Fact Check: ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನ ಕಡ್ಡಾಯಗೊಳಿಸಲಾಗಿದೆಯೇ?: ವಿಡಿಯೋದ ನಿಜಾಂಶ ಇಲ್ಲಿದೆ

ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನವನ್ನು ಕಡ್ಡಾಯಗೊಳಿಸಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಖಾಸಗಿ ಶಾಲೆಯಲ್ಲಿ ಬಕ್ರೀದ್ ಆಚರಣೆಯ ದೃಶ್ಯಾವಳಿಗಳಾಗಿವೆ.

By Newsmeter Network  Published on  19 July 2024 6:34 PM IST
Fact Check: ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನ ಕಡ್ಡಾಯಗೊಳಿಸಲಾಗಿದೆಯೇ?: ವಿಡಿಯೋದ ನಿಜಾಂಶ ಇಲ್ಲಿದೆ
Claim: ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
Fact: ಇದು ಸುಳ್ಳು ಸುದ್ದಿಯಾಗಿದೆ. ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನವನ್ನು ಕಡ್ಡಾಯಗೊಳಿಸಿಲ್ಲ. ವೈರಲ್ ಆಗುತ್ತಿರುವುದು ಖಾಸಗಿ ಶಾಲೆಯಲ್ಲಿ ಬಕ್ರೀದ್ ಆಚರಣೆಯ ದೃಶ್ಯಾವಳಿಗಳಾಗಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ, ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಶಾಲೆಯಲ್ಲಿ ಖುರಾನ್ ಪಠಿಸುತ್ತಿರುವ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋದ ಆರಂಭದಲ್ಲಿ, ಎಲ್ಲಾ ಮಕ್ಕಳು ತಮ್ಮ ಕೈಗಳನ್ನು ಜೋಡಿಸಿ ನೆಲದ ಮೇಲೆ ಕುಳಿತು ಇಸ್ಲಾಮಿಕ್ ಶ್ಲೋಕಗಳನ್ನು ಗಟ್ಟಿಯಾಗಿ ಪಠಿಸುತ್ತಿರುವುದನ್ನು ಕಾಣಬಹುದು. ನಂತರ ಕೆಲವು ಮಕ್ಕಳು ವೇದಿಕೆಯಲ್ಲಿ ಕಿರುನಾಟಕ ಪ್ರದರ್ಶಿಸುತ್ತಿರುವುದು ಈ ವಿಡಿಯೋದಲ್ಲಿದೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದೆ. ಇದು ಆಧಾರ ರಹಿತವಾಗಿದ್ದು, ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನವನ್ನು ಕಡ್ಡಾಯಗೊಳಿಸಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಖಾಸಗಿ ಶಾಲೆಯಲ್ಲಿ ಬಕ್ರೀದ್ ಆಚರಣೆಯ ದೃಶ್ಯಾವಳಿಗಳಾಗಿವೆ.

ವೈರಲ್ ಆಗುತ್ತಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಡಿಯೋದ ಕೆಳಗೆ ವಾಟರ್‌ಮಾರ್ಕ್‌ನಲ್ಲಿ 'ಕರ್ನಾಟಕದಲ್ಲಿ ಬಕ್ರಿದ್' ಎಂದು ಬರೆಯಲಾಗಿದೆ. ಅಲ್ಲದೆ, ಕಿರುನಾಟಕದಲ್ಲಿ ವಿದ್ಯಾರ್ಥಿಯ ಪರಿಚಯ ಮತ್ತು ಪ್ರಸ್ತುತಿ ಎಲ್ಲವೂ ಬಕ್ರೀದ್ ಬಗ್ಗೆ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ವಿಡಿಯೋದಲ್ಲಿ ಕಂಡುಬರುವ ಬ್ಯಾಕ್ಗ್ರೌಂಡ್ ಕೂಡ ಬಕ್ರೀದ್ ಆಚರಣೆಗೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗಿದೆ. ಆದರೆ, ಹಿಂಭಾಗ ಜ್ಞಾನಸಾಗರ ಎಂದು ಬರೆಯಲಾಗಿತ್ತು.

ಇಂಟರ್‌ನೆಟ್‌ನಲ್ಲಿ ಈ ಬಗ್ಗೆ ಪರಿಶೀಲಿಸಿದಾಗ, ಜ್ಞಾನಸಾಗರ ಎಂಬುದು ಶಾಲೆಯ ಹೆಸರು ಎಂದು ತಿಳಿಯಿತು. ಜ್ಞಾನಸಾಗರ ಇದು ಕರ್ನಾಟಕದ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ದೃಶ್ಯವಾಗಿರಬಹುದು ಎಂಬ ಸುಳಿವು ಸಿಕ್ಕಿದೆ. ಶಾಲೆಯ ಹೆಸರು ಮತ್ತು ಘಟನೆಗೆ ಸಂಬಂಧಿಸಿದ ಹೆಚ್ಚಿನದನ್ನು ಪರಿಶೀಲಿಸಿದಾಗ ಈ ಬಗ್ಗೆ ಕೆಲ ವರದಿಗಳು ಸಿಕ್ಕವು.

