ಹೈದರಾಬಾದ್: ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂಬ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಆದರೆ ಇದೀಗ ಸಿದ್ದರಾಮಯ್ಯ ಅವರ ಹೆಸರಿರುವಂಥ ಲೆಟರ್ ಹೆಡ್ ನಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಗಳ ಪಟ್ಟಿಯೊಂದನ್ನು ಮಾಡಿ, ಅದನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಲಾಗಿದೆ ಎಂಬ ಸಂದೇಶ ರವಾನಿಸುವಂಥ ಪತ್ರವೊಂದು ಮೇ 8ನೇ ತಾರೀಕಿನ ದಿನಾಂಕವೊಂದನ್ನು ಹೊಂದಿದ್ದು, ಭಾರೀ ವೈರಲ್ ಆಗಿದೆ. ಆದರೆ ನ್ಯೂಸ್ ಮೀಟರ್ ನಿಂದ ಫ್ಯಾಕ್ಟ್ ಚೆಕ್ ಮಾಡಿರುವಂತೆ ಇದು ನಕಲಿ ಪತ್ರ ಎಂದು ಗೊತ್ತಾಗಿದೆ. ಮತ್ತು ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಈ ರೀತಿ ನಕಲಿ ಪತ್ರವನ್ನು ಹರಿದಾಡುವಂತೆ ಮಾಡಿರುವವರ ವಿರುದ್ಧ ಕ್ರಮ ಜರುಗಿಸುವುದಕ್ಕೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
Fact Check
ಕರ್ನಾಟಕ ವಿಧಾನಸಭೆಗೆ ಮೇ ಹತ್ತನೇ ತಾರೀಕು ಮತದಾನ ನಡೆಯಲಿದೆ. ಈಗ ಹರಿದಾಡುತ್ತಿರುವ ಪತ್ರದಲ್ಲಿ ಮೇ ಎಂಟನೇ ತಾರೀಕು ಇದನ್ನು ಬರೆದಂತೆ ತೋರಿಸಲಾಗಿದೆ. ವಿಷಯ ಎಂದು ಉಲ್ಲೇಖ ಮಾಡಿ, ಚುನಾವಣೆ ಸಮಯದಲ್ಲಿ ಪಕ್ಷದ ಒಳಗೆ ನಡೆಯುತ್ತಿರುವ ವಿದ್ಯಮಾಗಳ ಬಗ್ಗೆ, ಎಂದು ಹಾಕಲಾಗಿದೆ. ಆ ಪತ್ರದಲ್ಲಿ ಇರುವಂತೆ, ತಾವು ಕಾಂಗ್ರೆಸ್ ಅನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ರಾಜ್ಯದಾದ್ಯಂತ ಸುತ್ತಾಡುತ್ತಿದ್ದರೆ ಡಿ.ಕೆ. ಶಿವಕುಮಾರ್ ತೆಗೆದುಕೊಳ್ಳುತ್ತಿರುವ ನಿರ್ಧಾರ, ನಡೆದುಕೊಳ್ಳುತ್ತಿರುವ ವರ್ತನೆಯಿಂದ ತೀವ್ರ ಅಸಮಾಧಾನ ಆಗಿದೆ, ಡಿಕೆ ಶಿವಕುಮಾರ್ ತಾವೇ ಮುಖ್ಯಮಂತ್ರಿ ಎಂದು ಘೋಷಿಸಿ, ಗೊಂದಲ ಸೃಷ್ಟಿಸುತ್ತಿದ್ದಾರೆ, ತಾವೊಬ್ಬರೆ ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ತಮ್ಮ ನಿರ್ಧಾರಕ್ಕೆ ಶಿವಕುಮಾರ್ ಅಡ್ಡಗಾಲು ಹಾಕಿದರು ಎಂದೂ ಇದೆ.
ಇನ್ನು ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿಯಿದೆ. ನನ್ನ ಬೆಂಬಲಿಗರಿಗೆ ಹಲವರಿಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದ್ದಾರೆ ಹಾಗೂ ಕೆಲವರಿಗೆ ತಪ್ಪಿಸಿದ್ದಾರೆ ಎಂಬಿತ್ಯಾದಿ ಆರೋಪಗಳನ್ನು ಪತ್ರದಲ್ಲಿ ಮಾಡಲಾಗಿದೆ. ಆದರೆ ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, “ನನ್ನ ಹಾಗೂ ಡಿಕೆ ಶಿವಕುಮಾರ್ ಸಂಬಂಧ ಸೌಹಾರ್ದಯುತವಾಗಿದೆ. ಇದಕ್ಕೆ ಹುಳಿ ಹಿಂಡುವ ಪ್ರಯತ್ನ ಯಶಸ್ಸು ಕಾಣಲಾರದು. ಶೀಘ್ರದಲ್ಲಿಯೇ ಪೊಲೀಸರಿಗೆ ದೂರು ನೀಡಿ, ಈ ಕಿಡಿಗೇಡಿತನದ ಪತ್ರ ಸೃಷ್ಟಿಸಿ ಹಂಚುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲಿದ್ದೇನೆ,” ಎಂದಿದ್ದಾರೆ.
Conclusion
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದು, ದೂರು ನೀಡಿದ್ದಾರೆ ಎಂದು ಹರಿದಾಡುತ್ತಿರುವ ಪತ್ರ ನಕಲಿ ಎಂದು ಸ್ವತಃ ಸಿದ್ದರಾಮಯ್ಯ ಖಾತ್ರಿ ಪಡಿಸಿದ್ದಾರೆ. ಮತ್ತು ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿಯೂ ತಿಳಿಸಿದ್ದಾರೆ. ಆದ್ದರಿಂದ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪತ್ರ ಸುಳ್ಳು ಎಂಬುದು ಖಾತ್ರಿ ಆಗಿದೆ.