ಹೈದರಾಬಾದ್: ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ 3 ಲಕ್ಷ ಸಾಲ ಪಡೆಇಯಿರಿ ಅದರಲ್ಲಿ 1 ಲಕ್ಷ 20 ಸಾವಿರ ಉಚಿತ. ಯಾವುದೇ ಗ್ಯಾರಂಟಿ ಇಲ್ಲದೆ ಹಣ ನೀಡುತ್ತಾರೆ.! - ಹೀಗೊಂದು ಶೀರ್ಷಿಕೆ ಅಡಿಯಲ್ಲಿ ಸುದ್ದಿಯೊಂದು ಪ್ರಕಟಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನ್ಯೂಸ್ ಮೀಟರ್ ನಿಂದ ಫ್ಯಾಕ್ಟ್ ಚೆಕ್ ಮಾಡಲಾಗಿದ್ದು, ಈ ಸುದ್ದಿ ದಾರಿ ತಪ್ಪಿಸುವಂಥದ್ದು ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನು ಪೂರ್ತಿ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
Factcheck
ಈ ಸುದ್ದಿಯ ಆರಂಭದಲ್ಲಿ ಹೀಗಿದೆ: ಕರ್ನಾಟಕ ರಾಜ್ಯದಾದ್ಯಂತ ಇರುವಂತಹ ಎಲ್ಲಾ ಮಹಿಳೆಯರಿಗೂ ಅಂದರೆ 18 ವರ್ಷದಿಂದ 50 ವರ್ಷದ ಎಲ್ಲಾ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಗ್ಯಾರಂಟೀ ಇಲ್ಲದೇ 3 ಲಕ್ಷ ಹಣ ನೀಡಲಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯರೂ ಕೂಡ ಈ ಯೋಜನೆಯ ಅಡಿಯಲ್ಲಿ 3 ಲಕ್ಷದ ವರೆಗೆ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಈ ಸುದ್ದಿಯ ಕೊನೆಯ ಭಾಗದಲ್ಲಿ ಹೀಗಿದೆ: ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಮಹಿಳೆ ಯರು ಬಡತನ ರೇಖೆಗಿಂತ ಕಡಿಮೆ ಇರಬೇಕಾಗುತ್ತದೆ.
ಆದರೆ, ಈ ಸುದ್ದಿಯಲ್ಲಿ ಎಲ್ಲಿಯೂ ಯಾವ ಯೋಜನೆ ಎಂಬ ಹೆಸರನ್ನು ಉಲ್ಲೇಖ ಮಾಡಿಲ್ಲ. ಮೊದಲಿಗೆ ರಾಜ್ಯದ ಎಲ್ಲ ಮಹಿಳೆಯರಿಗೆ ಎಂದು ಹೇಳಿ, ಆ ನಂತರ ಬಡತನ ರೇಖೆಗಿಂತ ಕೆಳಗಿನವರು ಎನ್ನಲಾಗಿದೆ. ಅದೇ ರೀತಿ ಸರ್ಕಾರದಿಂದ ಇರುವ ಯೋಜನೆಗಳಿಗೆ ‘ಸಬ್ಸಿಡಿ’ ನೀಡಲಾಗುತ್ತದೆ. ಹಾಗೆ ನೀಡುವುದಕ್ಕೂ ಕೆಲವು ಷರತ್ತು ಅಥವಾ ನಿಯಮಗಳು ಇರುತ್ತವೆ.
ಇನ್ನು ರಾಜ್ಯ ಸರ್ಕಾರದಿಂದ ಇಂಥ ಯಾವುದಾದರೂ ಯೋಜನೆ ಇದೆಯಾ ಎಂದು ಗಮನಿಸಿದರೆ, “ಉದ್ಯೋಗಿನಿ” ಹೆಸರಿನಲ್ಲಿ ಇರುವಂಥ ಯೋಜನೆ ಕಂಡುಬರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ವೆಬ್ ಸೈಟ್ ನಲ್ಲಿ ಇರುವಂಥ ಮಾಹಿತಿ ಹೀಗಿದೆ:
ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ಕನಿಷ್ಟ ರೂ.1.00 ಲಕ್ಷದಿಂದ ಗರಿಷ್ಟ ರೂ.3.00 ಲಕ್ಷಗಳು. ಸಹಾಯಧನದ ಮೊತ್ತ ಶೇ.50 ರಷ್ಟು ಗರಿಷ್ಟ ರೂ.1.50 ಲಕ್ಷಗಳು. ಕುಟುಂಬದ ವಾರ್ಷಿಕ ಆದಾಯದ ಗರಿಷ್ಟ ಮಿತಿ ರೂ.2.00 ಲಕ್ಷಗಳು.
ಸಾಮಾನ್ಯ ವರ್ಗ ಮತ್ತು ವಿಶೇಷ ವರ್ಗದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ಗರಿಷ್ಟ ರೂ.3.00 ಲಕ್ಷಗಳು. ಸಹಾಯಧನದ ಮೊತ್ತ ಶೇ30 ರಷ್ಟು ಗರಿಷ್ಟ ರೂ.90,000/-. ಕುಟುಂಬದ ವಾರ್ಷಿಕ ಆದಾಯದ ಗರಿಷ್ಟ ಮಿತಿ ರೂ.1.50 ಲಕ್ಷಗಳು. ಎಲ್ಲಾ ವರ್ಗದ ಮಹಿಳೆಯರಿಗೆ ವಯೋಮಿತಿ 18 ರಿಂದ 55 ವರ್ಷಗಳು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ವೆಬ್ ಸೈಟ್ ಗೆ ಇಲ್ಲಿ ಕ್ಲಿಕ್ ಮಾಡಿ.
Conclusion
ಈ ಸುದ್ದಿಯಲ್ಲಿ ಇರುವಂತಹ ಬಹಳ ಮಾಹಿತಿಗಳು ದಾರಿ ತಪ್ಪಿಸುವಂತೆ ಇದೆ. ಇನ್ನು ಸುದ್ದಿಯಲ್ಲಿಯೇ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಮಾಹಿತಿ ಇದೆ. ಇನ್ನು ಯೋಜನೆಯ ಹೆಸರು ಸಹ ಇಲ್ಲ. ಆದ್ದರಿಂದ ಇದು ದಾರಿ ತಪ್ಪಿಸುವಂಥ ಸುದ್ದಿ.