ಹೈದರಾಬಾದ್: ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿಗಳ ಹೊರತಾಗಿ ರಾಜ್ಯ ಬಜೆಟ್ ನಲ್ಲಿ ಕೆಲವು ಯೋಜನೆಗಳನ್ನು ಘೋಷಿಸಲಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮುದಾಯದವರಿಗಾಗಿ ಈ ಯೋಜನೆ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ನಿಂದ ಮತ್ತಷ್ಟು ಗ್ಯಾರಂಟಿ ಸ್ವಂತ ಬಿಸಿನೆಸ್ ಮಾಡೋರಿಗೆ 3 ಲಕ್ಷ ಹಣ ಉಚಿತ…ಕೊಡಲಿದ್ದಾರೆ… ಹೀಗೊಂದು ಹೆಡ್ಡಿಂಗ್ ಕೊಟ್ಟು ಮಾಡಿರುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಮಾಡಲಾಗಿದ್ದು, ಅದರ ಥಂಬ್ ನೇಲ್ ನಲ್ಲಿ ಸ್ವಂತ ಬ್ಯುಸಿನೆಸ್ ಮಾಡೋರಿಗೆ 3 ಲಕ್ಷ ಉಚಿತ…0% ಬಡ್ಡಿಯಲ್ಲಿ 20 ಲಕ್ಷ ಸಾಲ… ಪಡೆಯುವ ಸಂಪೂರ್ಣ ಮಾಹಿತಿ.. ಎಂದು ನೀಡಲಾಗಿದೆ. ಈ ವಿಡಿಯೋ ಹಾಗೂ ಮಾಹಿತಿ ಓದುಗರನ್ನು ದಾರಿ ತಪ್ಪಿಸುವಂಥದ್ದು ಮತ್ತು ತಪ್ಪಾಗಿರುವಂಥದ್ದು ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.
ಈ ಬಗ್ಗೆ ಪ್ರಕಟ ಆಗಿರುವ ಸುದ್ದಿ ಓದಲು, ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Factcheck
ಕರ್ನಾಟಕ ಬಜೆಟ್- 2023ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸ್ವಾವಲಂಬಿ ಸಾರಥಿ’ ಎಂಬ ಯೋಜನೆ ಘೋಷಣೆ ಮಾಡಿದ್ದಾರೆ. ಇದರ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲದ ಶೇಕಡಾ ಎಪ್ಪತ್ತೈದರಷ್ಟನ್ನು, ಅಂದರೆ ಗರಿಷ್ಠ ನಾಲ್ಕು ಲಕ್ಷ ರೂಪಾಯಿ ಸಹಾಯಧನದ ಮೂಲಕ ಸರ್ಕಾರ ನೀಡುವಂಥ ಯೋಜನೆ ಇದು. ಇನ್ನು ಇದು ಸ್ವಂತ ಬ್ಯುಸಿನೆಸ್ (ವ್ಯವಹಾರ ಅಥವಾ ಉದ್ಯಮ) ಅಲ್ಲ, ಇದು ಸ್ವಂತ ಉದ್ಯೋಗಕ್ಕಾಗಿ ನೀಡುವಂಥದ್ದು. ಕನ್ನಡದಲ್ಲಿ ಪ್ರಕಟ ಆಗಿರುವಂಥ ಬಜೆಟ್- 2023 ಪಿಡಿಎಫ್ ಫಾರ್ಮ್ಯಾಟ್ ನಲ್ಲಿ ಈ ಯೋಜನೆಯ ಮಾಹಿತಿ ಇದೆ. 52ನೇ ಪುಟ 143ನೇ ಅಂಶದಲ್ಲಿ ಈ ಮಾಹಿತಿ ಇದೆ.
ಇನ್ನು 53ನೇ ಪುಟದ 147ನೇ ಅಂಶದಲ್ಲಿ ಇರುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳುವುದಕ್ಕೆ ವಾಣಿಜ್ಯ ಬ್ಯಾಂಕ್ ಗಳಿಂದ ಪಡೆಯುವ ಸಾಲಕ್ಕೆ ಶೇ 20ರಷ್ಟು ಅಥವಾ 1 ಲಕ್ಷ ರೂಪಾಯಿ ಮೀರದಂತೆ ಸಾಲಕ್ಕೆ ಸಹಾಯಧನ ನೀಡಲಾಗುವುದು ಎಂದು ಹೇಳಿದೆ.
ಇಪ್ಪತ್ತು ಲಕ್ಷ ರೂಪಾಯಿ ಸಾಲ ಶೂನ್ಯ ಬಡ್ಡಿದರದಲ್ಲಿ ಅಂತಿರುವುದು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಇದನ್ನು ಬಜೆಟ್ ದಾಖಲೆಯ 56ನೇ ಪುಟದ 158ನೇ ಅಂಶದಲ್ಲಿ ವಿವರಿಸಲಾಗಿದೆ.
