ಹೈದರಾಬಾದ್: ರಾಜ್ಯದ ಮಹಿಳೆಯರಿಗೆ ಶಾಕ್ ಕೊಟ್ಟ ಸಿಎಂ ಸಿದ್ದು, ಉಚಿತ ಬಸ್ ಪ್ರಯಾಣ ಸಂಪೂರ್ಣ ಬಂದ್? - ಹೀಗೆ ಪ್ರಶ್ನಾರ್ಥಕ ಚಿಹ್ನೆಯಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಯೂಟ್ಯೂಬ್ ವಿಡಿಯೋ ಮಾಡಿದ್ದು, ಥಂಬ್ ನೇಲ್ ನಲ್ಲಿ ಉಚಿತ ಬಸ್ ಪ್ರಯಾಣ ಬಂದ್! ಎಲ್ಲಾ ಮಹಿಳೆಯರಿಗೆ ಶಾಕ್ ! ಎಂದು ಹಾಕಲಾಗಿದೆ. ಈ ಸುದ್ದಿ ಆಧಾರರಹಿತ ಮತ್ತು ಸುಳ್ಳು ಸುದ್ದಿ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಿಂದ ಗೊತ್ತಾಗಿದೆ.
ಈ ವಿಷಯ ಬಗ್ಗೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Factcheck
ಕರ್ನಾಟಕ ಸಾರಿಗೆ, ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವೂ ಸೇರಿ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿತ್ತು. ಅದರಂತೆಯೇ ಮೊದಲಿಗೆ, ಅಂದರೆ ಕರ್ನಾಟಕದಲ್ಲಿ ಅಧಿಕಾರ ಹಿಡಿದ ಮೇಲೆ ಕಾಂಗ್ರೆಸ್ ಜಾರಿಗೆ ತಂದ ಮೊದಲ ಗ್ಯಾರಂಟಿ ಶಕ್ತಿ ಯೋಜನೆಯೇ. ಜೂನ್ ತಿಂಗಳ 11ನೇ ತಾರೀಕಿನಂದು ಈ ಯೋಜನೆಗೆ ಚಾಲನೆ ನೀಡಲಾಯಿತು. ಇನ್ನು ಹಣಕಾಸು ಇಲಾಖೆಯ ಜವಾಬ್ದಾರಿ ಕೂಡ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಮಂಡಿಸಿದ ಬಜೆಟ್ ನಲ್ಲಿ ಈ ಯೋಜನೆಯ ಜಾರಿಗಾಗಿಯೇ 4000 ಕೋಟಿ ರೂಪಾಯಿಯನ್ನು ಮೀಸಲಾಗಿಟ್ಟು, ಪ್ರಸ್ತಾವವನ್ನು ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ಬಜೆಟ್ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಈ ಶಕ್ತಿ ಯೋಜನೆ ಜಾರಿ ಮಾಡಿದ ಮೇಲೆ ಖಾಸಗಿ ಬಸ್ ಗಳವರಿಗೆ ಹಾಗೂ ಆಟೋರಿಕ್ಷಾದವರಿಗೆ ಮಹಿಳಾ ಪ್ರಯಾಣಿಕರು ಬಾರದೆ ಸಮಸ್ಯೆಯಾಗದೆ ಎಂಬ ಕಾರಣವನ್ನು ನೀಡಿ, ಇದೇ ಜುಲೈ 27ನೇ ತಾರೀಕು ಅವರು ಬಂದ್ ಗೆ ಕರೆ ನೀಡಿದ್ದಾರೆ. ಅದೇ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲೂ ಹೇಳಲಾಗಿದೆಯೇ ವಿನಾ ಎಲ್ಲಿಯೂ ಶಕ್ತಿ ಯೋಜನೆಯನ್ನು ನಿಲ್ಲಿಸುವುದಾಗಿ ಅಥವಾ ಅಂಥದ್ದೊಂದು ಪ್ರಸ್ತಾವ, ಆಲೋಚನೆ ರಾಜ್ಯ ಸರ್ಕಾರದ ಮುಂದೆ ಇದೆ ಎಂದಾಗಲೀ ಎಲ್ಲಿಯೂ ವರದಿ ಆಗಿಲ್ಲ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಎಲ್ಲಿಯೂ ಹೇಳಿಲ್ಲ.
Conclusion
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಶಕ್ತಿ ಯೋಜನೆಯನ್ನು ಬಂದ್ ಮಾಡುವ ಆಲೋಚನೆ ಕರ್ನಾಟಕ ಸರ್ಕಾರದ ಮುಂದೆ ಇಲ್ಲ. ಈ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿ, ಮಾಡಿರುವಂಥ ವಿಡಿಯೋ ಸುಳ್ಳು ಮಾಹಿತಿ ನೀಡುತ್ತಿದೆ.