ಉಚಿತ ರೇಷನ್ ಜತೆಗೆ ಮಹಿಳೆಯರಿಗೆ 1000 ರೂಪಾಯಿ ಎಂಬುದು ದಿಕ್ಕು ತಪ್ಪಿಸುವ, ತಪ್ಪು ಮಾಹಿತಿಯ ಸುದ್ದಿ

Social media post claim that rs 1000 to women who have ration card but factual mistakes and misleading information in the post.

By Srinivasa Mata  Published on  8 May 2023 11:23 AM GMT
ಉಚಿತ ರೇಷನ್ ಜತೆಗೆ ಮಹಿಳೆಯರಿಗೆ 1000 ರೂಪಾಯಿ ಎಂಬುದು ದಿಕ್ಕು ತಪ್ಪಿಸುವ, ತಪ್ಪು ಮಾಹಿತಿಯ ಸುದ್ದಿ

ಹೈದರಾಬಾದ್: “ಪಡಿತರ ಚೀಟಿದಾರರೇ ಗಮನಿಸಿ ಈ ತಿಂಗಳು ನಿಮಗೆ ಸಿಗಲಿದೆ ಉಚಿತ ರೇಷನ್ ಜೊತೆಗೆ 1000 ರೂಪಾಯಿ.!” - ಈ ಶೀರ್ಷಿಕೆಯಲ್ಲಿ ವೆಬ್ ಸೈಟ್ https://rishithepower.com ನಲ್ಲಿ ಸುದ್ದಿಯೊಂದು ಮೇ 7ನೇ ತಾರೀಕು ಪ್ರಕಟವಾಗಿದೆ. ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ಮಾಡಿರುವಂತೆ ಈ ಮಾಹಿತಿ ದಿಕ್ಕು ತಪ್ಪಿಸುವಂಥದ್ದು ಮತ್ತು ತಪ್ಪಾದ ಮಾಹಿತಿ ಆಗಿದೆ.

ಈ ಸುದ್ದಿಯಲ್ಲಿ ಹೀಗೆ ಹೇಳಲಾಗಿದೆ: ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಲವು ರೀತಿಯ ಸೌಲಭ್ಯಗಳು ಲಭ್ಯವಿವೆ. ಈಗ ಪಡಿತರ ಚೀಟಿದಾರರಿಗೂ ಆರ್ಥಿಕ ನೆರವು ದೊರೆಯಲಿದೆ. ನೀವು ಕೂಡ ಪಡಿತರ ಚೀಟಿ ಹೊಂದಿದ್ದರೆ, ನೀವು ಸರ್ಕಾರದಿಂದ ಪೂರ್ಣ 1000 ರೂಪಾಯಿಗಳನ್ನು ಪಡೆಯುತ್ತೀರಿ. ಇದರೊಂದಿಗೆ ಉಚಿತ ಪಡಿತರ ಸೌಲಭ್ಯವೂ ದೊರೆಯಲಿದೆ. ಈ ಯೋಜನೆಯ ಲಾಭ ಯಾರಿಗೆಲ್ಲಾ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ, ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳಿ.

ಈ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ರಾಜ್ಯದ ಮಹಿಳೆಯರಿಗೆ 1000 ರೂ. ಚುನಾವಣಾ ಪ್ರಚಾರದ ವೇಳೆ ಇದನ್ನು ಘೋಷಿಸಿದ್ದರು. ಆದರೆ, ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಘೋಷಿಸಿದ್ದರು. ಇದು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯಕವಾಗಲಿದೆ. ಹೀಗೆ ವೆಬ್ ಸೈಟ್ ನಲ್ಲಿ ಮಾಹಿತಿಯಿದೆ.




ಈ ಬಗ್ಗೆ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Fact Check

ಟೈಮ್ಸ್ ಆಫ್ ಇಂಡಿಯಾದಲ್ಲಿ ಮಾರ್ಚ್ 21,2023ರಂದು ಈ ಬಗ್ಗೆ ವರದಿ ಪ್ರಕಟಿಸಿದೆ. ಅದರ ಪ್ರಕಾರ, ಈ ಯೋಜನೆಗೆ “ಮಗಳಿರ್ ಉರುಮೈ ತೊಗೈ” ಎಂದು ಹೆಸರಿಡಲಾಗಿದೆ. ಹೀಗಂದರೆ “ಮಹಿಳೆಯರ ಹಕ್ಕಿನ ಹಣ” ಎಂದು ಅರ್ಥ. ಅರ್ಹ ಕುಟುಂಬಗಳ ಮಹಿಳಾ ಮುಖ್ಯಸ್ಥೆಯರಿಗೆ ಈ ಮೊತ್ತ ನೀಡಲಾಗುವುದು. ನೇರವಾಗಿ ಆ ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿತ್ತು.


ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿ


ತಮಿಳುನಾಡು ರಾಜ್ಯ ಬಜೆಟ್ ಮಂಡನೆ ವೇಳೆ ‌ಘೋಷಣೆ ಮಾಡಿದ ಯೋಜನೆ ಇದಾಗಿತ್ತು. ಇದಕ್ಕಾಗಿ ಏಳು ಸಾವಿರ ಕೋಟಿ ರೂಪಾಯಿ ಒಂದು ವರ್ಷಕ್ಕೆ ಬೇಕಾಗುವಂಥ ಅಂದಾಜು ಮಾಡಲಾಗಿದೆ. ಇನ್ನು ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದಾಗಿ ಅಡುಗೆ ಅನಿಲ ಬೆಲೆ ಹೆಚ್ಚಾಗಿದ್ದು, ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಅದಕ್ಕೆ ಪರಿಹಾರ ಎಂಬಂತೆ ಕುಟುಂಬದ ಮುಖ್ಯಸ್ಥೆ ಆದ ಮಹಿಳೆಗೆ ತಿಂಗಳಿಗೆ ಒಂದು ಸಾವಿರ ರೂ. ನೀಡಲಾಗುವುದು ಎನ್ನಲಾಗಿದೆ.

ಇನ್ನು ವೆಬ್ ಸೈಟ್ ನಲ್ಲಿ ನೀಡಿದ ಶೀರ್ಷಿಕೆಯಲ್ಲಾಗಲೀ ಸುದ್ದಿಯ ಮೊದಲ ಪ್ಯಾರಾಗಳಲ್ಲಾಗಲೀ ಯಾವ ರಾಜ್ಯದಲ್ಲಿ ಈ ಯೋಜನೆ ಎಂಬ ಮಾಹಿತಿಯೇ ಇಲ್ಲ. ಇನ್ನು ಎಂ. ಕರುಣಾನಿಧಿ ಅವರ ಜನ್ಮದಿನದ ಅಂಗವಾಗಿ ಜೂನ್ ಮೂರನೇ ತಾರೀಕು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕನ್ನಡದ ವೆಬ್ ಸೈಟ್ ನಲ್ಲಿ ವರದಿ ಆಗಿದೆ. ಆದರೆ ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಇತರ ವೆಬ್ ಸೈಟ್ ಗಳು ವರದಿ ಮಾಡಿರುವಂತೆ ಸೆಪ್ಟೆಂಬರ್ ಹದಿನೈದನೇ ತಾರೀಕಿನಿಂದ, ಅಂದರೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಸಿ.ಎನ್. ಅಣ್ಣಾದೊರೈ ಅವರ ಜನ್ಮ ದಿನದಂದು ಚಾಲನೆ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದ್ದಾರೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಸಹ ಹೇಳಿದ್ದಾರೆ.

Conclusion

ಕನ್ನಡದಲ್ಲಿ ಪ್ರಕಟ ಆಗಿರುವ ಈ ಸುದ್ದಿಯ ಶೀರ್ಷಿಕೆಯಲ್ಲಾಗಲೀ, ಮೊದಲ ಎರಡು ಪ್ಯಾರಾದಲ್ಲಾಗಲೀ ತಮಿಳುನಾಡು ರಾಜ್ಯ ಸರ್ಕಾರದ ಬಗ್ಗೆ ಉಲ್ಲೇಖ ಇಲ್ಲ. ಈ ಸುದ್ದಿಯನ್ನು ನೋಡಿದರೆ ಕರ್ನಾಟಕಕ್ಕೆ ಸಂಬಂಧಿಸಿದ್ದು ಎನಿಸುವಂತಿದೆ. ಈ ಯೋಜನೆಯನ್ನು ಆರಂಭಿಸುತ್ತಿರುವುದು ಕರುಣಾನಿಧಿ ಅವರ ಜನ್ಮದಿನದಂದು ಅಲ್ಲ, ಬದಲಿಗೆ ಸಿ.ಎನ್. ಅಣ್ಣಾದೊರೈ ಅವರ ಜನ್ಮದಿನದಂದು ಆಗಿದೆ. ಇನ್ನು ಫಲಾನುಭವಿಗಳ ಆಯ್ಕೆ ಹೇಗೆ ಎಂಬ ತೀರ್ಮಾನ ಸರ್ಕಾರದ ಮಟ್ಟದಲ್ಲೇ ಆಗಿಲ್ಲ. ಆದರೆ “ಪಡಿತರ ಜತೆಗೆ ಸಾವಿರ ರೂಪಾಯಿಯನ್ನು ಮಹಿಳೆಯರಿಗೆ ನೀಡಲಾಗುವುದು” ಎಂದು ಸುದ್ದಿ ಪ್ರಕಟಿಸಿರುವುದು ದಿಕ್ಕು ತಪ್ಪಿಸುವಂಥದ್ದು ಹಾಗೂ ತಪ್ಪು ಮಾಹಿತಿಯನ್ನು ಒಳಗೊಂಡಿದೆ.


Claim Review:Rs 1000 from government to women head of the family who have ration card.
Claimed By:Social Media User
Claim Reviewed By:NewsMeter
Claim Source:Facebook
Claim Fact Check:Misleading
Next Story