಿಸಲು ಯತ್ನಿಸಲಾಗಿದೆ.
ಈ ಸುದ್ದಿಯ ಕೊನೆಯಲ್ಲಿ, ಅರ್ಜಿ ಸಲ್ಲಿಸಿ ಹಾಗೂ ಯೋಜನೆಯ ಫಲಾನುಭವಿಗಳಾಗಿ ಎನ್ನಲಾಗಿದೆ. ಅಸಲಿಗೆ ಇದು ಪರಿಹಾರವೇ ವಿನಾ ಸರ್ಕಾರದ ಯೋಜನೆಯೇ ಅಲ್ಲ.
CONCLUSION
ರಾಜ್ಯ ಸರ್ಕಾರ ಯಾವುದೇ ಹೊಸ ಯೋಜನೆ ತಂದರೂ ಆ ಸಂಬಂಧವಾಗಿ ಅರ್ಹತೆ, ಷರತ್ತು ಹಾಗೂ ಇತರ ಮಾಹಿತಿಗಳನ್ನು ಎಲ್ಲ ಮಾಧ್ಯಮಗಳ ಮೂಲಕವಾಗಿ ಜನರನ್ನು ತಲುಪಿಸುತ್ತದೆ. ಆದರೆ ಈ ಸುದ್ದಿಯಲ್ಲಿ ಬೆಳೆ ಪರಿಹಾರದ ಬಗ್ಗೆ ಕೃಷಿ ಸಚಿವರು ನೀಡಿದ ಮಾಹಿತಿಯನ್ನು ಯೋಜನೆ ಎಂದು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಜತೆಗೆ ಸುಳ್ಳು ಮಾಹಿತಿಯನ್ನು ನೀಡಲಾಗಿದೆ.