ಹೈದರಾಬಾದ್: “ಜೂನ್ 1 ರಿಂದ ಹೊಸ ರೂಲ್ಸ್ , ಮೇ 31 ರ ಒಳಗೆ ಈ ದಾಖಲೆ ಸಲ್ಲಿಸಿದರೆ 200 ಯೂನಿಟ್ ವಿದ್ಯುತ್ ಫ್ರೀ..!” ಎಂಬ ಶೀರ್ಷಿಕೆಯಡಿ ಸುದ್ದಿಯೊಂದು ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. ಇದು ಪ್ರಕಟ ಆಗಿರುವುದು https://rishithepower.com ಎಂಬ ವೆಬ್ ಸೈಟ್ ನಲ್ಲಿ.ಈ ಸುದ್ದಿ ಬಂದಿದ್ದು, ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಈ ಸುದ್ದಿ ಸುಳ್ಳು ಎಂಬುದು ಗೊತ್ತಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಈ ಬಗ್ಗೆ ಮೇ 29ರ ರಾತ್ರಿ ಎಂಟು ಗಂಟೆ ಹೊತ್ತಿಗೂ ಯಾವುದೇ ನಿಯಮಾವಳಿಯನ್ನು ಪ್ರಕಟಿಸಿಲ್ಲ, ಅಧಿಸೂಚನೆಯನ್ನು ಹೊರಡಿಸಿಲ್ಲ.
ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
FACTCHECK
ಕರ್ನಾಟಕ ವಿಧಾನಸಭಾ ಚುನಾವಣೆ- 2023ಕ್ಕೆ ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿತು. ಅದರಲ್ಲಿ, ಪ್ರತಿ ಮನೆಗೆ ಇನ್ನೂರು ಯೂನಿಟ್ ವಿದ್ಯುತ್ ಉಚಿತ ಎಂಬುದು ಸಹ ಒಂದಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು, ಮೇ 20ನೇ ತಾರೀಕು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಇತರ ಎಂಟು ಮಂದಿ ಸಂಪುಟ ಸಚಿವರಾಗಿ ಪದವಿ ಪ್ರಮಾಣ ಸ್ವೀಕರಿಸಿದ ದಿನದಂದು ನಡೆಸಿದ ಮೊದಲ ಸಂಪುಟ ಸಭೆಯಲ್ಲೇ ಐದೂ ಗ್ಯಾರಂಟಿಗಳಿಗೆ ತಾತ್ವಿಕವಾಗಿ ಒಪ್ಪಿಗೆ ನೀಡಿ, ಅಧಿಸೂಚನೆಯನ್ನು ಸಹ ಹೊರಡಿಸಲಾಯಿತು. ಆದರೆ ಈ ಸಂಬಂಧವಾಗಿ ವಿವರವಾದ ವರದಿ ಸಿದ್ಧಪಡಿಸುವಂತೆ ಕೇಳಲಾಯಿತು. ಈ ಗ್ಯಾರಂಟಿ ಜಾರಿ ಬಗ್ಗೆಯೇ ಮೇ 29ನೇ ತಾರೀಕು ಮಧ್ಯಾಹ್ನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿದ್ದು, @CMofKarnataka ಟ್ವಿಟ್ಟರ್ ಹ್ಯಾಂಡಲ್ ನಿಂದ ಈ ಬಗ್ಗೆ ಟ್ವೀಟ್ ಕೂಡ ಮಾಡಲಾಗಿದೆ.
ಇನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಜತೆ ಇದೇ ವಿಚಾರವಾಗಿ ಮಾತನಾಡಿರುವ ಬಗ್ಗೆ ವಾರ್ತಾಭಾರತಿ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಕಟವಾಗಿದೆ. ಅದರಲ್ಲಿ ಇರುವ ಪ್ರಕಾರ ಶಿವಕುಮಾರ್ ಮಾತನಾಡಿ, ಜೂನ್ 1 ರಂದು ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಈ ಬಗ್ಗೆ ಚರ್ಚೆ ಮಾಡುತ್ತೇವೆ. ನಮ್ಮದು ಜವಾಬ್ದಾರಿಯುತ ಸರ್ಕಾರ, ನಾವು ಈ ಯೋಜನೆಯನ್ನು ಕ್ರಮಬದ್ಧವಾಗಿ ಜಾರಿ ಮಾಡುತ್ತೇವೆ ಎಂದರು ಎಂಬುದಾಗಿ ವರದಿ ಆಗಿದೆ.
ಅಲ್ಲಿಗೆ ಮೇ 29ರಂದು ಸಹ ಇನ್ನೂರು ಯೂನಿಟ್ ವಿದ್ಯುತ್ ಉಚಿತ ಎಂಬುದು ಸೇರಿದಂತೆ ಐದು ಗ್ಯಾರಂಟಿಗಳ ವಿಚಾರದಲ್ಲಿ ಯಾವುದೇ ಮಾಹಿತಿಯನ್ನು ಜನರಿಗಾಗಿ ಎಂದು ಬಿಡುಗಡೆ ಮಾಡಿಲ್ಲ. ಯಾವುದಕ್ಕೆ ಯಾವ ದಾಖಲೆಗಳು ಬೇಕು ಎಂಬ ಯಾವ ಮಾಹಿತಿಯೂ ಸರ್ಕಾರದಿಂದಾಗಲೀ ಅಥವಾ ಸಂಬಂಧಪಟ್ಟ ಇಲಾಖೆಗಳಿಂದಾಗಲೀ ಬಂದಿಲ್ಲ.
CONCLUSION
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ನೀಡಿದ ಐದು ಗ್ಯಾರಂಟಿಗಳಿಗೆ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆಯೇ ವಿನಾ ಇವುಗಳ ಜಾರಿಗೆ ಯಾವುದೇ ನಿಯಮಾವಳಿ ಇನ್ನೂ ಬಿಡುಗಡೆ ಮಾಡಿಲ್ಲ, ಹಾಗೆ ನೋಡಿದರೆ ಆ ಯೋಜನೆಗಳ ಜಾರಿಯು ರೂಪು-ರೇಷೆಗಳ ಸಿದ್ಧತೆಯ ಹಂತದಲ್ಲೇ ಇದೆ. ಆದ್ದರಿಂದ ಯಾವ ಗ್ಯಾರಂಟಿಗೆ ಯಾವ ದಾಖಲಾತಿ ಸಲ್ಲಿಸಬೇಕು ಎಂಬ ಸುದ್ದಿಯು ಸುಳ್ಳು. ಇನ್ನು ಈ ನಿರ್ದಿಷ್ಟ ಸುದ್ದಿಯ ಬಗ್ಗೆ ಹೇಳುವುದಾದರೆ ಇದರಲ್ಲಿ ಎಲ್ಲಿಯೂ ಯಾವ ದಾಖಲೆ ಎಂಬುದರ ಪ್ರಸ್ತಾವವೇ ಇಲ್ಲ. ಸುದ್ದಿಯ ಶೀರ್ಷಿಕೆಗೂ ಅದರ ಒಳಗಿರುವ ಮಾಹಿತಿಗೂ ತಾಳೆಯೇ ಆಗಲ್ಲ.