ಸ್ವಾವಲಂಬಿ ಸಾರಥಿ ಯೋಜನೆ ಹಿಂದುಳಿದ ವರ್ಗದವರಿಗೂ ಇದೆ. ಇದು ಸ್ವಯಂ ಉದ್ಯೋಗ ಯೋಜನೆ ಆಗಿದ್ದು, 58ನೇ ಪುಟದ 161ನೇ ಅಂಶದಲ್ಲಿ ವಿವರಿಸಲಾಗಿದೆ. ನಿರುದ್ಯೋಗಿ ಯುವಜನರು ನಾಲ್ಕು ಚಕ್ರದ ವಾಹನ ಖರೀದಿಸಲು ಶೇ 50ರಷ್ಟು, ಗರಿಷ್ಠ 3 ಲಕ್ಷ ರೂಪಾಯಿ ಸಹಾಯಧನವನ್ನು ಸರ್ಕಾರದಿಂದ ನೀಡಲಾಗುವುದು. ಪರಿಶಿಷ್ಟ ಜಾತಿ ಪಂಗಡದವರಿಗೆ ಇರುವಂತೆಯೇ ನಿರುದ್ಯೋಗಿಗಳಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳುವುದಕ್ಕೆ ವಾಣಿಜ್ಯ ಬ್ಯಾಂಕ್ ಗಳಿಂದ ಪಡೆಯುವ ಸಾಲಕ್ಕೆ ಶೇ 20ರಷ್ಟು ಅಥವಾ 1 ಲಕ್ಷ ರೂಪಾಯಿ ಮೀರದಂತೆ ಸಾಲಕ್ಕೆ ಸಹಾಯಧನ ನೀಡಲಾಗುವುದು. ಇದನ್ನು 58ನೇ ಪುಟದಲ್ಲೇ 162ನೇ ಅಂಶದಲ್ಲಿ ವಿವರಿಸಲಾಗಿದೆ.
ಇಪ್ಪತ್ತು ಲಕ್ಷ ರೂಪಾಯಿ ಸಾಲ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಅಲ್ಪ ಸಂಖ್ಯಾತ ವರ್ಗದವರಿಗೂ ಇದ್ದು, ಯೂನಿವರ್ಸಿಟಿ ಶ್ರೇಯಾಂಕದಲ್ಲಿ 250ರೊಳಗೆ ಇರುವಂಥದ್ದರಲ್ಲಿ, ವಿದೇಶಿ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತ ವ್ಯಾಸಂಗ ಮಾಡುವುದಕ್ಕೆ ಇದನ್ನು ನೀಡಲಾಗುವುದು. ಅಂದಹಾಗೆ ಇದು ಶಿಕ್ಷಣದ ಉದ್ದೇಶಕ್ಕೆ ವಿನಾ ಉದ್ಯಮಕ್ಕಾಗಿ ಅಲ್ಲ. 62ನೇ ಪುಟದ 175ನೇ ಅಂಶದಲ್ಲಿ ಇದನ್ನು ವಿವರಿಸಲಾಗಿದೆ.
ಸ್ವಾವಲಂಬಿ ಸಾರಥಿ ಯೋಜನೆ ಅಲ್ಪಸಂಖ್ಯಾತರಿಗೂ ಇದ್ದು, ಇದು ಸ್ವಯಂ ಉದ್ಯೋಗ ಯೋಜನೆ ಆಗಿದ್ದು, ನಾಲ್ಕು ಚಕ್ರದ ವಾಹನ ಖರೀದಿಸಲು ಶೇ 50ರಷ್ಟು, ಗರಿಷ್ಠ 3 ಲಕ್ಷ ರೂಪಾಯಿ ಸಹಾಯಧನವನ್ನು ಸರ್ಕಾರದಿಂದ ನೀಡಲಾಗುವುದು. ಇದನ್ನು 62ನೇ ಪುಟದ 177ನೇ ಅಂಶದಲ್ಲಿ ಪ್ರಸ್ತಾವ ಮಾಡಲಾಗಿದೆ.
ಮೂರು ಲಕ್ಷ ರೂಪಾಯಿ ತನಕ ಸಹಾಯ ಧನವನ್ನು ನೀಡುವುದು “ಸ್ವಾವಲಂಬಿ ಸಾರಥಿ” ಯೋಜನೆಗೆ. ಅದೂ ಸ್ವಯಂ ಉದ್ಯೋಗ ಮಾಡುವುದಕ್ಕೆ ವಿನಾ ಉದ್ಯಮ ಅಥವಾ ವ್ಯವಹಾರ ಆರಂಭಿಸುವುದಕ್ಕಲ್ಲ. ಅದೇ ರೀತಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ ಸಹಾಯಧನದ ಮೊತ್ತ ಮೂರು ಲಕ್ಷ ರೂಪಾಯಿಯಾದರೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಈ ಮೊತ್ತ ನಾಲ್ಕು ಲಕ್ಷ ರೂಪಾಯಿ.
Conclusion
ಸ್ವಂತ ಬ್ಯುಸಿನೆಸ್ ಮಾಡುವವರಿಗೆ 3 ಲಕ್ಷ ಹಣ ಉಚಿತ ಎಂಬುದು ದಾರಿ ತಪ್ಪಿಸುವಂಥದ್ದು ಹಾಗೂ ತಪ್ಪು ಮಾಹಿತಿ. ಇನ್ನು ಈ ಯೋಜನೆ ಅನ್ವಯಿಸುವುದು ಸ್ವಾವಲಂಬಿ ಸಾರಥಿ ಯೋಜನೆಗೆ ಮಾತ್ರ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದವರಿಗೆ ಈ ಯೋಜನೆ ಅಡಿ ಮೂರು ಲಕ್ಷ ರೂಪಾಯಿ ತನಕ ಸಹಾಯ ಧನ ಇದ್ದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ ನಾಲ್ಕು ಲಕ್ಷ ರೂಪಾಯಿ ಸಹಾಯಧನ ಇದೆ.