ಟಿವಿ 9 ಕನ್ನಡ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ ವಿಡಿಯೋದ ತುಣುಕನ್ನು ನೀಡಲಾಗಿದೆ. ಹಾಸನದ ಶಾಲೆಯಲ್ಲಿ ಬಕ್ರೀದ್ ಪ್ರಯುಕ್ತ ಖುರಾನ್ ಪಠಣಕ್ಕೆ ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಬಗ್ಗೆ ವರದಿಯಾಗಿದೆ. ಇದು ಜುಲೈ 1, 2023 ರಂದು ಪ್ರಕಟವಾಗಿದೆ.

ಈ ದಿನಾಂಕವನ್ನು ಬಳಸಿಕೊಂಡು ನಾವು ಹೆಚ್ಚಿನ ತನಿಖೆ ನಡೆಸಿದಾಗ ಇನ್ನೂ ಕೆಲವು ವರದಿಗಳು ಕಂಡುಬಂದಿವೆ. ಜುಲೈ 1, 2023 ರಂದು ಕನ್ನಡ ಪ್ರಭ ವೆಬ್‌ಸೈಟ್‌ನಲ್ಲಿ ಇದೇ ಮಾಹಿತಿಯೊಂದಿಗೆ ವರದಿ ನೀಡಿರುವುದನ್ನು ಕಾಣಬಹುದು. ಇವರು 'ಖಾಸಗಿ ಶಾಲೆಯ ಎಡವಟ್ಟು; ಬಕ್ರೀದ್ ಹಿನ್ನೆಲೆ ಶಾಲೆಯಲ್ಲಿ ಮಕ್ಕಳಿಂದ ಸಾಮೂಹಿಕ ನಮಾಜ್!' ಎಂಬ ಶೀರ್ಷಿಕೆ ನೀಡಿದ್ದಾರೆ.

ಈ ಮೂಲಕ ಹರಿದಾಡುತ್ತಿರುವ ಸಂದೇಶಗಳಲ್ಲಿ ಹೇಳಿಕೊಂಡಿರುವಂತೆ ಇದು ಕರ್ನಾಟಕಾದ್ಯಂತ ಸರ್ಕಾರ ಜಾರಿಗೊಳಿಸಿರುವ ಕಡ್ಡಾಯ ಧಾರ್ಮಿಕ ಶಿಕ್ಷಣವಲ್ಲ, ಖಾಸಗಿ ಶಾಲೆಯಲ್ಲಿ ಬಕ್ರೀದ್ ಆಚರಣೆಗೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮವಷ್ಟೇ ಎಂಬುದು ಸ್ಪಷ್ಟವಾಯಿತು. ನಂತರದ ತಪಾಸಣೆಯಲ್ಲಿ, ಅದೇ ಶಾಲೆಯಲ್ಲಿ ಇನ್ನೂ ಅನೇಕ ಆಚರಣೆಗಳನ್ನು ನಡೆಸಲಾಗಿದೆ ಎಂಬುದು ತಿಳಿಯಿತು.

ಶಾಲೆಯಲ್ಲಿ ಸಂಕ್ರಾಂತಿ ಹಬ್ಬ, ಶ್ರೀ ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ವಿವಿಧ ಧಾರ್ಮಿಕ ಹಬ್ಬಗಳನ್ನು ಆಯೋಜಿಸಿರುವುದು ಶಾಲೆಯ ವೆಬ್‌ಸೈಟ್‌ನಲ್ಲಿ ನೀಡಿರುವ ಚಿತ್ರಗಳಿಂದ ತಿಳಿದುಬಂದಿದೆ.

ಕರ್ನಾಟಕದ ಶಾಲೆಗಳಲ್ಲಿ ಧಾರ್ಮಿಕ ಆಚರಣೆಗಳು ಅಥವಾ ಇತರ ಆಚರಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ನೀತಿ ಜಾರಿಗೆ ತಂದಿಲ್ಲ. ರಾಜ್ಯದ ಯಾವುದೇ ಮಾಧ್ಯಮ ಕೂಡ ಈ ಬಗ್ಗೆ ವರದಿಗಳನ್ನು ಪ್ರಕಟಿಸಿಲ್ಲ. ಹೀಗಾಗಿ ಶಾಲೆಯಲ್ಲಿ ಖುರಾನ್ ಪಠಿಸುತ್ತಿರುವ ವಿಡಿಯೋ ಆಧಾರರಹಿತವಾಗಿದೆ ಎಂದು ನಾವು ಖಚಿತಪಡಿಸುತ್ತಿದ್ದೇವೆ.

Claim Review:ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
Claimed By:Social Media Users
Claim Reviewed By:NewsMeter
Claim Source:Facebook Users
Claim Fact Check:False
Fact:ಇದು ಸುಳ್ಳು ಸುದ್ದಿಯಾಗಿದೆ. ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನವನ್ನು ಕಡ್ಡಾಯಗೊಳಿಸಿಲ್ಲ. ವೈರಲ್ ಆಗುತ್ತಿರುವುದು ಖಾಸಗಿ ಶಾಲೆಯಲ್ಲಿ ಬಕ್ರೀದ್ ಆಚರಣೆಯ ದೃಶ್ಯಾವಳಿಗಳಾಗಿವೆ.
Next Story