ಹೈದರಾಬಾದ್: ಫೆಬ್ರವರಿ ಮೂರನೇ ತಾರೀಕಿನಂದು POWERFULKARUNADU.TECH ಸುದ್ದಿಯೊಂದನ್ನು ಪ್ರಕಟಿಸಿದ್ದು, ಬಜೆಟ್ ಮಂಡನೆಯಾದ ಎರಡೇ ದಿನಕ್ಕೆ ಪಾತಾಳಕ್ಕೆ ಬಿತ್ತು ಗ್ಯಾಸ್ ಬೆಲೆ, ಕೇವಲ 500 ರೂಪಾಯಿ ಎಂಬ ಶೀರ್ಷಿಕೆ ಇದೆ.
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಗ್ಯಾಸ್ ಬೆಲೆ ಕೇವಲ 500 ರೂಪಾಯಿಗೆ ಇಳಿಕೆಯಾಗಿದೆ. ಇದಕ್ಕೆ ಮೂಲ ಕಾರಣ ಅಲ್ಲಿನ ರಾಜಕಾರಣಿಗಳು. ಹೌದು, ಎಲೆಕ್ಷನ್ ಹತ್ತಿರವಾಗುತ್ತಿದಂತೆ ಗ್ಯಾಸ್ ಬೆಲೆ ಪಾತಾಳಕ್ಕೆ ಇಳಿಸಿಕೊಂಡಿದ್ದಾರೆ. ಜೊತೆಗೆ ಸಾವಿರದ ಗಡಿ ದಾಟಿದ್ದ ಸಿಲಿಂಡರ್ ಬೆಲೆ ಇದೀಗ 500 ರೂಪಾಯಿಗೆ ಇಳಿಕೆ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಮಧ್ಯಪ್ರದೇಶದ ಬಡ ಜನರಿಗೆ ಸಾಕಷ್ಟು ಸಹಾಯವಾಗಿದೆ.
ಇದೇ ರೀತಿ ಕರ್ನಾಟಕದ ನಾಯಕರು ಕೂಡ ಗ್ಯಾಸ್ ಬೆಲೆ ಇಳಿಕೆಗೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಗ್ಯಾಸ್ ಬೆಲೆಯಲ್ಲಿ ಸಾಕಷ್ಟು ಇಳಿಕೆ ಮಾಡಲು ಮುಂದಾಗಿದ್ದಾರೆ ರಾಜಕಾರಣಿಗಳು. ಕರ್ನಾಟಕದ ಸಿಲಿಂಡರ್ ಬಳಕೆದಾರರಿಗೆ ಎಲೆಕ್ಷನ್ ಮುನ್ನ ಬಂಪರ್ ಆಫರ್ ನೀಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಇದೀಗ ಈ ಗುಡ್ ನ್ಯೂಸ್ ಗಾಗಿ ಕನ್ನಡಿಗರು ಉತ್ಸಾಹದಿಂದ ಕಾಯುತ್ತಿದ್ದಾರೆ. - ಹೀಗೆ ಸುದ್ದಿ ಮಾಡಲಾಗಿದೆ.
Fact Check
ಆದರೆ, ನ್ಯೂಸ್ ಮೀಟರ್ ಇದನ್ನು ಪರಿಶೀಲಿಸಿರುವ ಪ್ರಕಾರ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ.
ವಾಸ್ತವವಾಗಿ 2022ರ ಡಿಸೆಂಬರ್ ಹತ್ತೊಂಬತ್ತನೇ ತಾರೀಕಿನಂದು ರಾಜಸ್ಥಾನದ ಆಳ್ವಾರ್ ಎಂಬ ಸ್ಥಳದಲ್ಲಿ ಅಲ್ಲಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಘೋಷಣೆ ಮಾಡಿದಂತೆ, ಮುಂದಿನ ವರ್ಷದಿಂದ (2023 ಏಪ್ರಿಲ್ ಒಂದರಿಂದ) ಗ್ಯಾಸ್ ಐನೂರು ರೂಪಾಯಿಗೆ ನೀಡುವುದಾಗಿ ಹೇಳಿದರು. ಆದರೆ ಇದು ಉಜ್ವಲ ಯೋಜನೆ ಅಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಮಾತ್ರ. ಅಂದರೆ ಬಡವರಿಗೆ ವರ್ಷಕ್ಕೆ ಹನ್ನೆರಡು ಎಲ್ಪಿಜಿ ಸಿಆಂಡರ್ ಐನೂರು ರೂಪಾಯಿಗೆ 2023 ಏಪ್ರಿಲ್ ಒಂದರಿಂದ ನೀಡುವುದಾಗಿ ಘೋಷಿಸಿದ್ದಾರೆ.
ಈ ಘೋಷಣೆ ಬಗ್ಗೆ ಕಾಂಗ್ರೆಸ್ ಮಾಡಿರುವ ಟ್ವೀಟ್ ಇಲ್ಲಿದೆ. ಹಾಗೂ ಎಎನ್ಐ ನ್ಯೂಸ್ ವರದಿ ಸಹ ಮಾಡಿದೆ.
Conclusion
ಫೆಬ್ರವರಿ ಒಂದನೇ ತಾರೀಕು ಕೇಂದ್ರ ಬಜೆಟ್ ಮಂಡನೆ ಆಗಿದ್ದು, ಅದಾಗಿ ಎರಡೇ ದಿನಕ್ಕೆ ಗ್ಯಾಸ್ ಸಿಲಿಂಡರ್ ಬೆಲೆ ಐನೂರು ರೂಪಾಯಿಗೆ ಬಿದ್ದಿದೆ ಎಂಬ ಶೀರ್ಷಿಕೆಯಲ್ಲಿ ಸುದ್ದಿ ವೈರಲ್ ಆಗಿರುವುದು ಸಂಪೂರ್ಣ ಸುಳ್ಳು. ಇನ್ನು ಈ ಸುದ್ದಿಯಲ್ಲಿ ಪ್ರಕಟವಾದಂತೆ ಇತ್ತೀಚೆಗೆ ಬೆಲೆ ಇಳಿಸಿರುವುದು ಮಧ್ಯಪ್ರದೇಶ ಅಲ್ಲ, ಬದಲಿಗೆ ರಾಜಸ್ಥಾನ. ಇನ್ನು ಈ ಬೆಲೆ ಇಳಿಕೆಯನ್ನು ಎಲ್ಲರಿಗೂ ಅನ್ವಯಿಸುವಂತೆ ಘೋಷಣೆ ಮಾಡಿರುವುದಲ್ಲ. ಇದನ್ನು ಬಿಪಿಎಲ್ ಕುಟುಂಬಗಳಿಗಾಗಿ, ಅಂದರೆ ಬಡತನ ರೇಖೆಗಿಂತ ಕೆಳಗೆ ಇರುವವರಿಗೆ, ವರ್ಷಕ್ಕೆ ಹನ್ನೆರಡು ಸಿಲಿಂಡರ್ ಅನ್ನು ತಲಾ ಐನೂರು ರೂಪಾಯಿಯಂತೆ ನೀಡಲಾಗುವುದು ಎಂದು ಘೋಷಣೆ ಮಾಡಿರುವುದು ಮಾತ್ರ. ಇನ್ನು ಈ ಘೋಷಣೆ ಮಾಡಿರುವುದು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ. ಈಗಿನ ಬಜೆಟ್ ಹಾಗೂ ಸಿಲಿಂಡರ್ ಬೆಲೆ ಇಳಿಕೆ ಘೋಷಣೆಗೂ ಯಾವುದೇ ಸಂಬಂಧ ಇಲ್ಲ.